- ಬಿಎಲ್‌ಎ-2 ಕಾರ್ಯಾಗಾರ ಉದ್ಘಾಟಿಸಿ ಬಿಜೆಪಿ ಮುಖಂಡ ರೇಣುಕಾಚಾರ್ಯ ಆರೋಪ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸ್ವಾತಂತ್ರ್ಯಾನಂತರ ನಡೆದ ಎಲ್ಲ ಸಾರ್ವತ್ರಿಕ ಚುನಾವಣೆಗಳಲ್ಲೂ ಕಾಂಗ್ರೆಸ್ ಹಣಬಲ, ತೋಳ್ಬಲ, ಹೆಂಡದ ಬಲದಲ್ಲಿಯೇ ಮತ ಪಡೆದು ಅಧಿಕಾರಕ್ಕೆ ಬಂದು ದರ್ಪದ ಅಧಿಕಾರ ನಡೆಸಿದೆ. ಅವರು ಮತಗಳ್ಳತನ ಮಾಡಿದ್ದಾರೆಯೇ ಹೊರತು, ಬಿಜೆಪಿ ಪಕ್ಷದವರಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಶನಿವಾರ ಪಟ್ಟಣದ ಗುರು ಭವನದಲ್ಲಿ ತಾಲೂಕು ಬಿಜೆಪಿ ಏರ್ಪಡಿಸಿದ್ದ ಬಿಎಲ್‌ಎ-2 ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಈಗ ರಾಹುಲ್ ಗಾಂಧಿ ಅವರು ಸಂವಿಧಾನದ ಪುಸ್ತಕ ಹಿಡಿದು ಬಿಜೆಪಿ ಮತಗಳ್ಳತನ ಮಾಡಿದೆ ಎಂದು ಆರೋಪಿಸುತ್ತ ಓಡಾಡುತ್ತಿದ್ದಾರೆ. ಮತಗಳ್ಳತನ ಮಾಡಿ ಅಧಿಕಾರಕ್ಕೆ ಬರುವುದು ಬಿಜೆಪಿಯವರ ಜಾಯಮಾನ ಅಲ್ಲ, ರಾಷ್ಟ್ರದ ಜನತೆ ಕೇಂದ್ರದಲ್ಲಿ ಎಂದಿಗೂ ಬಿಜೆಪಿಯನ್ನೇ ಬೆಂಬಲಿಸಿದರೆ ಹಲವು ರಾಜ್ಯಗಳಲ್ಲಿ ಬಿಜೆಪಿ ಹಾಗೂ ಮೈತ್ರಿ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ಅಲ್ಲಿಯೂ ನಾವು ವಾಮಮಾರ್ಗದಿಂದ ಅಧಿಕಾರ ಹಿಡಿದಿಲ್ಲ. ಅದೇನಿದ್ದರೂ ಕಾಂಗ್ರೆಸ್‌ನವರಿಗೆ ಬಿಟ್ಟಿದ್ದು ಎಂದರು.
ಮುಂಬರುವ ಎಲ್ಲ ಚುನಾವಣೆಗಳನ್ನು ಗೆಲ್ಲಬೇಕಾದರೆ ಮೊದಲು ಬೂತ್ ಮಟ್ಟದಲ್ಲಿ ಮತದಾರರ ಹೆಸರು ಬಿಟ್ಟಿದ್ದರೆ ಸೇರಿಸುವುದು, ಮೃತಪಟ್ಟಿದ್ದರೆ ಡಿಲಿಟ್ ಮಾಡಿಸುವುದು ಹಾಗೂ ಹೊಸದಾಗಿ ಸೇರ್ಪಡೆ ಮಾಡಿಸುವುದನ್ನು ನಮ್ಮ ಪಕ್ಷದ ಬಿಎಲ್‌ಎಗಳು ಜವಾಬ್ದಾರಿಯಿಂದ ಇದನ್ನು ಮಾಡಿಸಿದರೆ ಪಕ್ಷ ಅರ್ಧ ಗೆದ್ದ ಹಾಗೆ ಎಂದರು.ಅತಿವೃಷ್ಟಿ ಪರಿಹಾರಕ್ಕೆ ಹಣ ನೀಡಿಲ್ಲ:
ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕುಡುಚಿ ಕ್ಷೇತ್ರದ ಮಾಜಿ ಶಾಸಕ ಪಿ.ರಾಜೀವ್ ಮಾತನಾಡಿ, ರಾಜ್ಯ ಸರ್ಕಾರ ಕುಡಿಯುವ ನೀರಿಗೆ ಸೆಸ್ ಮೂಲಕ ತೆರಿಗೆ ಹಾಕಿ ಸಾಮಾನ್ಯ ಜನರನ್ನು ಲೂಟಿ ಮಾಡುತ್ತಿದೆ. ಅತಿವೃಷ್ಟಿಯಿಂದ ರೈತರು ಆತಂಕಕ್ಕೆ ಒಳಗಾಗಿದ್ದು, ಅವರಿಗೂ ಪರಿಹಾರ ನೀಡಿಲ್ಲ. ಮಹಾರಾಷ್ಟ್ರ ಸರ್ಕಾರ ಅಲ್ಲಿ ಅತಿವೃಷ್ಟಿಯಿಂದ ಬೆಳೆಗಳನ್ನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ₹31 ಸಾವಿರ ಕೋಟಿ ಪರಿಹಾರ ಬಿಡುಗಡೆ ಮಾಡಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅತಿವೃಷ್ಟಿ ಪರಿಹಾರಕ್ಕೆ ಒಂದು ಪೈಸೆ ಸಹ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ:
ವಿಜಯಪುರ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಈರುಳ್ಳಿಯನ್ನು ಯಥೇಚ್ಚವಾಗಿ ಬೆಳೆದಿದ್ದರು, ಆದರೆ ಮಳೆಯಿಂದ ಈರುಳ್ಳಿ ಬೆಳೆ ಹಾಳಾಯಿತು. ಕಾಂಗ್ರೆಸ್ ಸರ್ಕಾರ ಈವರೆವಿಗೂ ಈರುಳ್ಳಿ ಬೆಳೆಗಾರರಿಗೆ ಒಂದು ಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಎಂಎಸ್‌ಪಿ ಘೋಷಣೆ ಮಾಡಿದೆ. ಆದರೆ ರಾಜ್ಯ ಸರ್ಕಾರ ಇನ್ನೂ ಖರೀದಿ ಕೇಂದ್ರಗಳನ್ನೇ ತೆರೆದಿಲ್ಲ. ಹೀಗೆ ರೈತರ ಬದುಕು ದುಸ್ತರವಾಗಿದೆ. ಆದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಹರಿಹಾಯ್ದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್ ನಾಗಪ್ಪ, ಮಂಜುನಾಥ್ ನೆಲಹೊನ್ನೆ, ನಾಗರಾಜ್ ಅರಕೆರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೆಬಾಳು ಮಾತನಾಡಿದರು. ಬಿಜೆಪಿ ಮುಖಂಡರಾದ ಜೆ.ಕೆ.ಸುರೇಶ್, ಮಾರುತಿ ನಾಯ್ಕ್, ಶಿವಪ್ರಕಾಶ್, ಬೀರಪ್ಪ, ರಂಗನಾಥ್, ಮಂಜುನಾಥ್ ಕೊನಾಯಕನಹಳ್ಳಿ ಇತರರು ಇದ್ದರು.
- - -(ಕೋಟ್) ಹೊನ್ನಾಳಿ ತಾಲೂಕಿನಲ್ಲಿ ಈಗ ರಸ್ತೆಗಳು ಮತ್ತಷ್ಟು ಗುಂಡಿ ಬಿದ್ದಿವೆ. ಅರ್ಹರ ಪಡಿತರ ಚೀಟಿ ರದ್ದು ಮಾಡುತ್ತಿದ್ದಾರೆ. ಬಿದ್ದ ಮನೆಗಳಿಗೆ ಪರಿಹಾರ ನೀಡದೇ ಇರುವುದನ್ನು ಖಂಡಿಸಿ ನ.3ರಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ತಾಲೂಕು ಬಿಜೆಪಿ ಘಟಕದಿಂದ ಹೊನ್ನಾಳಿ ಪಟ್ಟಣದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
- ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ.- - -
-25ಎಚ್.ಎಲ್.ಐ1.ಜೆಪಿಜಿ:ಹೊನ್ನಾಳಿ ಪಟ್ಟಣದ ಗುರುಭವನದಲ್ಲಿ ಶನಿವಾರ ತಾಲೂಕು ಬಿಜೆಪಿ ಏರ್ಪಡಿಸಿದ್ದ ಬಿಎಲ್‌ಎ-2 ಕಾರ್ಯಾಗಾರವನ್ನು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಉದ್ಘಾಟಿಸಿದರು.