ರಸ್ತೆಯಲ್ಲಿ ಒಲೆಯಿಂದ ಅಡುಗೆ ಮಾಡಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರ ಪ್ರತಿಭಟನೆ

KannadaprabhaNewsNetwork |  
Published : Mar 15, 2026, 01:30 AM IST
ಫೋಟೋ: 14 ಹೆಚ್‌ಎಸ್‌ಕೆ 3 ಮತ್ತು 43: ಹೊಸಕೋಟೆ ನಗರದಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಗೃಹ ಬಳಕೆ ಅಡುಗೆ ಸಿಲಿಂಡರ್ ಹೆಚ್ಚಳ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ನಡೆದ ಪ್ರತಿಭಟನೆಯಲ್ಲಿ ರಸ್ತೆಯಲ್ಲಿ ಒಲೆ ಇಟ್ಟು ಅಡುಗೆ ಮಾಡಿ ಕೇಂದ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು. | Kannada Prabha

ಸಾರಾಂಶ

ಒಂದೆಡೆ ಗೃಹ ಬಳಕೆ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದರೆ, ಮತ್ತೊಂದೆಡೆ ವಾಣಿಜ್ಯ ಸಿಲಿಂಡರ್ ಲಭ್ಯವಾಗುತ್ತಿಲ್ಲ. ಯುದ್ಧ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದ ಕಾರಣ ಸಮಸ್ಯೆ ಉಲ್ಬಣವಾಗಲು ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಹೊಸಕೋಟೆ

ಗೃಹ ಬಳಕೆಯ ಅಡುಗೆ ಅನಿಲ ಬೆಲೆ ಏರಿಸಿ ಜನರಿಗೆ ಹೊರೆ ಹೆಚ್ಚಿಸಿರುವ ಕೇಂದ್ರ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದಿಂದ ನಗರದ ಕೆಇಬಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ರಸ್ತೆಯಲ್ಲಿ ಸೌದೆ ಒಲೆ ಹಚ್ಚಿ ಅಡುಗೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಲಾಯಿತು.

ಈ ವೇಳೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಿ.ಸಿ.ಲಕ್ಷ್ಮೀ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಜನಸಾಮಾನ್ಯರು ಬಳಸುವ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಾಂಗ್ರೆಸ್ ಹಿಂದಿನಿಂದಲೂ ಬಡವರು, ರೈತರು, ಜನಸಾಮಾನ್ಯರ ಪರವಾಗಿದೆ. ದೇಶದ ಸ್ವಾತಂತ್ರ‍್ಯಕ್ಕಾಗಿ ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್‌ಗೆ ದೇಶದ ಹಿತ ಮುಖ್ಯ. ಪ್ರತಿನಿತ್ಯವೂ ಅಡುಗೆ ಮನೆಯಲ್ಲಿ ಮಹಿಳೆಯರಿಗೆ ಬೇಕಾಗಿರುವ ಅಡುಗೆ ಅನಿಲ ಏರಿಕೆಯಿಂದ ಬಡವರು, ಮಧ್ಯಮ ವರ್ಗದವರು ತತ್ತರಿಸಿದ್ದಾರೆ. ಕೂಡಲೇ ಬೆಲೆ ಏರಿಕೆ ಹಿಂಪಡೆಯಬೇಕು. ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರೇವತಿ ಅನಂತರಾಮು ಮಾತನಾಡಿ, ೨೦೧೪ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಅಚ್ಚೇ ದಿನ್ ತರುತ್ತೇವೆಂದು ಹೇಳಿಕೊಳ್ಳುತ್ತ ₹400 ಇದ್ದ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪ್ರತಿ ವರ್ಷವೂ ಹೆಚ್ಚಿಸುತ್ತಲೇ ಬರುತ್ತಿರುವುದರಿಂದ ಈಗ ₹1000ಕ್ಕೆ ಮುಟ್ಟಿಸಿದೆ. ರಂಜಾನ್ ಮಾಸದಲ್ಲಿ ಅಮೆರಿಕಾ- ಇಸ್ರೇಲ್ ಕೂಡಿಕೊಂಡು ಇರಾನ್ ಮೇಲೆ ದಾಳಿ ನಡೆಸುತ್ತಿರುವುದರಿಂದ ಅಪಾರ ಪ್ರಮಾಣದ ಹಾನಿಯಾಗಿದ್ದು ಅಮಾಯಕರು ಸಾಯುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಸಿ ಶ್ರೀಮಂತರಿಗೆ ಅನುಕೂಲ ಮಾಡುತ್ತಿದ್ದಾರೆ. ತಕ್ಷಣ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ಜಿಪಂ ಮಾಜಿ ಸದಸ್ಯೆ ಅನಂತಕುಮಾರಿ ಚಿನ್ನಪ್ಪ ಮಾತನಾಡಿ, ಒಂದೆಡೆ ಗೃಹ ಬಳಕೆ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದರೆ, ಮತ್ತೊಂದೆಡೆ ವಾಣಿಜ್ಯ ಸಿಲಿಂಡರ್ ಲಭ್ಯವಾಗುತ್ತಿಲ್ಲ. ಯುದ್ಧ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದ ಕಾರಣ ಸಮಸ್ಯೆ ಉಲ್ಬಣವಾಗಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಧಾಕೃಷ್ಣಾರೆಡ್ಡಿ, ಜಯಕಾಂತಮ್ಮ, ಪ್ರಧಾನ ಕಾರ್ಯದರ್ಶಿ ಮಾಧವಿ, ಕಾರ್ಯದರ್ಶಿ ಶಶಿಕಲಾ, ಹೊಸಕೋಟೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರಾದ ಪಾರ್ವತಮ್ಮ, ಹೇಮಾ, ಶೋಭಾ, ಮಮತಾ, ಮೀನಾಕ್ಷಿ, ಕವಿತಾ, ಶೋಭಾಗೌಡ, ವಿನುತಾ, ಲತಾರೆಡ್ಡಿ, ಆರತಿ ಹಾಜರಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಹುಲ್‌ ಗಾಂಧಿ ನಡೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಜನಪರ ಯೋಜನೆಗಳಲ್ಲಿ ಎಸ್‌. ಬಂಗಾರಪ್ಪ ಜೀವಂತ: ಸಚಿವ ಮಧು ಬಂಗಾರಪ್ಪ