ಮೂರು ಕ್ಷೇತ್ರಗಳಲ್ಲೂ ಹಿಂದುಳಿದ ವರ್ಗಗಳ ಬೆಂಬಲದಿಂದ ಕಾಂಗ್ರೆಸ್‌ಗೆ ಗೆಲುವು

KannadaprabhaNewsNetwork | Published : Nov 29, 2024 1:04 AM

ಸಾರಾಂಶ

ಉಪಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮತದಾರರೇ ನಿರ್ಣಾಯಕರಾಗಿದ್ದು, ಅವರ ಬೆಂಬಲದಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಗೆಲುವಾಗಿದೆ ಎಂದು ಹಾಸನ ಜಿಲ್ಲಾ ಕಾಂಗ್ರೆಸ್ ಒಬಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯಿತಿ ಕೆಡಿಪಿ ಸದಸ್ಯ ಮಹೇಶ್ ಕಬ್ಬಾಳು ತಿಳಿಸಿದ್ದಾರೆ. ಚನ್ನಪಟ್ಟಣದಲ್ಲಿ ಒಕ್ಕಲಿಗರು ಒಂದು ಲಕ್ಷಕ್ಕೂ ಹೆಚ್ಚಿದ್ದರೂ ಸಹ, ಮುಸ್ಲಿಂ, ದಲಿತ, ಕುರುಬ, ತಿಗಳ, ನೇಕಾರ, ಬಲಿಜ, ಮಡಿವಾಳ, ಬೆಸ್ತ ಹೀಗೆ ಅಹಿಂದ ಮತಗಳು ಒಂದು ಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿವೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಉಪಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮತದಾರರೇ ನಿರ್ಣಾಯಕರಾಗಿದ್ದು, ಅವರ ಬೆಂಬಲದಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಗೆಲುವಾಗಿದೆ ಎಂದು ಹಾಸನ ಜಿಲ್ಲಾ ಕಾಂಗ್ರೆಸ್ ಒಬಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯಿತಿ ಕೆಡಿಪಿ ಸದಸ್ಯ ಮಹೇಶ್ ಕಬ್ಬಾಳು ತಿಳಿಸಿದ್ದಾರೆ.

ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಹಿಂದುಳಿದ ವರ್ಗದ ನಾಯಕ ಡಿ.ದೇವರಾಜ ಅರಸು ನಂತರ ರಾಜ್ಯದಲ್ಲಿ ಐದು ವರ್ಷ ಮುಖ್ಯಮಂತ್ರಿ ಹುದ್ದೆ ಪೂರೈಸಿದ ಏಕೈಕ ನಾಯಕ ಸಿದ್ದರಾಮಯ್ಯನವರು ಅವರ ನೇತೃತ್ವದಲ್ಲಿ ನಡೆದ ಉಪಚುನಾವಣೆಯ ಫಲಿತಾಂಶಗಳ ಫಲಿಸಿವೆ. ಮೂರು ಕ್ಷೇತ್ರಗಳಲ್ಲಿಯೂ ಅಹಿಂದ ಮತದಾರರು ಕಾಂಗ್ರೆಸ್ ಪಕ್ಷದಿಂದ ದೂರವಾಗಿಲ್ಲವೆಂಬುದನ್ನು ಫಲಿತಾಂಶ ಸ್ಪಷ್ಟಪಡಿಸಿದೆ. ಮೂರು ಕ್ಷೇತ್ರಗಳು ಸಹ ಅಹಿಂದ ಮತದಾರರೇ ಗಣನೀಯ ಸಂಖ್ಯೆಯಲ್ಲಿರುವ ಕ್ಷೇತ್ರಗಳು. ಚನ್ನಪಟ್ಟಣದಲ್ಲಿ ಒಕ್ಕಲಿಗರು ಒಂದು ಲಕ್ಷಕ್ಕೂ ಹೆಚ್ಚಿದ್ದರೂ ಸಹ, ಮುಸ್ಲಿಂ, ದಲಿತ, ಕುರುಬ, ತಿಗಳ, ನೇಕಾರ, ಬಲಿಜ, ಮಡಿವಾಳ, ಬೆಸ್ತ ಹೀಗೆ ಅಹಿಂದ ಮತಗಳು ಒಂದು ಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿವೆ.

ಅದೇ ರೀತಿಯಲ್ಲಿ ಶಿಗ್ಗಾಂವಿಯಲ್ಲಿ ಮುಸ್ಲಿಂ ಹಾಗೂ ಕುರುಬ ಸೇರಿದರೆ ೧.೩೦ ಲಕ್ಷದಷ್ಟಿವೆ. ದಲಿತರು ಹಾಗೂ ಇತರೆ ಹಿಂದುಳಿದ ವರ್ಗಗಳು ಇಲ್ಲಿವೆ. ಸಂಡೂರಿನಲ್ಲಿ ೭೦ ಸಾವಿರಕ್ಕೂ ಹೆಚ್ಚು ಎಸ್‌ಟಿ ಮತದಾರರು ಇದ್ದಾರೆ. ಕುರುಬ, ಪರಿಶಿಷ್ಟ ಜಾತಿ, ಇತರೆ ಹಿಂದುಳಿದ ವರ್ಗಗಳು ಗಣನೀಯ ಪ್ರಮಾಣದಲ್ಲಿದ್ದಾರೆ. ಎಲ್ಲಾ ಅಹಿಂದ ವರ್ಗಗಳು ಕಾಂಗ್ರೆಸ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲಿಸಿರುವುದು ಕಂಡು ಬರುತ್ತದೆ. ಅದರಲ್ಲೂ ಮುಸ್ಲಿಂ ಮತ್ತು ಕುರುಬರ ಮತಗಳು ಚದುರಿಲ್ಲ. ಸಿಎಂ ಸಿದ್ದರಾಮಯ್ಯ ವಿರುದ್ಧ ನಡೆದಿರುವ ಷಡ್ಯಂತ್ರ ಅಹಿಂದ ವರ್ಗಗಳನ್ನು ಒಗ್ಗೂಡಿಸಿದೆ. ಇದು ಕೇವಲ ಪ್ರತಿಪಕ್ಷಗಳಿಗೆ ಮಾತ್ರವಲ್ಲ ಕಾಂಗ್ರೆಸ್ ಹೈಕಮಾಂಡ್‌ಗೂ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿರುವುದು ಸುಳ್ಳೇನು ಅಲ್ಲ.

ಡಿ.೫ರಂದು ಹಾಸನ ಜಿಲ್ಲೆಯಲ್ಲಿ ಸಿದ್ದರಾಮಯ್ಯನವರ ಸ್ವಾಭಿಮಾನಿ ಸಮಾವೇಶವನ್ನು ಏರ್ಪಡಿಸಿದ್ದು, ರಾಜ್ಯದ ನಾನಾ ಭಾಗಗಳಿಂದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಹಿಂದ ಶಕ್ತಿಯನ್ನು ತೋರಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

Share this article