ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ಮುಖಂಡರು
ಕನ್ನಡಪ್ರಭ ವಾರ್ತೆ ಪಾಂಡವಪುರಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೂಲಕ ಮತಗಳ್ಳತನ ನಡೆಸಿ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್‍ಯಕರ್ತರು ಕೆಪಿಸಿಸಿ ಪ್ರಧಾನ ಕಾರ್‍ಯದರ್ಶಿ ಎಚ್.ತ್ಯಾಗರಾಜು ನೇತೃತ್ವದಲ್ಲಿ ಜಾಗೃತಿ ಜಾಥಾ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ರಾಷ್ಟ್ರನಾಯಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ ಎಂಬ ಘೋಷಣೆಯೊಂದಿಗೆ ಜಾಗೃತಿ ಜಾಥಾ ನಡೆಸಿದರು.ಕೆಪಿಸಿಸಿ ಪ್ರಧಾನ ಕಾರ್‍ಯದರ್ಶಿ ಎಚ್.ತ್ಯಾಗರಾಜು ಮಾತನಾಡಿ, ಚುನಾವಣಾ ಆಯೋಗವನ್ನು ಕೈಬೊಂಬೆಯಾಗಿಸಿ ಕೊಂಡಿರುವ ಕೇಂದ್ರ ಸರ್ಕಾರ ಮತಗಳ್ಳತನ ಮಾಡಿ ಅಧಿಕಾರಕ್ಕೆ ಬಂದಿದೆ. ಆ ಮೂಲಕ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಆಶಯಗಳನ್ನು ಕಗ್ಗೊಲೆ ಮಾಡಿದೆ ಎಂದು ಕಿಡಿಕಾರಿದರು.
ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್‌ಗಾಂಧಿ ಹೋರಾಟ ಆರಂಭಿಸಿದ್ದಾರೆ. ಅವರ ಹೋರಾಟಕ್ಕೆ ಪಾಂಡವಪುರ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್‍ಯಕರ್ತರು, ಮುಖಂಡರ ಸಂಪೂರ್ಣವಾದ ಬೆಂಬಲವಿದ್ದು ಎಲ್ಲರೂ ಸಹ ಅವರೊಟ್ಟಿಗೆ ನಿಲ್ಲುತ್ತೇವೆ ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶದಲ್ಲಿ ನಡೆದಿರುವ ಮತಗಳ್ಳತನದ ವಿರುದ್ಧ ಹೋರಾಟ ನಡೆಸಲು ಪಕ್ಷದ ಹೈಕಮಾಂಡ್ ನೀಡಿರುವ ಸೂಚನೆಯಂತೆ ಪಟ್ಟಣದಲ್ಲಿ ಎಲ್ಲಾ ಕಾಂಗ್ರೆಸ್ ಪಕ್ಷದ ಕಾರ್‍ಯಕರ್ತರು ಜಾಗೃತಿ ಜಾಥಾ ನಡೆಸುತ್ತಿದ್ದೇವೆ ಎಂದರು. ಟಿಎಪಿಸಿಎಂಎಸ್ ನಿರ್ದೇಶಕ ಶ್ರೀಕಾಂತ್, ಮುಖಂಡರಾದ ಸಿ.ಆರ್.ರಮೇಶ್, ಡಿ.ಹುಚ್ಚೇಗೌಡ, ಕಣಿವೆರಾಮು, ಹರಳಹಳ್ಳಿ ಲೋಕೇಶ್, ಸಿದ್ದಲಿಂಗಯ್ಯ, ಚಿಕ್ಕಾಡೆ ಮಹೇಶ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಭರತ್‌ಪಟೇಲ್, ಚಂದ್ರಶೇಖರ್, ಪುರಸಭೆ ಸದಸ್ಯರಾದ ಉಮಾಶಂಕರ್, ಜಯಲಕ್ಷ್ಮಮ್ಮ, ಮಹಮದ್ ಹನೀಫ್, ಚಿಕ್ಕಣ್ಣ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ದಯಾನಂದ್, ಬಾಬು, ರಮೇಶ್, ದೊಡ್ಡವೆಂಕಟಯ್ಯ ಸೇರಿದಂತೆ ಹಲವರು ಇದ್ದರು.