ಕನ್ನಡಪ್ರಭ ವಾರ್ತೆ ಪಾಂಡವಪುರ
ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಾಂಗ್ರೆಸ್ ಕಾರ್ಯಕರ್ತರನ್ನು ಸಂಪೂರ್ಣ ಕಡೆಗಣಿಸುತ್ತಿದ್ದಾರೆ. ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಇದ್ದು ಇಲ್ಲದಂತಾಗಿದೆ. ಕೂಡಲೇ ರೈತಸಂಘದ ಮೈತ್ರಿಯಿಂದ ಹೊರಬಂದು ಕಾಂಗ್ರೆಸ್ ಪಕ್ಷದಿಂದ ಸಮರ್ಥ ನಾಯಕನನ್ನು ಘೋಷಣೆ ಮಾಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು.ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾ ಉಪಾಧ್ಯಕ್ಷ ವೆಂಕಟರಮಣೆಗೌಡ (ಸ್ಟಾರ್ ಚಂದ್ರು) ಹಾಗೂ ವಿಧಾನ ಪರಷತ್ ಸದಸ್ಯ ದಿನೇಶ್ ಗೂಳಿಗೌಡ ಮತ್ತು ಪಕ್ಷದ ಜಿಲ್ಲಾಧ್ಯಕ್ಷ ಸಿ.ಡಿ,ಗಂಗಾಧರ್ ಅವರ ಎದುರು ಕಾರ್ಯಕರ್ತರು ತಮ್ಮ ನೋವು ತೋಡಿಕೊಂಡರು.
ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರದ ನಾಮಿನಿ ಸೇರಿದಂತೆ ಸರ್ಕಾರದ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡುವವರು ಹಾಗೂ ಗರಿ ಗರಿ ಬಟ್ಟೆ ಧರಿಸಿ ನಾಯಕರ ಮುಂದೆ ನಿಲ್ಲುವವರಿಗೆ ಮಣೆ ಹಾಕಲಾಗುತ್ತಿದೆ ಎಂದರು.ಸರ್ಕಾರವಿದ್ದರೂ ಪ್ರಥಮ ದರ್ಜೆ ಗುತ್ತಿಗೆದಾರರಿಗೆ ಯಾವುದೇ ತುಂಡು ಗುತ್ತಿಗೆ ಸಿಗುತ್ತಿಲ್ಲ. ಕೂಡಲೇ ಸಮರ್ಥ ನಾಯಕರನ್ನು ಘೋಷಿಸುವ ಜತೆಗೆ ನಿಷ್ಠಾವಂತರಿಗೆ ಸೌಲಭ್ಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಮನ್ಮುಲ್ ಮಾಜಿ ನಿರ್ದೇಶಕ ಕಾಡೆನಹಳ್ಳಿ ರಾಮಚಂದ್ರು ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಗಳು ಎದುರಾಗಲಿದೆ. ಪಕ್ಷವನ್ನು ಬಲಪಡಿಸಿ ಮುಂಬರುವ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ಕ್ಷೇತ್ರಕ್ಕೆ ನಾಯಕರು ಭೇಟಿ ನೀಡಿ ಗ್ರಾಮಗಳ ಮಟ್ಟದಲ್ಲಿ ಪಕ್ಷ ಬಲಪಡಿಸಬೇಕು ಎಂದರು.ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದು, ಅವುಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಲು ಸರ್ಕಾರ ಯಶಸ್ಸು ಕಂಡಿದೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿ ಬೆನ್ನುಲುಬಾಗಿ ನಿಂತಿದೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳು ಸೇರಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಯಾವುದೇ ಜಾತಿ, ಪಕ್ಷ ಭೇದವಿಲ್ಲದೆ ಅವರ ಆರ್ಥಿಕ ಸಬಲತೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಗೆ ನೀಡುತ್ತಿದೆ ಎಂದರು.ಈ ವೇಳೆ ಕಾಂಗ್ರೆಸ್ ಕಿಸಾನ್ ಘಟಕದ ತಾಲೂಕು ಅಧ್ಯಕ್ಷ ಸಿ.ಆರ್.ರಮೇಶ್, ಮುಖಂಡರಾದ ಪ್ರೊ.ಡಿ.ಕೆ.ದೇವೇಗೌಡ, ಚಿಕ್ಕಾಡೆ ಮಹೇಶ್, ಸಿದ್ದಲಿಂಗಯ್ಯ, ವನರಾಜ್, ಸಿ.ಎಂ.ಚಂದ್ರಶೇಖರ್, ಟೌನ್ ಕಾಂಗ್ರೆಸ್ ಅಧ್ಯಕ್ಷ ಕೆ.ಉಮಾಶಂಕರ್, ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಎನ್.ಕೃಷ್ಣೇಗೌಡ, ಬಿ.ಜೆ.ಸ್ವಾಮಿ, ಚಿಕ್ಕಬ್ಯಾಡರಹಳ್ಳಿ ಧರ್ಮಣ್ಣ, ಪೊಲೀಸ್ ಸತ್ಯಪ್ಪ, ಕೆ.ಬಿ.ರಾಮು, ಅಂತನಹಳ್ಳಿ ಬಸವರಾಜು, ಡಿಎಸ್ಎಸ್ ಮುಖಂಡ ಡಿ.ಕೆ.ಅಂಕಯ್ಯ, ಪ್ರವೀಣ್, ಹರಳಹಳ್ಳಿ ಲೋಕೇಶ್, ಎಸ್.ಟಿ.ದೊಡ್ಡವೆಂಕಟಯ್ಯ, ಭರತ್ ಪಟೇಲ್ ಇತರರು ಉಪಸ್ಥಿತರಿದ್ದರು.