ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಅಮ್ಜಾದ್ ಪಟೇಲ್, ಉಪಾಧ್ಯಕ್ಷೆಯಾಗಿ ಬಿಜೆಪಿಯ ಅಶ್ವಿನಿ ಆಯ್ಕೆ

KannadaprabhaNewsNetwork |  
Published : Aug 22, 2024, 12:45 AM IST
21ಕೆಪಿಎಲ್21 ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜಾದ್ ಪಟೇಲ್, ಉಪಾಧ್ಯಕ್ಷೆ ಅಶ್ವಿನಿ ಗದುಗಿನಮಠ ಅವರ ಮೆರವಣಿಗೆ 21ಕೆಪಿಎಲ್22 ಅಮ್ಜಾದ್ ಪಟೇಲ್21ಕೆಪಿಎಲ್23 ಅಶ್ವಿನಿ | Kannada Prabha

ಸಾರಾಂಶ

ಕೊಪ್ಪಳ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಅಮ್ಜಾದ್ ಪಟೇಲ್, ಉಪಾಧ್ಯಕ್ಷೆಯಾಗಿ ಬಿಜೆಪಿಯ ಅಶ್ವಿನಿ ಭರತ ಗದುಗಿನಮಠ ಕಾಂಗ್ರೆಸ್, ಜೆಡಿಎಸ್‌ನ 25 ಸದಸ್ಯರ ಬೆಂಬಲದೊಂದಿಗೆ ಆಯ್ಕೆಯಾಗಿದ್ದಾರೆ.

ತಮ್ಮ ಪಕ್ಷದವರೇ ಗೆದ್ದರೂ ಸೋತ ಬಿಜೆಪಿ

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಆಡಳಿತ

ತಮ್ಮ ಪಕ್ಷದ ಗೆದ್ದ ಅಭ್ಯರ್ಥಿ ವಿರುದ್ಧ ಬಿಜೆಪಿಯಿಂದ ಕಾನೂನು ಹೋರಾಟ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೊಪ್ಪಳ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಅಮ್ಜಾದ್ ಪಟೇಲ್, ಉಪಾಧ್ಯಕ್ಷೆಯಾಗಿ ಬಿಜೆಪಿಯ ಅಶ್ವಿನಿ ಭರತ ಗದುಗಿನಮಠ ಕಾಂಗ್ರೆಸ್, ಜೆಡಿಎಸ್‌ನ 25 ಸದಸ್ಯರ ಬೆಂಬಲದೊಂದಿಗೆ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಚುನಾವಣೆ ಪ್ರಕ್ರಿಯೆ ನಡೆಸಿ, ಆಯ್ಕೆಯನ್ನು ಘೋಷಣೆ ಮಾಡಿದರು.

ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಸೋಮಣ್ಣ ಹಳ್ಳಿ ಮತ್ತು ದೇವಕ್ಕ ಕಂದಾರಿ ತಲಾ 7 ಮತ ಪಡೆದು ಪರಾಭವಗೊಂಡಿದ್ದಾರೆ.

13 ತಿಂಗಳ ಅವಧಿಗೆ ನಡೆದ ಚುನಾವಣೆ ಇದಾಗಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್‌ನ ಅಮ್ಜಾದ್ ಪಟೇಲ್ ಆಯ್ಕೆಯಾಗಿದ್ದಾರೆ. ಆದರೆ, ಸಂಸದ ಸಂಗಣ್ಣ ಕರಡಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದಾಗ ಬೆಂಬಲಿಸಿದ ಬಿಜೆಪಿಯ ಸದಸ್ಯೆ ಅಶ್ವಿನಿ ಭರತ ಗದುಗಿನಮಠ ಅವರನ್ನು ಉಪಾಧ್ಯಕ್ಷೆಯಾಗಿ ಆಯ್ಕೆ ಮಾಡಿರುವುದು ವಿಶೇಷವಾಗಿದೆ.

ಆಯ್ಕೆಯಾದ ಅಮ್ಜಾದ್ ಪಟೇಲ್ ಹಾಗೂ ಅಶ್ವಿನಿ ಭರತ ಗದುಗಿನಮಠ ಕಾಂಗ್ರೆಸ್‌ನ 14, ಜೆಡಿಎಸ್ 2, ಪಕ್ಷೇತರ ನಾಲ್ಕು, ಬಿಜೆಪಿಯ 3 ಹಾಗೂ ಶಾಸಕ, ಸಂಸದರ ಮತ ಸೇರಿ ತಲಾ 25 ಮತ ಪಡೆದಿದ್ದಾರೆ.

ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಸೋಮಣ್ಣ ಹಳ್ಳಿ ಹಾಗೂ ದೇವಕ್ಕ ಕಂದಾರಿ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರ ಮತ ಸೇರಿ ಏಳು ಮತ ಪಡೆದಿದ್ದಾರೆ.

33 ವರ್ಷದ ಬಳಿಕ:

ಕೊಪ್ಪಳ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ 33 ವರ್ಷದ ಬಳಿ ಅಲ್ಪಸಂಖ್ಯಾತ ಸಮುದಾಯದ(ಮುಸ್ಲಿಂ) ಅಮ್ಜಾದ್ ಪಟೇಲ್ ಆಯ್ಕೆಯಾಗಿದ್ದಾರೆ. 1991ರಲ್ಲಿ ಪುರಸಭೆ ಇದ್ದಾಗ ಮುಸ್ಲಿಂ ಸಮಾಜದ ಎಸ್.ಎಚ್. ಖಾದ್ರಿ ಆಯ್ಕೆಯಾಗಿದ್ದರು. ಅದಾದ ಬಳಿಕ ಈಗ ಅಮ್ಜಾದ್ ಪಟೇಲ್ ಆಯ್ಕೆಯಾಗಿದ್ದಾರೆ.

ನಾಲ್ಕುಬಾರಿ ಗೆಲುವು:

ಅಮ್ಜಾದ್ ಪಟೇಲ್ ನಾಲ್ಕು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 2001ರಲ್ಲಿ ಸ್ಪರ್ಧೆ ಮಾಡಿ ಮೊದಲ ಬಾರಿ ಜಯ ಸಾಧಿಸಿರುವ ಅಮ್ಜಾದ್ ಪಟೇಲ್, ನಿರಂತರವಾಗಿ ಆಯ್ಕೆಯಾಗುತ್ತಿದ್ದಾರೆ. ಕಳೆದ 3 ಅವಧಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅಮ್ಜಾದ್ ಪಟೇಲ್ ಮೊದಲ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ವಿಪ್‌ ಉಲ್ಲಂಘನೆ:

ಕಾಂಗ್ರೆಸ್ ಬೆಂಬಲದೊಂದಿಗೆ ಉಪಾಧ್ಯಕ್ಷೆಯಾದ ಅಶ್ವಿನಿ ಗದುಗಿನಮಠ ಅವರಿಗೆ ವಿಪ್ ನೀಡಿದ್ದರೂ ಸಹ ಕ್ಯಾರೆ ಎನ್ನದೆ ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದು ಅಲ್ಲದೆ, ತಾನು ಸಹ ಕಾಂಗ್ರೆಸ್ ಬೆಂಬಲದೊಂದಿಗೆ ಆಯ್ಕೆಯಾಗುವ ಮೂಲಕ ಬಿಜೆಪಿ ವಿಪ್ ಉಲ್ಲಂಘನೆ ಮಾಡಿದ್ದಾರೆ. ಇದಲ್ಲದೇ ಇನ್ನೂ ಇಬ್ಬರು ಬಿಜೆಪಿ ಸದಸ್ಯರು ವಿಪ್‌ ಉಲ್ಲಂಘಿಸಿದ್ದಾರೆ.

ಕಾನೂನು ಹೋರಾಟ:

ತಮ್ಮ ಪಕ್ಷದ ಸದಸ್ಯೆ ಅಶ್ವಿನಿ ಗದುಗಿನಮಠ ಜಯಗಳಿಸಿದ್ದರೂ ಸಹ ಬಿಜೆಪಿ ಪಕ್ಷಾಂತರ ಕಾಯ್ದೆ ಅಡಿ ಉಪಾಧ್ಯಕ್ಷೆ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಹೇಳಿಕೊಂಡಿದೆ. ಈ ಹಿಂದಿನಂತೆ ರಾಜಕಾರಣ ಮಾಡುವ ಪ್ರಶ್ನೆಯೇ ಇಲ್ಲ. ಈ ಬಾರಿ ಕಾನೂನು ಹೋರಾಟ ಮಾಡಿಯೇ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ವಿಜಯೋತ್ಸವ:

ಕೊಪ್ಪಳ ನಗರಸಭೆ ಅಧ್ಯಕ್ಷರಾಗಿ ಅಮ್ಜಾದ್ ಪಟೇಲ್, ಉಪಾಧ್ಯಕ್ಷೆಯಾಗಿ ಅಶ್ವಿನಿ ಗದುಗಿನಮಠ ಆಯ್ಕೆಯಾಗುತ್ತಿದ್ದಂತೆ ನಗರಸಭೆ ಎದುರು ವಿಜಯೋತ್ಸವ ಆಚರಿಸಲಾಯಿತು. ಕಾರ್ಯಕರ್ತರು ಪಟಾಕಿ, ಸಿಡಿಸಿ, ಸಂಭ್ರಮಿಸಿದ್ದಲ್ಲದೆ ನಗರದ ಜವಾಹರ ರಸ್ತೆಯುದ್ದಕ್ಕೂ ಮೆರವಣಿಗೆ ಮಾಡಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ