ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಗೆ ಪ್ರಕ್ರೀಯೆ ನಿಧಾನಗತಿಯಲ್ಲಿ ಸಾಗಿದ್ದು, ತಡರಾತ್ರಿ ವರೆಗಿನ ... ಸುತ್ತಿನಲ್ಲೂ ಬಿಜೆಪಿಯ ಎಸ್.ವಿ. ಸಂಕನೂರ ಮುನ್ನೆಡೆ ಸಾಧಿಸಿರುವುದನ್ನು ಅವಲೋಕಿಸಿದರೆ ಸಂಕನೂರ ಗೆಲುವು ಸಾಧಿಸುವುದು ಬಹುತೇಕ ಖಚಿತ ಎನ್ನುವುತ್ತಿವೆ ಅಂಕಿ-ಅಂಶಗಳು.
ಶಿವಾನಂದ ಗೊಂಬಿ/ ಬಸವರಾಜ ಹಿರೇಮಠ
ಹುಬ್ಬಳ್ಳಿ/ಧಾರವಾಡ
ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಗೆ ಪ್ರಕ್ರೀಯೆ ನಿಧಾನಗತಿಯಲ್ಲಿ ಸಾಗಿದ್ದು, ತಡರಾತ್ರಿ ವರೆಗಿನ ... ಸುತ್ತಿನಲ್ಲೂ ಬಿಜೆಪಿಯ ಎಸ್.ವಿ. ಸಂಕನೂರ ಮುನ್ನೆಡೆ ಸಾಧಿಸಿರುವುದನ್ನು ಅವಲೋಕಿಸಿದರೆ ಸಂಕನೂರ ಗೆಲುವು ಸಾಧಿಸುವುದು ಬಹುತೇಕ ಖಚಿತ ಎನ್ನುವುತ್ತಿವೆ ಅಂಕಿ-ಅಂಶಗಳು.
ಈ ಸಲ ರಾಜ್ಯದಲ್ಲಿ ಸರ್ಕಾರ ನಮ್ಮದೇ (ಕಾಂಗ್ರೆಸ್) ಇದೆ ಹೇಗಾದರೂ ಮಾಡಿ ಕ್ಷೇತ್ರವನ್ನು ಮತ್ತೆ ಕೈ ವಶ ಮಾಡಿಕೊಳ್ಳಬೇಕೆಂಬ ಕಾಂಗ್ರೆಸ್ ಕನಸನ್ನು ಈ ಫಲಿತಾಂಶ ಬಹುತೇಕ ಭಗ್ನಗೊಳಿಸಿದೆ.
ಹಿಂದಿನ ಕೈ ಭದ್ರಕೋಟೆ:
ವಿಧಾನಪರಿಷತ್‌ನ್ನು ಚಿಂತಕರ ಚಾವಡಿ ಎಂದೇ ಕರೆಯುತ್ತಾರೆ. ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಪ್ರತಿ ಆರು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಇದು 11ನೆಯ ಚುನಾವಣೆ. ಹಿಂದಿನ 10 ಚುನಾವಣೆಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ಸಿನ ವೈ.ಎಸ್. ಪಾಟೀಲ, ನಾಲ್ಕು ಸಲ ಎಚ್.ಕೆ. ಪಾಟೀಲ ಗೆಲವು ಸಾಧಿಸಿದ್ದರು. ಹೀಗಾಗಿ ಈ ಕ್ಷೇತ್ರ ಕಾಂಗ್ರೆಸ್ಸಿನ ಭದ್ರಕೋಟೆಯಾಗಿತ್ತು. 2008ರಲ್ಲಿ ನಡೆದ ಚುನಾವಣೆಯಲ್ಲಿ ಇದೇ ಮೋಹನ ಲಿಂಬಿಕಾಯಿ ಅವರೇ ಎಚ್.ಕೆ. ಪಾಟೀಲ ಅವರನ್ನು ಸೋಲಿಸುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿಯ ಕಮಲ ಅರಳಿಸಿದ್ದರು. ಆಗ ಯಡಿಯೂರಪ್ಪ ಅಲೆ ಇತ್ತು ಎಂಬುದು ಬೇರೆ ಮಾತು. ಅದಾದ ಬಳಿಕ 2014, 2020ರಲ್ಲಿ ಎಸ್.ವಿ.ಸಂಕನೂರ ಗೆಲುವಿನ ನಗೆ ಬೀರುತ್ತ ಬಂದಿದ್ದಾರೆ.
ಮುಂಚಿತ ಟಿಕೆಟ್ ಘೋಷಣೆ:
ಈ ನಡುವೆ ಈ ಸಲ ಸರ್ಕಾರವೂ ನಮ್ಮದೇ ಇದೆ. ಅಭ್ಯರ್ಥಿಗೂ ಪ್ರಚಾರಕ್ಕೆ ಹೆಚ್ಚು ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಕಾಂಗ್ರೆಸ್ ಎಂಟು ತಿಂಗಳು ಮುಂಚಿತವಾಗಿಯೇ ಮೋಹನ ಲಿಂಬಿಕಾಯಿ ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಈ ಮೂಲಕ ಮತ್ತೆ ಕೈತೆಕ್ಕೆಗೆ ಕ್ಷೇತ್ರವನ್ನು ತೆಗೆದುಕೊಳ್ಳಬೇಕೆಂಬ ಇರಾದೆ ಇತ್ತು. ಕಾಂಗ್ರೆಸ್ ಲಿಂಬಿಕಾಯಿ ಅವರ ಹೆಸರು ಅಖೈರುಗೊಳಿಸುತ್ತಿದ್ದಂತೆ ಬಿಜೆಪಿಯೂ ಯಾವುದೇ ಬದಲಾವಣೆಗೆ ತಲೆಕೆಡಿಸಿಕೊಳ್ಳದೇ ಸಂಕನೂರ ಅವರನ್ನೇ ಮೂರನೆಯ ಬಾರಿಗೆ ಕಣಕ್ಕಿಳಿಸಿತು.
ಬಿಜೆಪಿಗೆ ಪ್ಲಸ್:
ಚುನಾವಣೆ ಘೋಷಣೆವರೆಗೂ ಎರಡೂ ಪಕ್ಷಗಳು ಪ್ರಚಾರದ ಬಗ್ಗೆ ಅಷ್ಟೊಂದು ಗಂಭೀರವಾಗಿರಲಿಲ್ಲ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕ್ಷೇತ್ರ ರಂಗೇರಿತ್ತು. ರಾಜ್ಯದಲ್ಲಿ ಸರ್ಕಾರ ಕೂಡ ಇಲ್ಲ. ಜತೆಗೆ ಶಾಸಕರ ಸಂಖ್ಯೆಯೂ ಅಷ್ಟಕಷ್ಟೇ. ಗೆಲ್ಲುವುದು ಹೇಗೆ ಎಂಬ ಪ್ರಶ್ನೆ ಬಿಜೆಪಿಗರಲ್ಲಿ ಬಂದಿದ್ದು ನಿಜ. ಆದರೂ ಧೃತಿಗೇಡದೇ ಇದ್ದ ಶಾಸಕರೇ, ಕಾರ್ಯಕರ್ತರ ಪಡೆಯನ್ನಿಷ್ಟುಕೊಂಡು ಪ್ರಚಾರ ಮಾಡಿದ್ದು ಬಿಜೆಪಿಗೆ ಪ್ಲಸ್ ಆಯಿತು. ಜತೆಗೆ ಪ್ರತಿ ಮತದಾರರನ್ನು ಕಾರ್ಯಕರ್ತರು ಭೇಟಿ ಮಾಡಿ ತಮಗೆ ಮತ ಹಾಕಬೇಕು ಎಂಬುದರ ಜತೆಗೆ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಿದ್ದು ಇಂದು ಗೆಲುವಿನ ಗಡಿಗೆ ತಂದು ನಿಲ್ಲಿಸಿದೆ.
ಕೈ ಕಮಾಲ್ ಟುಸ್:
ಇನ್ನು ಕಾಂಗ್ರೆಸ್ಸಿಗರಲ್ಲಿ ಸರ್ಕಾರದ ತಮ್ಮದೇ ಇದೆ. ಕ್ಷೇತ್ರದ 23 ಶಾಸಕರ ಪೈಕಿ 17 ಜನರು ತಮ್ಮ ವರೇ ಇದ್ದಾರೆ. ಗ್ಯಾರಂಟಿ ಯೋಜನೆಗಳಂಥ ಜನಪರ ಕಾರ್ಯಗಳಿಂದ ಈ ಸಲ ಗೆಲುವು ಖಚಿತ ಎಂಬ ಅತಿಯಾದ ಅತ್ಮವಿಶ್ವಾಸ ಕಾಂಗ್ರೆಸ್ಸಿಗೆ ಮುಳುವಾದಂತಾಯಿತು.
ಹಾಗಂತ ಮುಖಂಡರು ಪ್ರಚಾರ ಮಾಡಲೇ ಇಲ್ಲ ಅಂತೇನೂ ಇಲ್ಲ. ಹಿರಿಯ ಮುಖಂಡರಾದ ಎಚ್.ಕೆ. ಪಾಟೀಲ, ಸಚಿವರಾದ ಸತೀಶ ಜಾರಕಿಹೊಳಿ, ಸಂತೋಷ ಲಾಡ್ ಅವರಂತಹ ಘಟಾನುಘಟಿಗಳು ಪ್ರಚಾರ ನಡೆಸಿದರು. ಆದರೆ, ತಳಮಟ್ಟದಲ್ಲಿ ಮತದಾರರನ್ನು ನೇರವಾಗಿ ಸಂಪರ್ಕಿಸುವ ಪ್ರಯತ್ನ ಕಾಂಗ್ರೆಸ್ಸಿನಲ್ಲಿ ಅಷ್ಟೊಂದು ಕಂಡು ಬರಲಿಲ್ಲ ಎಂಬ ಮಾತು ಕಾಂಗ್ರೆಸ್ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಲಿಂಬಿಕಾಯಿ ಅವರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಎಡವಿದರು ಎಂಬ ಮಾತು ಕೂಡ ಕೇಳಿ ಬರುತ್ತಿವೆ.
ಒಟ್ಟಿನಲ್ಲಿ ಕ್ಷೇತ್ರವನ್ನು ಮತ್ತೆ ಕೈವಶಕ್ಕೆ ತೆಗೆದುಕೊಳ್ಳಬೇಕೆಂಬ ಕಾಂಗ್ರೆಸ್ ಕನಸು ನನಸಾಗಲೇ ಇಲ್ಲ ಎಂಬುದನ್ನು ಮತ ಎಣಿಕೆಯಲ್ಲಿನ ಏರುಪೇರು ಒತ್ತಿ ಹೇಳುತ್ತಿದೆ. ಜತೆಗೆ ಗ್ಯಾರಂಟಿ ಯೋಜನೆಗಳಿಂದ ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸದಲ್ಲಿರುವ ಕಾಂಗ್ರೆಸ್ಸಿಗೆ ಈ ಚುನಾವಣೆಯ ಫಲಿತಾಂಶ ಎಚ್ಚರಿಕೆ ಗಂಟೆಯೂ ಆಗಿದೆ. ಗಮನ ಸೆಳೆದ ಜೆನ್‌ಝೀ!
ಇನ್ನು ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ಹೋರಾಟ ನಡೆಸಿದ್ದ ಕಾಂತಕುಮಾರ ಕೂಡ ಈ ಚುನಾವಣೆ ಕಣದಲ್ಲಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೊರತುಪಡಿಸಿ ಕಣದಲ್ಲಿದ್ದ ಉಳಿದ ಅಭ್ಯರ್ಥಿಗಳ ಪೈಕಿ ಇವರು ಕೊಂಚ ಹೆಚ್ಚು ಮತ ಪಡೆದರು. ಮೂರನೆಯ ಸ್ಥಾನಕ್ಕೆ ಬರುವ ಮೂಲಕ ಗಮನ ಸೆಳೆದಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.