ಕಾಂಗ್ರೆಸ್ಸಿನವರ ರಾಹುಲ್‌ ಲಾಂಚ್‌ ಪ್ರತಿ ಬಾರಿ ವಿಫಲ

KannadaprabhaNewsNetwork | Published : Apr 13, 2024 1:06 AM

ಸಾರಾಂಶ

ಪ್ರತಿ ಸಾರಿ ಕಾಂಗ್ರೆಸ್ ಲಾಂಚ್‌ ಮಾಡುತ್ತಿರುವ ಪ್ರೊಡಕ್ಟ್‌ ಸರಿಯಾಗಿಲ್ಲ. ಯಾವಾಗ ಅವರು ರಾಹುಲ್ ಗಾಂಧಿಯನ್ನು ಲಾಂಚ್ ಮಾಡುತ್ತಾರೆಯೋ ಅವಾಗ ಬಿಜೆಪಿಗೆ ಹೆಚ್ಚು ಸೀಟ್ ಬಂದಿವೆ.

ಹುಬ್ಬಳ್ಳಿ:

ಕಾಂಗ್ರೆಸ್ ನಾಯಕರು ಪ್ರತಿ ಲೋಕಸಭಾ ಚುನಾವಣೆ ವೇಳೆ ರಾಹುಲ್ ಗಾಂಧಿಗೆ ಸೂಟ್ ಹೋಲಿಸಿ ಲಾಂಚ್ ಮಾಡಲು ಹೋಗುತ್ತಾರೆ. ಆದರೆ, ಪ್ರತಿ ಬಾರಿಯೂ ಅದು ವಿಫಲವಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಸಾರಿ ಕಾಂಗ್ರೆಸ್ ಲಾಂಚ್‌ ಮಾಡುತ್ತಿರುವ ಪ್ರೊಡಕ್ಟ್‌ ಸರಿಯಾಗಿಲ್ಲ. ಯಾವಾಗ ಅವರು ರಾಹುಲ್ ಗಾಂಧಿಯನ್ನು ಲಾಂಚ್ ಮಾಡುತ್ತಾರೆಯೋ ಅವಾಗ ಬಿಜೆಪಿಗೆ ಹೆಚ್ಚು ಸೀಟ್ ಬಂದಿವೆ. ಕಳೆದ ಬಾರಿ ಬಿಜೆಪಿ 303 ಸ್ಥಾನಗಳಲ್ಲಿ ಗೆಲವು ಸಾಧಿಸಿತ್ತು. ಈ ಬಾರಿ 375 ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಪ್ರಿಯಾಂಕ ಖರ್ಗೆ ಅವರು ನರೇಂದ್ರ ಮೋದಿ ಪ್ರಧಾನಿಮಂತ್ರಿಗಳಲ್ಲ, ಪ್ರಚಾರಮಂತ್ರಿ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜೋಶಿ, ಪ್ರಿಯಾಂಕ ಕೇವಲ ಪ್ರಚಾರದ ತೆವಲಿಗಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯ ಕಾಂಗ್ರೆಸ್ ಪಕ್ಷವು ಇದೀಗ ಯಾವ ಸ್ಥಿತಿಯಲ್ಲಿದೆ. ಅಧ್ಯಕ್ಷರಾಗಲು ಅವರು ಏನೆಲ್ಲ ಮಾಡಿದ್ದಾರೆ ಎಂಬುದನ್ನು ಅರಿತುಕೊಳ್ಳಲಿ. ಪ್ರಧಾನಿಗಳ ಬಗ್ಗೆ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದು ಹರಿಹಾಯ್ದರು.

ನಾನು ಸ್ಟಾರ್ ಪ್ರಚಾರಕ, ನನ್ನನ್ನು ಕಾಂಗ್ರೆಸ್ ಪಕ್ಷ ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ, ಕಾಂಗ್ರೆಸ್ಸಿನಲ್ಲಿ ಮೊದಲಿಂದಲೂ ಎಲ್ಲವೂ ಸರಿಯಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಡುವೆ ಒಳಜಗಳವಿದೆ. ಹಾಗಾಗಿ ಇಂತಹ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲಿ ಮೊದಲಿಂದಲೂ ಕೇಳಿ ಬರುತ್ತಿವೆ. ಈ ಕುರಿತು ನಾನು ಹೆಚ್ಚಿಗೆ ಮಾತನಾಡುವುದಿಲ್ಲ ಎಂದರು.

15ರಂದು ನಾಮಪತ್ರ ಸಲ್ಲಿಕೆ:

ಏ.15ರಂದು ಬೆಳಗ್ಗೆ 10 ಗಂಟೆಗೆ ಧಾರವಾಡದ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾರ್ಲಾಪಣೆ ಮಾಡಿ ಅದ್ಧೂರಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆ ಇದೆ. ಕ್ಷೇತ್ರದಲ್ಲೂ ನನ್ನ ಪರವಾಗಿ ಪ್ರಚಾರಕ್ಕೆ ಹಲವು ರಾಷ್ಟ್ರೀಯ, ರಾಜ್ಯಮಟ್ಟದ ನಾಯಕರು ಬರಲಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುವುದಾಗಿ ತಿಳಿಸಿದರು.

ಫಕೀರ ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆ ಬಗ್ಗೆ ಕೇಳಿದ ಪ್ರಶ್ನೆಗೆ, ಶ್ರೀಗಳು ನೀಡಿರುವ ಹೇಳಿಕೆಗಳ ಕುರಿತು ನಾನು ಯಾವುದೇ ರೀತಿಯಲ್ಲಿ ಉತ್ತರ ನೀಡುವುದಿಲ್ಲ. ಅವರ ವಿಷಯ ಬಿಟ್ಟು ಬೇರೆ ಕೇಳಿ ಎಂದರು.

Share this article