- ಮೊಬೈಲ್ ನೆಟ್ ವರ್ಕ್ ಗಾಗಿ ಅಗತ್ಯ,ತುರ್ತು ಸೇವೆಗೆ ಪ್ರವಾಸಿಗರ,ಗ್ರಾಮಸ್ಥರ ಪರದಾಟ । ಬೇಕಿದೆ ಮೊಬೈಲ್ ಟವರ್.
ಕನ್ನಡಪ್ರಭ ವಾರ್ತೆ ಶೃಂಗೇರಿ
ಶೃಂಗೇರಿಯಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿರುವ ಸಿರಿಮನೆ ಫಾಲ್ಸ್ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಜಲಪಾತ ವೀಕ್ಷಣೆಗೆ ವ್ಯವಸ್ಥಿತ ಮೆಟ್ಟಿಲುಗಳಿವೆ. ಶೌಚಾಲಯ, ವಿಶ್ರಾಂತಿ ಕೊಠಡಿ, ಸ್ನಾನ ಕೊಠಡಿ,ವೀಕ್ಷಣಾ ಗೋಪುರ, ಅಂಗಡಿ,ಹೋಟೇಲು ಮಳಿಗೆಗಳು ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳಿವೆ.ಆದರೆ ಇಲ್ಲಿಗೆ ಅಗತ್ಯವಾಗಿರುವ ಮೊಬೈಲ್ ಟವರ್ ಮಾತ್ರ ಇಲ್ಲದೆ ಬರುವ ಪ್ರವಾಸಿಗರಿಗೆ, ಸುತ್ತಮುತ್ತಲ ಹಳ್ಳಿ, ಕುಗ್ರಾಮಗಳ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮೊಬೈಲ್ ಟವರ್ ಗಳಿದ್ದರೂ ಸಿರಿಮನೆ ಗ್ರಾಮ ಪ್ರಸಿದ್ಧ ಸಿರಿಮನೆ ಫಾಲ್ಸ್ ಹೊಂದಿರುವ ಪ್ರವಾಸಿ ತಾಣವಾಗಿದ್ದರೂ ಇಲ್ಲಿಗೊಂದು ಮೊಬೈಲ್ ಟವರ್ ನಿರ್ಮಾಣಕ್ಕೆ ಯಾವುದೇ ಇಲಾಖೆಯಾಗಲೀ, ಜನಪ್ರತಿನಿದಿಗಳಾಗಲೀ, ಸರ್ಕಾರವಾಗಲೀ ಮುಂದಾಗದಿರುವುದು ಅಚ್ಚರಿಯೇ ಸರಿ.
ಯಡದಳ್ಳಿ ಗ್ರಾಮ ವ್ಯಾಪ್ತಿಗೆ ಒಳಪಡುವ ಸಿರಿಮನೆ ಗ್ರಾಮದ ಸುತ್ತಮುತ್ತ ಮಘೆಬೈಲು,ಮಾಲ್ ಸಂಪಿಗೆ, ಸಿಂದೋಡಿ, ಕಿತ್ಲೆಮನೆ ಕೊಡಿಗೆ, ಹುಲುಗಾರುಬೈಲು ಸೇರಿದಂತೆ ಅನೇಕ ಗ್ರಾಮಗಳಿವೆ. ಗ್ರಾಮಸ್ಥರು ಹಲವು ವರ್ಷಗಳಿಂದ ಮೊಬೈಲ್ ಟವರ್ ನಿರ್ಮಾಣಕ್ಕಾಗಿ ಮನವಿ ಮಾಡುತ್ತಲೇ ಬರುತ್ತಿದ್ದಾರೆ. ಸುತ್ತಮುತ್ತಲ ಅನೇಕ ಹಳ್ಳಿಗಳಿಗೆ ಓಡಾಡಲು ಸರಿಯಾದ ರಸ್ತೆಯೂ ಇಲ್ಲ. ಸೇತುವೆಗಳು ಇಲ್ಲ. ಕಾಲುದಾರಿ, ಹಳ್ಳ, ಕಾಲು ಸಂಕಗಳನ್ನು ದಾಟಿ ಓಡಾಡುವ ದಯನೀಯ ಸ್ಥಿತಿ.ಆದರೂ ತುರ್ತು ಸೇವೆಗೆ ಮೊಬೈಲ್ ನೆಟವರ್ಕ್ ಇಲ್ಲದೇ ಪರದಾಡುವ ಪರಿಸ್ಥಿತಿ ಇವರದು.
ಸಮೀಪದ ಕಿಗ್ಗಾ ಗ್ರಾಮವಿದ್ದು ಇದೂ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಮಲೆನಾಡಿನ ಪ್ರಸಿದ್ಧ ಮಳೆ ದೇವರು ಎಂದೇ ಪ್ರಖ್ಯಾತಿಯ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯಕ್ಕೂ ವಿವಿಧೆಡೆಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ.ಇದೂ ಕೂಡ ನೆಟ್ ವರ್ಕ್ ಸಮಸ್ಯೆಯಿಂದ ಹೊರತಾಗಿಲ್ಲ. ಇಲ್ಲಿ ನಾಡಕಚೇರಿ, ನೆಮ್ಮದಿ ಕೇಂದ್ರ,ಗ್ರಾಮ ಒನ್ ಕೇಂದ್ರಗಳಿದ್ದು ಅಗತ್ಯ ಕೆಲಸ ಕಾರ್ಯಗಳಿಗೆ ಬರುವ ಜನರು ಒಟಿಪಿಗಾಗಿ ಪರದಾಡಬೇಕಿದೆ. ನಾಲ್ಕೈದು ಕಿಲೋ ಮೀಟರ್ ದೂರದ ನೆಮ್ಮಾರು,ಗಂಡಘಟ್ಟ ಗ್ರಾಮಗಳಲ್ಲಿರುವ ಟವರ್ ಗಳಿಂದ ಒಮ್ಮೊಮ್ಮೊ ಸಿಗ್ನಲ್ ಸಿಗುವುದೇ ಪುಣ್ಯವಾಗಿದೆ.
ಮೊಬೈಲ್ ಟವರ್ ನಿರ್ಮಾಣ ಮಾಡಿ.
-ಸುನಿಲ್ ಸಿರಿಮನೆ
27 ಶ್ರೀ ಚಿತ್ರ 2,2 (ಎ)......ಶೃಂಗೇರಿ ತಾಲೂಕಿನಲ್ಲಿರುವ ಪ್ರಸಿದ್ಧ ಸಿರಿಮನೆ ಫಾಲ್ಸ್ ಹೊಂದಿರುವ ಸಿರಿಮನೆ ಗ್ರಾಮ.
27 ಶ್ರೀ ಚಿತ್ರ 4-ಸುನಿಲ್ ಸಿರಿಮನೆ.