ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮಠ ಮಾನ್ಯಗಳು ಮನುಷ್ಯರಲ್ಲಿ ಸಾಕ್ಷರತೆಯ ಜೊತೆಗೆ ನೈತಿಕತೆಯ ಪ್ರಜ್ಞೆಯನ್ನು ಮೂಡಿಸಿ, ಸುಸಂಸ್ಕೃತ ಜೀವನ ನಡೆಸಲು ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುತ್ತವೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.ನಗರದ ಮೂಡ್ಲುಪುರ-ಉತ್ತುವಳ್ಳಿ ಮುಖ್ಯರಸ್ತೆಯಲ್ಲಿರುವ ಹರವೆ ಶಾಖಾ ಮಠದ ನೂತನ ಕಟ್ಟಡವನ್ನು ಉದ್ಘಾಟಿಸಿ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಪ್ರಸ್ತುತ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಲು ದೇವಸ್ಥಾನಗಳಷ್ಟೇ ಮಠ ಮಾನ್ಯಗಳು ಕಾರಣವಾಗಿವೆ ಎಂದರು. ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ ಶೇ.೭೭ರಷ್ಟಾಗಲು ಮಠ ಮಾನ್ಯಗಳೇ ಕಾರಣ. ಆದರೂ ಇನ್ನು ಶೇ.೨೩ರಷ್ಟು ಅನಕ್ಷರತೆ ಇರುವುದು ವಿಷಾದಕರ, ಯಾವುದೇ ಮಠ ಮಾನ್ಯಗಳು ಇರಲಿ ಅವು ಮನುಷ್ಯರ ಕಲ್ಯಾಣವನ್ನು ಬಯಸುತ್ತವೆ ಎಂದರು.
ಭಕ್ತರು ಮತ್ತು ಸಾರ್ವಜನಿಕರೊಡನೆ ನಿಕಟ ಸಂಪರ್ಕ ಇಟ್ಟುಕೊಂಡಾಗ ಮಾತ್ರ ಮಠಗಳು ಅಭಿವೃದ್ಧಿ ಹೊಂದಲು ಸಾಧ್ಯ, ಈ ನಿಟ್ಟಿನಲ್ಲಿ ಹರವೆ ಮಠದ ಗುರುಪರಂಪರೆ ನಡೆದುಕೊಂಡು ಬಂದಿದ್ದು, ಇದಕ್ಕೆ ಈ ಉದ್ಘಾಟನಾ ಸಮಾರಂಭವೇ ಸಾಕ್ಷಿ ಎಂದರು. ಒಂದು ದೇವಸ್ಥಾನಕ್ಕೆ ಹೋದಾಗ ಯಾವ ರೀತಿಯ ಪೂಜ್ಯ ಭಾವನೆ ಬರುತ್ತದೆಯೋ ಅದೇ ಭಾವನೆಯನ್ನು ಮಠ ಮಾನ್ಯಗಳಿಗೆ ಹೋದಾಗಲೂ ಬೆಳೆಸಿಕೊಂಡರೆ ಸುಸಂಸ್ಕೃತ ಮನುಷ್ಯನಾಗಲು ಸಾಧ್ಯ ಎಂದರು. ಇದು ಯಡಿಯೂರು ಸಿದ್ದಲಿಂಗೇಶ್ವರರು ಜನ್ಮತಾಳಿದ ಪುಣ್ಯ ಭೂಮಿ, ಅನೇಕ ಐತಿಹಾಸಿಕ ಸ್ಥಳಗಳು, ಅರಣ್ಯ ಪ್ರದೇಶವನ್ನು ಹೊಂದಿರುವ ಈ ಜಿಲ್ಲೆಯಲ್ಲಿ ಸಾಕಷ್ಟು ಮಠ ಮಾನ್ಯಗಳು ಇದ್ದು, ಅವು ಮನುಷ್ಯರನ್ನು ಜಾಗೃತಗೊಳಿಸುತ್ತಿವೆ. ಅದರಂತೆ ಹರವೆ ವಿರಕ್ತ ಮಠದ ಈ ಶಾಖಾ ಮಠವು ಧಾರ್ಮಿಕ ಮತ್ತು ಆಧ್ಯಾತ್ಮಕ ಕೇಂದ್ರವಾಗಿ ಬೆಳೆಯಲಿ ಎದು ಶುಭ ಹಾರೈಸಿದರು.ದಿವ್ಯ ಸಾನ್ನಿಧ್ಯ ವಹಿಸಿದ್ದ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ ಮಠಗಳು, ಮರದಂತೆ, ನದಿಯಂತೆ ಎಲ್ಲರಿಗೂ ಆಶ್ರಯ ನೀಡಿ, ಜ್ಞಾನದ ಬೆಳಕನ್ನು ನೀಡುತ್ತವೆ, ಯಾರನ್ನು ಬರಬೇಡಿ ಎಂದು ಹೇಳುವುದಿಲ್ಲ, ಶಿಕ್ಷಣದ ಜೊತೆಗೆ ಜ್ಞಾನದ ಬೆಳಕನ್ನು ಮಠಗಳು ನೀಡುತ್ತಿವೆ ಎಂದರು. ಸಮಾಜದಲ್ಲಿ ಸೇವೆಯನ್ನು ಮಠಗಳು ನಿರಂತರವಾಗಿ ಮಾಡಿಕೊಂಡು ಬಂದಿವೆ. ಮಠಗಳು ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರದೆ ವಿವಿಧ ಕ್ಷೇತ್ರಗಳಲ್ಲಿ ತಮ್ಮು ಸೇವೆಯನ್ನು ಗುರುತಿಸಿಕೊಂಡಿವೆ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಇರುವಷ್ಟು ಮಠಗಳು ಬೇರೆ ಜಿಲ್ಲೆಯಲ್ಲಿ ಕಾಣಲು ಸಾಧ್ಯವಿಲ್ಲ ಎಂದರು.
ಸ್ವಾಮೀಜಿಗಳು ಮನುಷ್ಯರಲ್ಲಿ ಅಂತರಂಗದ ಕೃಷಿ ಮಾಡಬೇಕು, ಶರಣರು ಕೃಷಿಗೆ ಹೆಚ್ಚು ಮಹತ್ವ ಕೊಟ್ಟಿದ್ದರು, ಅಂತರಂಗದ ಕೃಷಿ ಮಾಡಿ, ಮನಸ್ಸಿನ ಭಾವನೆಗಳನ್ನು ಒಗ್ಗೂಡಿಸುವಲ್ಲಿ ಸ್ವಾಮಿಜೀಗಳ ಪಾತ್ರ ಮಹತ್ತರ ಎಂದರು. ಸಿದ್ದಲಿಂಗೇಶ್ವರರಿಗೆ ಜನ್ಮ ಭೂಮಿ ಹರದನಹಳ್ಳಿಯಾದರೆ, ಕರ್ಮ ಭೂಮಿ ಎಡೆಯೂರು ಇಂತಹ ಪವಿತ್ರ ಭೂಮಿಯಲ್ಲಿ ಹರವೆ ವಿರಕ್ತ ಮಠವು ಇಂದು ಹೊಸ ಹೆಜ್ಜೆಯಿಟ್ಟಿದ್ದು, ಶಾಖಾ ಮಠದ ಮೂಲಕ ಜನಮಾನಸದಲ್ಲಿ ಮತ್ತಷ್ಟು ಉಳಿಯುವಂತಾಗಲಿ ಎಂದರು. ದಾಸೋಹ ಭವನಕ್ಕೆ ಗುದ್ದಲಿಪೂಜೆ ನೆರವೇರಿಸಿ, ಸಮಾರಂಭದ ಆಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಪುಟ್ಟರಂಗಶೆಟ್ಡಿ ಮಾತನಾಡಿ, ಬಸವಾದಿ ಶರಣರ ವಚನಗಳ ಮಹತ್ವವನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಂಡರೆ ಒಳ್ಳೆಯ ಮನುಷ್ಯರಾಗಬಹದು ಎಂದರು.ದಾಸೋಹ ಭವನಕ್ಕೆ ೧೦ ಲಕ್ಷ ನೀಡಿದ್ದೇನೆ, ಮುಂದೆ ಮುಖ್ಯಮಂತ್ರಿಯವರಲ್ಲಿ ಮಾತನಾಡಿ ₹೬೦ ಲಕ್ಷಗಳನ್ನು ಕೊಡಿಸುವ ಭರವಸೆ ನೀಡಿದರು. ಮಠ ಮಾನ್ಯಗಳು ಮಾಡುವ ಸಾಮಾಜಿಕ ಕಾರ್ಯಗಳಿಗೆ ಸದಾ ನನ್ನ ಸಹಕಾರ ಇದೆ ಎಂದರು. ಸಮಾರಂಭವನ್ನು ಉದ್ಘಾಟಿಸಿದ ಶಾಸಕ ಎಚ್.ಎಂ. ಗಣೇಶ್‌ಪ್ರಸಾದ್ ಮಾತನಾಡಿ, ಎಲ್ಲರೂ ಒಗ್ಗೂಡಿ ಸಮಾಜ ಕಟ್ಡಬೇಕಾಗಿದೆ, ಇಂದಿನ ಸಂಸತ್, ವಿಧಾನಸಭೆಗೆ ಬಸವಣ್ಣನವರ ಅನುಭವ ಮಂಟಪವೇ ಸ್ಫೂರ್ತಿ, ಬೆಳಗಾವಿಯ ಸುವರ್ಣ ಸೌಧದಲ್ಲಿ ಅನುಭವ ಮಂಟಪವನ್ನು ತೈಲವರ್ಣದಲ್ಲಿ ಮೂಡಿಸಲಾಗಿದೆ ಎಂದರು.
ಜಿಲ್ಲಾ ಕೇಂದ್ರದಲ್ಲಿ ಬಸವ ಭವನಕ್ಕೆ ಶೀಘ್ರದಲ್ಲೇ ಸಿಎಂ ₹೩ ಕೋಟಿ ಮಂಜೂರು ಮಾಡಿಸಿ, ಎಲ್ಲರ ಜೊತೆಗೂಡಿ ಪೂರ್ಣಗೊಳಿಸುವ ಭರವಸೆ ನೀಡಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಉಪನ್ಯಾಸ ನೀಡಿ ಬಸವಾದಿ ಶರಣರ ತತ್ವದಂತೆ, ಕಾಯಕವಿಲ್ಲದೆ ಬದುಕಿಲ್ಲ. ಸ್ವತಃ ಸಿದ್ದಗಂಗಾ ಶ್ರೀಗಳು ಕಾಯಕ ಮಾಡುತ್ತಿದ್ದರು. ಮಠವು ಜ್ಞಾನ ದಾಸೋಹ ಮಠವಾಗಬೇಕು. ಲಿಂಗಾಯತ ಮಠಗಳು ಹಸಿದವರಿಗೆ ಅನ್ನ ನೀಡುತ್ತಿವೆ ಎಂದರು.ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕರಾದ ಆರ್.ನರೇಂದ್ರ, ಮರಿತಿಬ್ಬೇಗೌಡ, ಪರಿಮಳಾ ನಾಗಪ್ಪ, ಸಿ.ಎಸ್.ನಿರಂಜನಕುಮಾರ್, ಎಸ್. ಬಾಲರಾಜು, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಉದ್ಯಮಿ ಎಸ್.ನಿಶಾಂತ್ ಮಾತನಾಡಿದರು. ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ ಪ್ರಸ್ತಾವಿಸಿದರು. ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಮುಖಂಡರಾದ ಎಂ.ರಾಮಚಂದ್ರ, ವೈ.ಸಿ.ನಾಗೇಂದ್ರ, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ವಿವಿಧ ಮಠಾಧೀಶರು, ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು. ಬಿ.ಎಸ್. ವಿನಯ್ ನಿರೂಪಿಸಿ, ಬಿ.ಕೆ. ರವಿಕುಮರ್ ಸ್ವಾಗತಿಸಿದರು.