ಬೆಂಗಳೂರು ಪೇಯಿಂಗ್‌ ಗೆಸ್ಟ್‌ ಕೇಂದ್ರ ನಡೆಸಲು ಬಿಬಿಎಂಪಿಯ ಒಪ್ಪಿಗೆ ಕಡ್ಡಾಯ : ಹೊಸ ನಿಯಮ

KannadaprabhaNewsNetwork | Updated : Aug 06 2024, 10:10 AM IST
ಪಿಜಿ | Kannada Prabha

ಪಿಜಿಗೆ ಯುವತಿಯೊಬ್ಬಳ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಬಿಬಿಎಂಪಿ ಪಿಜಿಗಳಿಗೆ ಹೊಸ ನಿಯಮ ರೂಪಿಸಿದೆ. ಪಿಜಿ ಕೇಂದ್ರ ತೆರೆಯಲು ಬಿಬಿಎಂಪಿ ಒಪ್ಪಿಗೆ ಕಡ್ಡಾಯಗೊಳಿಸಲಾಗಿದೆ.

 ಬೆಂಗಳೂರು :  ಬೆಂಗಳೂರು ವ್ಯಾಪ್ತಿಯಲ್ಲಿನ ಪೇಯಿಂಗ್‌ ಗೆಸ್ಟ್‌ (ಪಿಜಿ) ಕೇಂದ್ರಗಳ ಮೇಲೆ ನಿಗಾವಹಿಸಲು ಹಾಗೂ ಅಲ್ಲಿ ಸುರಕ್ಷತೆ ಕಾಪಾಡಲು ಹೊಸ ನಿಯಮಗಳನ್ನು ರೂಪಿಸಿರುವ ಬಿಬಿಎಂಪಿ, ಶೀಘ್ರದಲ್ಲಿ ಈ ಕುರಿತು ಆದೇಶ ಹೊರಡಿಸಲಿದೆ.

ಕಳೆದ ತಿಂಗಳು ಕೋರಮಂಗಲ ಪಿಜಿಯಲ್ಲಿ ನಡೆದಿದ್ದ ಯುವತಿ ಕೊಲೆ ಪ್ರಕರಣದ ನಂತರ ಪಿಜಿಗಳಲ್ಲಿ ಸುರಕ್ಷತೆ ಕಾಪಾಡಲು ಪೊಲೀಸ್‌ ಇಲಾಖೆಯೊಂದಿಗೆ ಚರ್ಚಿಸಿ ಹೊಸ ನಿಯಮಗಳನ್ನು ರೂಪಿಸಿದ್ದು, ಸರ್ಕಾರದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಹೊಸ ಪಿಜಿ ಆರಂಭ ಹಾಗೂ ಈಗಾಗಲೇ ಇರುವ ಪಿಜಿಗಳು ಬಿಬಿಎಂಪಿಯಿಂದ ಕಡ್ಡಾಯವಾಗಿ ಉದ್ದಿಮೆ ಪರವಾನಗಿ ಪಡೆಯಬೇಕು. ಪಿಜಿಗೆ ಸೇರುವ ಪ್ರತಿಯೊಬ್ಬರ ಗುರುತಿನ ಚೀಟಿ ಮತ್ತು ಇತ್ತೀಚಿನ ಭಾವಚಿತ್ರ ಪಡೆಯಬೇಕು. ರಕ್ತ ಸಂಬಂಧಿಕರು, ಸ್ನೇಹಿತರ ವಿವರ ಹಾಗೂ ಮೊಬೈಲ್‌ ಸಂಖ್ಯೆಯನ್ನು ಪಡೆಯಬೇಕು. ಪಿಜಿಯಲ್ಲಿರುವವರ ಭೇಟಿಗೆ ಬರುವ ಪ್ರತಿಯೊಬ್ಬರ ವಿವರಗಳನ್ನು ಪಡೆದು, ಪ್ರತ್ಯೇಕವಾಗಿ ದಾಖಲಿಸಬೇಕು. ಪಿಜಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಅಗ್ನಿ ಅನಾಹುತದಂತಹ ಸಂದರ್ಭದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಮಾದಕ ವಸ್ತುಗಳ ಸೇವನೆ, ಸಂಗ್ರಹ ಹಾಗೂ ಕಾನೂನುಬಾಹಿರ ಚಟುವಟಿಕೆಗೆ ಅವಕಾಶ ನೀಡಬಾರದು.

ಸ್ಥಳೀಯ ಪೊಲೀಸ್‌ ಠಾಣೆ, ತುರ್ತು ಸ್ಪಂದನೆ, ವೈದ್ಯಕೀಯ ಸೇವೆ, ಸೈಬರ್‌ ಅಪರಾಧ ಸೇರಿದಂತೆ ಅಗತ್ಯ ಸೇವೆಗಳ ದೂರವಾಗಿ ಸಂಖ್ಯೆಗಳನ್ನು ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕು. ಪಿಜಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಸೇರಿದಂತೆ ಇನ್ನಿತರರ ಸಮಗ್ರ ಮಾಹಿತಿಯನ್ನು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ವಿದೇಶಿ ಪ್ರಜೆಗಳು ಪಿಜಿಯಲ್ಲಿ ನೆಲೆಸಿದ್ದಲ್ಲಿ ಅವರ ಮಾಹಿತಿಯನ್ನು ಕಡ್ಡಾಯವಾಗಿ ಸ್ಥಳೀಯ ಪೊಲೀಸ್‌ ಠಾಣೆಗೆ ನೀಡಬೇಕು ಎಂದು ನೂತನ ನಿಯಮಗಳಲ್ಲಿ ತಿಳಿಸಲಾಗಿದೆ.

ಪೊಲೀಸರಿಂದಲೂ ಪರಿಶೀಲನೆ

ಸ್ಥಳೀಯ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿನ ಪಿಜಿಗಳಿಗೆ ತಿಂಗಳಲ್ಲಿ ಒಂದು ದಿನ ತೆರಳಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸುವಂತೆಯೂ ನಿಯಮದಲ್ಲಿ ಸೇರ್ಪಡೆ ಮಾಡಲಾಗುತ್ತದೆ. ನಿಯಮಗಳು ಪ್ರಕಟಗೊಂಡ ನಂತರವೂ ಪಿಜಿಗಳಲ್ಲಿ ಸುರಕ್ಷತಾ ಕ್ರಮ, ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಹಾಗೂ ಅಹಿತಕರ ಘಟನೆ ಸಂಭವಿಸಿದರೆ ಆಯಾ ಪಿಜಿ ಮಾಲೀಕರು ಅಥವಾ ಅದರ ವ್ಯವಸ್ಥಾಪಕರೇ ನೇರ ಹೊಣೆಯಾಗಲಿದ್ದಾರೆ ಎಂದು ನಿಯಮದಲ್ಲಿ ಉಲ್ಲೇಖಿಸಲಾಗಿದೆ.