ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನಮ್ಮ ಜೀವನಕ್ಕೆ ಆಸರೆಯಾಗಿರುವ ನೀರನ್ನು ಸಂರಕ್ಷಿಸುವುದು ಸರ್ಕಾರ ಸೇರಿ ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.ತಾಲೂಕಿನ ಜಾಲಿಕೊಪ್ಪ ಗ್ರಾಮದ ತಪೋ ಕ್ಷೇತ್ರದ ಶಿವಾನಂದ ಗುರೂಜಿ ಸಾನ್ನಿಧ್ಯದಲ್ಲಿ ನಿರ್ಮಲ ಮಲಪ್ರಭಾ ನದಿ ಅಭಿಯಾನ ಹೆಸರಿನಡಿ ವಿವಿಧ ಕನ್ನಡಪರ ಸಂಘಟನೆ, ಸಾಮಾಜಿಕ ಕಾರ್ಯಕರ್ತರು, ವೈದ್ಯರು, ವಕೀಲರ ಸಂಘ, ಕಲಾವಿದರ ಬಳಗ, ಎಲ್ಲ ಶಾಲೆಗಳ ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು, ಭಾಗದ ಸಮಸ್ತ ರೈತರು ಕೂಡಿಕೊಂಡು ತ್ಯಾಜ್ಯದಿಂದ ಕಲುಷಿತಗೊಂಡಿದ್ದ ನದಿ ದಡವನ್ನು ಭಾನುವಾರ ಶುಚಿಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಇಡೀ ಉತ್ತರ ಕರ್ನಾಟಕ ಜನರ ಜೀವ ನಾಡಿ ಆಗಿರುವ ಮಲಪ್ರಭಾ ನದಿಯು ಈ ಭಾಗದ ಜನರ ಕಾಮದೇನು, ಕಲ್ಪವೃಕ್ಷವಾಗಿದೆ. ಮಲಪ್ರಭಾ ನದಿ ದಡವು ಸಾಕಷ್ಟು ವರ್ಷಗಳಿಂದ ಪ್ಲಾಸ್ಟಿಕ್ ವಸ್ತುಗಳು, ಮೀನು ಮಾರಾಟಗಾರರ ತ್ಯಾಜ್ಯ ವಸ್ತುಗಳಿಂದ ಕಲುಷಿತಗೊಳ್ಳುತ್ತಿರುವುದು ವಿಷಾದದ ಸಂಗತಿಯಾಗಿದೆ. ಅಲ್ಲದೆ ಮೊದಲೇ ಬರಗಾಲ, ಮಳೆ ಇಲ್ಲ, ಕುಡಿಯುವ ನೀರಿಗೆ ಪರದಾಡುವ ದುಸ್ಥಿತಿ ಇದೆ. ಇದನ್ನು ಮನಗಂಡು ಶಿವಾನಂದ ಗುರೂಜಿ ಮಾರ್ಗದರ್ಶನದಲ್ಲಿ ಅಭಿಯಾನ ನಡೆಸಿ ಶುಚಿಗೊಳಿಸಲಾಗಿದೆ. ಈ ಅಭಿಯಾನಕ್ಕೆ ಕೈ ಜೋಡಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ತಿಳಿಸಿ, ಎಲ್ಲರೂ ಶುಚಿತ್ವ ಕಾಪಾಡಲು ಮನವಿ ಮಾಡಿದರು.
ತಪೋ ಕ್ಷೇತ್ರದ ಶಿವಾನಂದ ಗುರೂಜಿ ನೇತೃತ್ವ ವಹಿಸಿ ಮಾತನಾಡಿ, ಸುತ್ತ-ಮುತ್ತಲಿನ ಪರಿಸರ ಶುಚಿಯಾಗಿಟ್ಟುಕೊಳ್ಳುವುದರಿಂದ ಆರೋಗ್ಯಭಾಗ್ಯ ಲಭಿಸುತ್ತದೆ. ಮಲಪ್ರಭಾ ನದಿಯು ಈ ಉಳಿವು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನದಿಗೆ ಯಾರೂ ಏನನ್ನು ಎಸೆಯದೇ ಶುಚಿಯಾಗಿಟ್ಟುಕೊಳ್ಳಬೇಕು ಎಂದರು.ನದಿ ದಡದಲ್ಲಿ ಅಧಿಕ ಪ್ರಮಾಣದಲ್ಲಿ ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ವಸ್ತುಗಳು, ಮೀನಿನ ತ್ಯಾಜ್ಯ, ಮಾಂಸದ ತುಕಡಿ, ಹಣ್ಣು, ಕಾಯಿ, ಬಟ್ಟೆ, ದೇವರ ಹಳೆಯ ಫೋಟೋಗಳನ್ನು ತೆಗೆದು ಹಾಕಿದರು. ನದಿ ದಡದ ಸುತ್ತುವರೆದು ತ್ಯಾಜ್ಯ ಪೂರ್ಣ ಪ್ರಮಾಣದಲ್ಲಿ ಸಂಗ್ರಹಿಸಿ ಸುಟ್ಟು ಹಾಕಿದರು.ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಆರ್.ಮೆಳವಂಕಿ, ಮಡಿವಾಳಪ್ಪ ಹೋಟಿ, ಮಲ್ಲಪ್ಪ ಮುರಗೋಡ, ಗ್ರಾಮ ಪಂಚಾಯತಿ ಅಧ್ಯಕ್ಷ ಯಲಪ್ಪ ಹುಲಗಣ್ಣವರ, ಡಾ.ಸಿ.ಬಿ.ಗಣಾಚಾರಿ, ಎ.ಬಿ.ಪಾಟೀಲ, ಮಹಾದೇವ ಕಲಭಾಂವಿ, ಸುರೇಶ ಹೊಳಿ, ಮಲ್ಲಯ್ಯಾ ಪೂಜೇರ, ಮಡಿವಾಳಪ್ಪ ಹಟ್ಟಿ, ಗುರು ಅಂಗಡಿ, ಉದಯ ಕೃಷ್ಣನ, ಪ್ರದೀಪ ಮೂಟವಾಣಿ, ಕುಮಾರ ಗಾಣಿಗೇರ, ಪರಪ್ಪ ಬೋಳಶೆಟ್ಟಿ, ಉಮೇಶ ಅಂಕನ್ನವರ, ಬಸವರಾಜ ತೋಟಗಿ, ಮಲ್ಲಿಕಾರ್ಜುನ ಗಾಣಿಗೇರ ಸೇರಿದಂತೆ ಅನೇಕರು ಇದ್ದರು.