ಕನ್ನಡಪ್ರಭ ವಾರ್ತೆ ಉಡುಪಿಧರ್ಮಸ್ಥಳದ ವಿಚಾರದಲ್ಲಿ ಷಡ್ಯಂತ್ರ ನಡೆದಿದೆ ಎಂಬ ಡಿಸಿಎಂ ಡಿ.ಕೆ.ಶಿವಕಮಾರ್ ಅವರ ಹೇಳಿಕೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಧ್ವನಿಗೂಡಿಸಿದ್ದಾರೆ. ಈ ಷಡ್ಯಂತರದ ಹಿಂದಿರುವ ಸತ್ಯಾಸತ್ಯತೆ ಸದ್ಯವೇ ಹೊರಬೀಳಲಿದೆ ಎಂದವರು ಹೇಳಿದ್ದಾರೆ.ಶುಕ್ರವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ, ಧರ್ಮಸ್ಥಳ ವಿಚಾರದಲ್ಲಿ ಉಪಮುಖ್ಯಮಂತ್ರಿ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಅವರು ನಾವೆಲ್ಲರೂ ಧರ್ಮಸ್ಥಳ ಮಂಜುನಾಥನ ಭಕ್ತರು, ಧರ್ಮಾಧಿಕಾರಿ ಹೆಗ್ಗಡೆ ಅವರ ಸಾಮಾಜಿಕ ಕಾರ್ಯಗಳು ಇತರರಿಗೂ ಆದರ್ಶವಾಗಿವೆ. ಅಲ್ಲಿ ಷಡ್ಯಂತ್ರ ನಡೆದಿದೆ ಎಂಬ ಅವರ ವ್ಯಾಖ್ಯಾನಕ್ಕೆ ನನ್ನ ಸಹಮತವಿದೆ ಎಂದರು.ಧರ್ಮಸ್ಥಳದಲ್ಲಿ ಎಸ್‌ಐಟಿಯವರು ಬಹಳ ಆಳವಾಗಿ ತನಿಖೆ ನಡೆಸುತಿದ್ದಾರೆ. ಅವರ ವಿವರಗಳನ್ನು ಗೃಹಸಚಿವರು ಪಡೆದುಕೊಳ್ಳುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಒಂದು ವೇಳೆ ಅಲ್ಲಿ ಏನೂ ಇಲ್ಲ, ಎಲ್ಲ ಭೋಗಸ್ ಅಂತಾದ್ರೂ ಬಹಿರಂಗ ಆಗಬೇಕಲ್ಲ. ಆದ್ದರಿಂದ ಈ ಎಲ್ಲಾ ಆರೋಪಗಳ ಸತ್ಯಾಸತ್ಯತೆ ಜನಸಾಮಾನ್ಯರ ಮುಂದೆ ಬರಬೇಕಲ್ಲ, ಅದೆಲ್ಲಾ ಎಸ್‌ಐಟಿ ತನಿಖೆಯಿಂದ ಹೊರಬರುತ್ತದೆ. ಈ ಬಗ್ಗೆ ರಾಜಕೀಯ ಮಾಡುವುದು ಬೇಡ ಎಂದು ಹೇಳಿದರು.