ಕನ್ನಡಪ್ರಭ ವಾರ್ತೆ ಮಂಡ್ಯ
ಮನ್‌ಮುಲ್ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಮಾಜಿ ಶಾಸಕರೂ ಸೇರಿದಂತೆ ಇತರರು ಸೇರಿ ನನ್ನನ್ನು ಸೋಲಿಸಲು ರೂಪಿಸಿದ್ದ ಷಡ್ಯಂತ್ರ ವಿಫಲವಾಗಿದೆ. ಸಂಘದ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಡಿ.ಸಿ. ತಮ್ಮಣ್ಣನವರ ಹೆಸರನ್ನು ಹೇಳದೆ ಮದ್ದೂರು ತಾಲೂಕಿನ ವಿಜೇತ ಅಭ್ಯರ್ಥಿ ಎಸ್.ಪಿ.ಸ್ವಾಮಿ ಟೀಕಿಸಿದರು.ನಾನು ಬಿಜೆಪಿ ಪಕ್ಷದ ರಾಜ್ಯ ನಾಯಕರ ಅನುಮತಿ ಪಡೆದೇ ಚುನಾವಣೆಗೆ ಸ್ಪರ್ಧಿಸಿದ್ದೆ. ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಉಪಾಧ್ಯಕ್ಷ ಸುರಾನ ಇವರು ಒಪ್ಪಿಗೆ ನೀಡಿದ್ದರಿಂದ ಚುನಾವಣೆಗೆ ಸ್ಪರ್ಧಿಸಿದ್ದೆ. ಆದರೆ, ಮಾಜಿ ಶಾಸಕರು ನಮ್ಮ ಪಕ್ಷದ ಕೆಲವು ಮುಖಂಡರ ದಾರಿ ತಪ್ಪಿಸಿ ನನ್ನನ್ನು ಸೋಲಿಸಲು ಪ್ರಯತ್ನಿಸಿ ಅವರ ಬೆಂಬಲಿತ ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿದ್ದಾರೆ ಎಂದು ದೂಷಿಸಿದರು.
ಸಹಕಾರ ಕ್ಷೇತ್ರಕ್ಕೆ ನಡೆಯುವ ಚುನಾವಣೆ ಪಕ್ಷದ ಚಿಹ್ಹೆಯ ಮೇಲೆ ನಡೆಯುವುದಿಲ್ಲ. ಆದರೂ, ಯಾವ ತಾಲೂಕಿನ ಅಭ್ಯರ್ಥಿಗಳಿಗೂ ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಎಂದು ಸೂಚಿಸಿ ಜಿಲ್ಲಾಧ್ಯಕ್ಷರಿಂದ ಪತ್ರ ಬಿಡುಗಡೆಯಾಗದಿದ್ದರೂ ಮದ್ದೂರು ತಾಲೂಕಿಗೆ ಸೀಮಿತವಾಗಿ ಪತ್ರ ಬಿಡುಗಡೆ ಮಾಡಿದ್ದು ವಿಶೇಷವಾಗಿದೆ ಎಂದರು.ಕಳೆದ ಚುನಾವಣೆಯಲ್ಲಿ ಸೋತರು ಬಿಜೆಪಿ ಸಂಘಟನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇನೆ. ಪಕ್ಷಕ್ಕೊಂದು ಕಚೇರಿಯನ್ನು ತೆರೆದಿದ್ದೇನೆ. ಗ್ರಾಮ ಪಂಚಾಯ್ತಿಗಳಲ್ಲಿ ೩೧೫ ಸದಸ್ಯರನ್ನು ಗೆಲ್ಲಿಸಿದ್ದೇನೆ. ಟಿಎಪಿಸಿಎಂಎಸ್ ಅಧಿಕಾರ ಬಿಜೆಪಿ ವಶದಲ್ಲಿದೆ. ೯ ಪಂಚಾಯ್ತಿಗಳಿಗೆ ಬಿಜೆಪಿ ಬೆಂಬಲಿತರೇ ಅಧ್ಯಕ್ಷರಾಗಿದ್ದಾರೆ. ಮುಂದೆಯೂ ಬಿಜೆಪಿ ಪಕ್ಷ ಸಂಘಟನೆಗೆ ಕಟಿಬದ್ಧನಾಗಿದ್ದೇನೆ ಎಂದು ನೇರವಾಗಿ ಹೇಳಿದರು.
ಮನ್‌ಮುಲ್ ಚುನಾವಣೆ ಗೆಲುವಿನ ಬಳಿಕ ನಾನು ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆಂದು ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ. ನನ್ನ ನಿಷ್ಠೆ ಏನಿದ್ದರೂ ಬಿಜೆಪಿ ಪಕ್ಷಕ್ಕೇ ಹೊರತು ಬೇರೆ ಪಕ್ಷಕ್ಕಲ್ಲ ಎಂದು ಸ್ಪಷ್ಟಪಡಿಸಿದರು.ಬಿಜೆಪಿ ಪಕ್ಷಕ್ಕೆ ಪಾದಾರ್ಪಣೆ ಮಾಡಿದಾಗಿನಿಂದಲೂ ನಾನು ಪಕ್ಷ ನಿಷ್ಠೆ, ಪ್ರಾಮಾಣಿಕತೆಯಿಂದ ಪಕ್ಷ ಕಟ್ಟುವ ಕೆಲಸ ಮಾಡಿದ್ದೇನೆ. ಇದರಲ್ಲಿ ಯಾವುದೇ ತೊಡಕೂ ಉಂಟಾಗಿಲ್ಲ. ಕೆಲವರ ಕುತಂತ್ರದ ಪರಿಣಾಮವಾಗಿ ಇಂತಹ ಕಹಿ ಘಟನೆ ನಡೆದಿದೆ. ಎಲ್ಲಾ ಬೆಳವಣಿಗೆಗಳನ್ನು ಬಿಜೆಪಿ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಮುಂದೆಯೂ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುತ್ತೇನೆ. ಇದರಲ್ಲಿ ಯಾವುದೇ ಅನುಮಾನವೂ ಬೇಡ ಎಂದರು.
ಪಕ್ಷದ ಮುಖಂಡರು, ಕಾಯಕರ್ತರು ಈ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗದೆ ಪಕ್ಷದಲಲ್ಲಿ ನನಗೆ ಯಾವ ರೀತಿ ಸಹಕಾರ ನೀಡುತ್ತಿದ್ದಿರೋ ಅದೇ ಮಾದರಿಯಲ್ಲಿ ಸಹಕಾರ ನೀಡುವರೆಂಬ ವಿಶ್ವಾಸವಿದೆ. ನಾನೂ ಸಹ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳೂ ಸೇರಿದಂತೆ ಎಲ್ಲೆಡೆ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.ಗೋಷ್ಠಿಯಲ್ಲಿ ಪ್ರಸನ್ನ, ಮನು, ಬೋರಪ್ಪ, ಪ್ರಕಾಶ್, ಕೃಷ್ಣ, ನಾಗೇಶ್ ಇದ್ದರು.