ಹಾನಗಲ್ಲ: ಜಾಗತೀಕರಣದ ಬದಲಿಗೆ ಜಾತೀಕರಣದ ಕಡೆಗೆ ಸಮಾಜ ಕೊಂಡೊಯ್ಯುವ ಷಡ್ಯಂತ್ರ ನಡೆದಿದೆ. ಸ್ವಾರ್ಥ ಸಾಧನೆಗೆ ಮನಸ್ಸು ಒಡೆಯುವರನ್ನು ಭಗವಂತ ಸಹ ಕ್ಷಮಿಸಲಾರ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ದಿನಗಳು ಕಳೆದಂತೆ ಆಧುನಿಕತೆಯ ಪ್ರಭಾವ ನಮ್ಮೆಲ್ಲರ ಮೇಲಾಗುತ್ತಿದೆ. ಸಂಸ್ಕೃತಿ, ಸಂಪ್ರದಾಯ ನಿಧಾನವಾಗಿ ನಶಿಸಿ ಹೋಗುತ್ತಿದೆ. ವಿದೇಶಿ ಸಂಸ್ಕೃತಿ ಮೋಡಿ ಮಾಡುತ್ತಿದೆ. ನಮ್ಮತನ ಕಳೆದುಕೊಳ್ಳುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದ ಅವರು ದ್ವೇಷ, ಅಸೂಯೆ ಬದಿಗೊತ್ತಿ ಪ್ರೀತಿಯಿಂದ ಎಲ್ಲರೂ ಜೊತೆಗೂಡಿ ಉತ್ತಮ ಜೀವನ ಸಾಗಿಸುವ ಸಂಕಲ್ಪ ತೊಡಬೇಕಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿ ಮೂರುಸಾವಿರ ಮಠದ ಡಾ. ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಸಾಹಿತ್ಯದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದೇವೆ. ಅಂತರ್ಜಾಲದ ಬಳಕೆಯಿಂದಾಗಿ ಆಂತರಿಕವಾಗಿ ಬಳಲುತ್ತಿದ್ದೇವೆ ಎಂದು ಹೇಳಿದ ಅವರು ಎಲ್ಲರೂ ಅರಿತು, ಬೆರೆತು ಒಂದಾಗಿ ಬಾಳಿದರಷ್ಟೇ ಚೆಂದ ಎಂದರು.ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ, ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಸ್ವಾಮೀಜಿ, ಹೋತನಹಳ್ಳಿಯ ಸಿದ್ದಾರೂಢ ಮಠದ ಸದ್ಗುರು ಶಂಕರಾನಂದ ಸ್ವಾಮೀಜಿ, ಹೇರೂರಿನ ಗುಬ್ಬಿ ನಂಜುಂಡೇಶ್ವರ ಮಠದ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು.