ಮಾಹಿತಿ । ಉಳಿದ ತಾಲೂಕುಗಳಲ್ಲಿ 23ರ ವರೆಗೆ ಸಂಚಾರ । ಜ.26 ರಂದು ಉದ್ಘಾಟನೆಯಾಗಿದ್ದ ಜಾಥಾಕನ್ನಡಪ್ರಭ ವಾರ್ತೆ ಹಾಸನ
ಜ.೨೬ ರಿಂದ ಫೆ.೨೩ರ ವರೆಗೂ ಸಂವಿಧಾನ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿರುವ ೨೬೪ ಗ್ರಾಮ ಪಂಚಾಯಿತಿಯಲ್ಲಿ ಇದುವರೆಗೂ ೧೪೩ ಕಡೆ ಕಾರ್ಯಕ್ರಮವನ್ನು ನಡೆಸಲಾಗಿದ್ದು, ಉಳಿದ ತಾಲೂಕುಗಳಿಗೂ ಫೆ.೨೩ರ ವರೆಗೂ ಸಂಚರಿಸಲಿದೆ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿ, ಗಣರಾಜ್ಯ ದಿನದಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಜಾಗೃತಿ ವಾಹನಕ್ಕೆ ಚಾಲನೆ ನೀಡಿದ ಸಂವಿಧಾನ ಜಾಗೃತಿ ಜಾಥಾ ಈ ವರೆಗೆ ಹಾಸನ ಜಿಲ್ಲೆಯ ೧೪೩ ಸ್ಥಳಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದೆ. ಜಿಲ್ಲೆಯ ವಿವಿಧ ಭಾಗಗಳಿಗೆ ಎರಡು ಜಾಗೃತಿ ವಾಹನ ಸಂಚರಿಸಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದೆ ಎಂದರು.
ಹಾಸನ ಜಿಲ್ಲೆಯಲ್ಲಿ ಇರುವ ೨೬೪ ಗ್ರಾಮ ಪಂಚಾಯಿತಿಗಳು, ೨ ನಗರಸಭೆ ೬ ಪಟ್ಟಣ ಪಂಚಾಯಿತಿಗಳ ಪೈಕಿ ಈ ವರೆಗೆ ೧೩೮ ಗ್ರಾಮ ಪಂಚಾಯಿತಿ, ೫ ಪಟ್ಟಣ ಪಂಚಾಯಿತಿ, ಸೇರಿ ೧೪೩ ಕಡೆ ಜಾಗೃತಿ ಕಾರ್ಯಕ್ರಮಗಳು ನಡೆದಿವೆ. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಸಂವಿಧಾನದ ಬಗ್ಗೆ ಭಾಷಣ ಹಾಗೂ ಬೈಕ್ ರ್‍ಯಾಲಿ, ಕಾಲ್ನಡಿಗೆ ಜಾಥಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.ಹಾಸನ ತಾಲೂಕಿನಲ್ಲಿ ಏಳು ದಿನದಲ್ಲಿ ೩೭ ಪಂಚಾಯಿತಿಗಳಲ್ಲಿ ಜಾಥಾ ನಡೆಸಲಾಗಿದ್ದು, ಬೇಲೂರು ತಾಲೂಕಿನಲ್ಲಿ ೮ ದಿನಗಳಲ್ಲಿ ೩೮ ಪಂಚಾಯಿತಿಯಲ್ಲಿ ಸಂಚರಿಸಿದೆ. ಆಲೂರು ತಾಲೂಕಿನಲ್ಲಿ ಮೂರು ದಿನಗಳಲ್ಲಿ ೧೬ ಪಂಚಾಯಿತಿಗಳಲ್ಲಿ ಅರಿವು ಮೂಡಿಸಿದೆ. ಹೊಳೆನರಸೀಪುರ ತಾಲೂಕಿನಲ್ಲಿ ಮೂರು ದಿನ ೧೫ ಪಂಚಾಯಿತಿ ತಲುಪಿದೆ. ಚನ್ನರಾಯಪಟ್ಟಣ ತಾಲೂಕಿನಲ್ಲಿ ನಾಲ್ಕು ದಿನಗಳ ಕಾಲ ಸಂವಿಧಾನ ಜಾಗೃತಿ ಜಾಥಾ ಸಂಚರಿಸಿ ೨೧ ಪಂಚಾಯಿತಿಯಲ್ಲಿ ಕಾರ್ಯಕ್ರಮ ನಡೆಸಲಿದೆ. ಸಕಲೇಶಪುರ ತಾಲೂಕಿನಲ್ಲಿ ಮೂರು ದಿನಗಳ ಕಾಲ ಜಾಥಾ ಸಂಚರಿಸಿ ೧೩ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಅರಕಲಗೂಡಿಗೆ ಫೆ.೧೨ ರಂದು ಆಗಮಿಸಿ ೮ ದಿನಗಳ ಕಾಲ ೩೬ ಗ್ರಾಮ ಪಂಚಾಯಿತಿಗಳಲ್ಲಿ ಸಂವಿಧಾನ ಜಾಗೃತಿ ಯಾತ್ರೆ ಸಂಚರಿಸಲಿದೆ. ಅರಸೀಕೆರೆ ತಾಲೂಕಿನಲ್ಲಿ ಫೆ.೧೩ಕ್ಕೆ ಜಾಥಾ ಒಂಬತ್ತು ದಿನಗಳ ಕಾಲ ೪೬ ಗ್ರಾಮ ಪಂಚಾಯಿತಿಯಲ್ಲಿ ಸಂಚಾರ ಮಾಡಿದೆ. ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಪ್ರಚಾರ ಮಾಡುವ ಕೆಲಸವನ್ನು ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಾಡಲಾಗಿದೆ ಎಂದು ಜಾಗೃತಿ ಜಾಥಾದ ಬಗ್ಗೆ ಮಾಹಿತಿ ನೀಡಿದರು.
ಹಾಸನ ಜಿಲ್ಲೆಯಲ್ಲಿ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಪ್ರಚಾರ ಮಾಡಲು ಫೋಟೊ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಅಪ್ಲೋಡ್ ಮಾಡಲಾಗುತ್ತಿದೆ ಎಂದು ತಿಳಿಸಿದರು.ಈ ವೇಳೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಲಕ್ಷ್ಮೇಗೌಡ, ಮತ್ತಿತರರು ಇದ್ದರು.ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಸಂವಿಧಾನ ಜಾಗೃತಿ ಜಾಥಾ ರಥ ತಾಲೂಕಿನಲ್ಲಿ ಸಂಚರಿಸಿದ ಮಾಹಿತಿ ನೀಡಿದರು. ಈ ವೇಳೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಲಕ್ಷ್ಮೇಗೌಡ, ಮತ್ತಿತರರು ಇದ್ದರು.