ಸಂವಿಧಾನ ಜಾಗೃತಿ ಜಾಥಾ: ಸಂಭ್ರಮದ ಸ್ವಾಗತ

KannadaprabhaNewsNetwork |  
Published : Feb 02, 2024, 01:04 AM IST
1ಸಿಎಚ್‌ಎನ್51ಚಾಮರಾಜನಗರದಲ್ಲಿ  ವಿಶೇಷವಾಗಿ ಎತ್ತಿನಗಾಡಿಗಳಲ್ಲಿ ಸಂವಿಧಾನ ನೀಡಿರುವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಪುಸ್ತಕಗಳು ಇನ್ನಿತರ ಬರಹ ಫಲಕಗಳನ್ನು ಪ್ರದರ್ಶಿಸಲಾಯಿತು. | Kannada Prabha

ಸಾರಾಂಶ

ಚಾಮರಾಜನಗರ ತಾಲೂಕಿನ ಕುದೇರು, ಉಮ್ಮತ್ತೂರು ಇನ್ನಿತರ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ವಿದ್ಯಾರ್ಥಿಗಳು, ಗ್ರಾಮಸ್ಥರು ಸಡಗರ ಸಂಭ್ರಮದಿಂದ ಸ್ವಾಗತಿಸಿದರು.

ಕುದೇರು,ಉಮ್ಮತ್ತೂರು, ದೇಮಹಳ್ಳಿಯಲ್ಲಿ ಸಂವಿಧಾನ ಜಾಥಾ । ಎತ್ತಿನಗಾಡಿಯಲ್ಲಿ ಪುಸ್ತಕಗಳ ವಿಶೇಷ ಮೆರವಣಿಗೆ

ಕನ್ನಡಪ್ರಭ ವಾರ್ತೆ ಚಾಮರಾಜನಗರಚಾಮರಾಜನಗರ ತಾಲೂಕಿನ ಕುದೇರು, ಉಮ್ಮತ್ತೂರು ಇನ್ನಿತರ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ವಿದ್ಯಾರ್ಥಿಗಳು, ಗ್ರಾಮಸ್ಥರು ಸಡಗರ ಸಂಭ್ರಮದಿಂದ ಸ್ವಾಗತಿಸಿದರು.

ಸಂವಿಧಾನ ಜಾಗೃತಿ ಜಾಥಾದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ಬ್ಯಾಂಡ್ ವಾದ್ಯದ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಂಡರು. ವಿಶೇಷವಾಗಿ ಸಿಂಗರಿಸಲಾಗಿದ್ದ ಎತ್ತಿನಗಾಡಿಯಲ್ಲಿ ಸಾರ್ವಜನಿಕರಿಂದ ಪುಸ್ತಕಗಳನ್ನು ಸಂಗ್ರಹಿಸುವ ಜೋಳಿಗೆ ಇಡಲಾಗಿತ್ತು. ಅನೇಕರು ಪುಸ್ತಕ ಜೋಳಿಗೆಗೆ ತಮ್ಮಲ್ಲಿ ಇದ್ದ ಅಮೂಲ್ಯ ಪುಸ್ತಕಗಳನ್ನು ನೀಡಿದರು. ಕಿವಿಗಡಚಿಕ್ಕುವ ತಮಟೆ, ಡೊಳ್ಳು ವಾದನಕ್ಕೆ ಯುವಕರು ಹೆಜ್ಜೆ ಹಾಕಿದರು. ಬೊಂಬೆ ಕುಣಿತ, ನಾದಸ್ವರ, ಕಹಳೆ ವಾದಕರು ಮೆರವಣಿಗೆಗೆ ಮತ್ತಷ್ಟು ರಂಗು ತಂದರು. ಬೈಕ್ ಹಾಗೂ ಆಟೋ ರ‍್ಯಾಲಿ ಕೂಡ ಜಾಥಾದಲ್ಲಿ ಪಾಲ್ಗೊಂಡು ಸಂವಿಧಾನ ಜಾಗೃತಿ ಮೂಡಿಸುವಲ್ಲಿ ನೆರವಾದವು. ಸುಧೀರ್ಘವಾಗಿ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಚಾಮುಲ್ ವತಿಯಿಂದ ಮಜ್ಜಿಗೆ ವಿತರಿಸಲಾಯಿತು. ಅಲ್ಲಲ್ಲಿ ಬಿಸಿಲಿನ ಝಳಕ್ಕೆ ಪಾನಕ ನೀಡಲಾಯಿತು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಇತರ ದೇಶದ ನಾಯಕರ ವೇಷಭೂಷಣ ತೊಟ್ಟು ವಿದ್ಯಾರ್ಥಿಗಳು ಗಮನ ಸೆಳೆದರು. ಕುದೇರಿನಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಹೇಶ್ ಮತ್ತು ತಂಡದವರು ಡಾ. ಬಿ.ಆರ್. ಅಂಬೇಡ್ಕರ್ ಕುರಿತ ಜಾಗೃತಿ ಗೀತೆಗಳನ್ನು ಹಾಡಿದರು. ವಿದ್ಯಾರ್ಥಿಗಳು ಸಂವಿಧಾನ ಅರಿವು ಮೂಡಿಸುವ ನಿಟ್ಟಿನಲ್ಲಿ ರೂಪಿಸಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಸಂವಿಧಾನ ಕುರಿತ ರಸಪ್ರಶ್ನೆ ಸ್ಪರ್ಧೆ, ಇನ್ನಿತರ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಯಕ ನಿರ್ದೆಶಕ ಚಿಕ್ಕಬಸವಯ್ಯ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಸಿ.ಎಂ. ಕೃಷ್ಣಮೂರ್ತಿ, ದೈಹಿಕ ಶಿಕ್ಷಕ ರಾಜಪ್ಪ ಸಂವಿಧಾನ ಕುರಿತು ಉಪನ್ಯಾಸ ನೀಡಿದರು. ಗ್ರಾಪಂ ಉಪಾಧ್ಯಕ್ಷ ಮಧು, ಇತರೆ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು. ಉಮ್ಮತ್ತೂರಿಗೆ ಸಂವಿಧಾನ ಜಾಗೃತಿ ಜಾಥಾ ತೆರಳಿತು. ಅಲ್ಲಿಯೂ ಮಹಿಳೆಯರು ಕಳಸ ಹಿಡಿದು ಬೆಲ್ಲದ ಆರತಿ ಬೆಳಗಿ ಬರ ಮಾಡಿಕೊಂಡರು. ವಿಶೇಷವಾಗಿ ಎತ್ತಿನಗಾಡಿಗಳಲ್ಲಿ ಸಂವಿಧಾನ ನೀಡಿರುವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಪುಸ್ತಕಗಳು ಇನ್ನಿತರ ಬರಹ ಫಲಕಗಳನ್ನು ಪ್ರದರ್ಶಿಸಲಾಯಿತು. ಸಂವಿಧಾನ ಪೀಠಿಕೆ ಬೋಧಿಸಲಾಯಿತು. ಪ್ರಗತಿಪರ ಸಂಘಟನೆಗಳ ಮುಖಂಡರಾದ ಸಿ.ಎಂ. ಕೃಷ್ಣಮೂರ್ತಿ ವಿಶೇಷ ಉಪನ್ಯಾಸ ನೀಡಿದರು. ಗ್ರಾಪಂ ಅಧ್ಯಕ್ಷ ಯಮುನ, ಉಪಾಧ್ಯಕ್ಷ ನಂಜುಂಡಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ, ಇತರರು ಪಾಲ್ಗೊಂಡಿದ್ದರು. ತದನಂತರ ಸಂವಿಧಾನ ಜಾಗೃತಿ ಜಾಥಾ ದೇಮಹಳ್ಳಿಗೆ ತಲುಪಿತು. ಗ್ರಾಮಸ್ಥರು ಸಂಭ್ರಮದಿಂದ ಸ್ವಾಗತಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...