ಸಂವಿಧಾನ ಜಾಗೃತಿ ಜಾಥಾ ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌ಗೆ ಸೇರ್ಪಡೆ

KannadaprabhaNewsNetwork | Published : Feb 24, 2024 2:31 AM

ಸಾರಾಂಶ

ಪಾರಂಪರಿಕ ನಡಿಗೆ ಕಾರ್ಯಕ್ರಮ ಇಂಡಿಯನ್‌ ಬುಕ್‌ ಆಫ್‌ ರೇಕಾರ್ಡ್‌ (Indian Book of Record) ಗೆ ಸೇರ್ಪಡೆಯಾಗಿದೆ.

ಧಾರವಾಡ: ರಾಜ್ಯ ಸರ್ಕಾರ ಕಳೆದ ಒಂದು ತಿಂಗಳಿಂದ ನಡೆಸಿದ ಸಂವಿಧಾನ ಜಾಗೃತಿ ಜಾಥಾ ರಾಜ್ಯದಲ್ಲೇ ಧಾರವಾಡ ಜಿಲ್ಲೆ ಪ್ರಥಮ ಸ್ಥಾನದಲ್ಲಿರುವುದರ ಬೆನ್ನಲ್ಲೇ ಇದೀಗ ಇಲ್ಲಿ ನಡೆಸಿದ ಎರಡು ಇವೆಂಟ್‌ಗಳು ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸೇರ್ಪಡೆಯಾಗಿರುವುದು ವಿಶೇಷ. ಫೆ. 24ರಂದು ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸೇರ್ಪಡೆಯಾಗಿರುವುದರ ಪ್ರಮಾಣಪತ್ರವನ್ನು ಜಿಲ್ಲಾಡಳಿತ ಪಡೆದುಕೊಳ್ಳಲಿದೆ.

ಸಂವಿಧಾನಕ್ಕೆ 75 ವರ್ಷಗಳು ಸಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂವಿಧಾನದ ಮಹತ್ವ ಸಾರುವ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲೂ ಸಂವಿಧಾನ ಜಾಗೃತಿ ಜಾಥಾ ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆ ಧಾರವಾಡ ಜಿಲ್ಲೆಯಲ್ಲೂ ಜ. 26ರಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಜಾಥಾಕ್ಕೆ ಚಾಲನೆ ನೀಡಿದ್ದರು. ಅಲ್ಲಿಂದ ಪ್ರತಿನಿತ್ಯ ನಡೆದ ಸಂವಿಧಾನ ಜಾಗೃತಿ ಜಾಥಾ ಶುಕ್ರವಾರ ಮುಕ್ತಾಯಗೊಂಡಿದೆ. ಫೆ. 24 ಮತ್ತು 25ರಂದು ನಡೆಯಲಿರುವ ರಾಜ್ಯ ಮಟ್ಟದ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶಕ್ಕೆ ಇಲ್ಲಿನ ಸ್ತಬ್ಧ ಚಿತ್ರದ ವಾಹನ ತೆರಳಲಿದೆ. ಸಾರ್ವಜನಿಕರ ಪಾಲ್ಗೊಳ್ಳುವಿಕೆಯಲ್ಲಿ ಧಾರವಾಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ.

ಜಿಲ್ಲೆಯ 146 ಗ್ರಾಪಂ, 7 ಸ್ಥಳೀಯ ನಗರ ಸಂಸ್ಥೆಗಳು ಮತ್ತು ಮಹಾನಗರ ಪಾಲಿಕೆಯ ವ್ಯಾಪ್ತಿಯ ಎಲ್ಲ ವಾರ್ಡ್‌ಗಳು ಸೇರಿ ಒಟ್ಟು 1528 ಕಿ.ಮೀ. ಜಾಥಾ ನಡೆದಿದೆ. ಜಾಥಾ ಸಂಚರಿಸುವ ಸಂದರ್ಭದಲ್ಲಿ ಜಿಲ್ಲೆಯ ಸ್ಥಳೀಯ, ಐತಿಹಾಸಿಕ ವ್ಯಕ್ತಿಗಳು, ಸ್ಥಳೀಯ ಕಲೆ, ಸಂಸ್ಕೃತಿ ಇತ್ಯಾದಿಗಳನ್ನು ಒಳಗೊಂಡಿರುವ ವಿಷಯ ಹಾಗೂ ಸಂವಿಧಾನದ “ಅನುಚ್ಚೇದ 41”ರ ರಾಜ ನಿರ್ದೇಶಕ ತತ್ವದ ಮಹತ್ವ ಕುರಿತು ಉಪನ್ಯಾಸ ಮತ್ತು ವಿವಿಧ ಕಲಾ ತಂಡಗಳಿಂದ ಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ರಾಜ್ಯದಲ್ಲಿ ಪ್ರಥಮ ಬಾರಿಗೆ ತೃತೀಯ ಲಿಂಗಿಗಳ ಜಾಥಾವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿತ್ತು. ದೇವದಾಸಿ, ಪರಿತ್ಯಕ್ತ ಮಹಿಳೆಯರ, ಅಂಗನವಾಡಿ ಕಾರ್ಯಕರ್ತರ, ಆಶಾ ಕಾರ್ಯಕರ್ತರ ಮತ್ತು ದಮನಿತ ಮಹಿಳೆಯರ ರ‍್ಯಾಲಿಯನ್ನು ನಡೆಸಿದ್ದು ವಿಶೇಷ.

ಧಾರವಾಡದಲ್ಲಿ 500ಕ್ಕೂ ಹೆಚ್ಚು ಜನ ಅಂಗವಿಕಲರು ಸಂವಿಧಾನ ಜಾಗೃತಿಗಾಗಿ, ತಮ್ಮ ತ್ರಿಚಕ್ರ ವಾಹನಗಳೊಂದಿಗೆ ರ‍್ಯಾಲಿ ನಡೆಸಿದ್ದರು.

ದಾಖಲೆಯ ಇವೆಂಟ್‌

ದೇಶದಲ್ಲಿ ಪ್ರಥಮ ಬಾರಿಗೆ ಫೆ. 17ರಂದು ಧಾರವಾಡದಲ್ಲಿ ಕೆ.ಸಿ.ಡಿ. ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ್‌ರವರು ಸ್ಥಾಪಿಸಿರುವ ವಿದ್ಯಾರ್ಥಿ ನಿಲಯದವರೆಗೂ “ಪಾರಂಪರಿಕ ನಡಿಗೆ” ಹಮ್ಮಿಕೊಳ್ಳಲಾಗಿತ್ತು. 10ಸಾವಿರಕ್ಕೂ ಅಧಿಕ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ನಾಯಕರು, ಪದಾಧಿಕಾರಿಗಳು, ಸಾರ್ವಜನಿಕರು, ಅಧಿಕಾರಿಗಳು ಭಾಗವಹಿಸಿದ್ದರು. ಈ “ಪಾರಂಪರಿಕ ನಡಿಗೆ” ಕಾರ್ಯಕ್ರಮವು ಇಂಡಿಯನ್‌ ಬುಕ್‌ ಆಫ್‌ ರೇಕಾರ್ಡ್‌ (Indian Book of Record) ಗೆ ಸೇರ್ಪಡೆಯಾಗಿದೆ.

ಇನ್ನು ಫೆ.19ರಂದು ಹುಬ್ಬಳ್ಳಿಯಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು. ಇದರಲ್ಲಿ 15 ಸಾವಿರಕ್ಕೂ ಅಧಿಕ ಜನ ಉಣಕಲ್‌ ಕ್ರಾಸ್‌ನಿಂದ ರಾಣಿ ಚೆನ್ನಮ್ಮ ವೃತ್ತದವರೆಗೆ ನಡೆದ ಪಂಜಿನ ಮೆರವಣಿಯಲ್ಲಿ ಪಾಲ್ಗೊಂಡಿದ್ದರು. ಇದು ಇಂಡಿಯನ್‌ ಬುಕ್‌ ಆಫ್‌ ರೇಕಾರ್ಡ್‌ಗೆ ಸೇರ್ಪಡೆಯಾಗಿದೆ.

ಕೊನೆ ಕಾರ್ಯಕ್ರಮ:

ಶುಕ್ರವಾರ ಹುಬ್ಬಳ್ಳಿಯಲ್ಲಿ ಪಾಲಿಕೆಯ ವತಿಯಿಂದ ಗೋಡೆಗಳ ಮೇಲೆ “ಸಂವಿಧಾನ ಕುರಿತು” ಚಿತ್ರ ಬಿಡಿಸುವ ಸ್ಪರ್ಧೆಯನ್ನು ಹಮ್ಮಿಕೊಂಡು ಯಶಸ್ವಿಗೊಳಿಸಲಾಯಿತು. ಇದೇ ಕೊನೆಯ ಕಾರ್ಯಕ್ರಮವಾಗಿದೆ.

ಜಿಲ್ಲೆಯಲ್ಲಿ ಸುಮಾರು 230000 ಸಂವಿಧಾನ ಪೀಠಿಕೆಯ ಪ್ರತಿಗಳನ್ನು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗಿದೆ. 2 ಲಕ್ಷಕ್ಕೂ ಅಧಿಕ ಮಕ್ಕಳು (ಶಾಲಾ-ಕಾಲಾಜು), ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ವಿವಿಧ ಸಂಘ-ಸಂಸ್ಥೆಗಳ ನಾಯಕರು, ಪದಾಧಿಕಾರಿಗಳು, ಸಾರ್ವಜನಿಕರು, ಅಧಿಕಾರಿಗಳು ಭಾಗವಹಿಸಿದ್ದಾರೆ.

ಇಂದು ಪ್ರಮಾಣ ಪತ್ರ ವಿತರಣೆ

ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸೇರ್ಪಡೆಯಾಗಿದ್ದಕ್ಕೆ ಫೆ. 24ರಂದು ಹುಬ್ಬಳ್ಳಿಯ ಮಹಾನಗರ ಪಾಲಿಕೆ ಸಭಾಭವನದಲ್ಲಿ ಬೆಳಗ್ಗೆ 11ಗಂಟೆಗೆ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ದಾಖಲೆಯಾಗಿದ್ದಕ್ಕೆ ಪ್ರಮಾಣ ಪತ್ರ ಸ್ವೀಕರಿಸಲಿದ್ದಾರೆ. ದೆಹಲಿಯ ಇಂಡಿಯಾ ಬುಕ್‌ ಆಫ್ ರೆಕಾರ್ಡ್‌ ಸಂಸ್ಥೆಯ ತೀರ್ಪುಗಾರ ನರವಿಜಯ ಅವರಿಂದ ಪ್ರಮಾಣಪತ್ರ ಪಡೆಯಲಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಧಾರವಾಡದ ಅಪರ ನಿರ್ದೇಶಕ ಅಲ್ಲಾ ಭಕ್ಷ ಎಂ.ಎಸ್ ತಿಳಿಸಿದ್ದಾರೆ.

Share this article