ಪೆರ್ಡೂರು ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ

KannadaprabhaNewsNetwork | Published : Feb 13, 2024 12:46 AM

ಸಾರಾಂಶ

ಪೆರ್ಡೂರು ಶಾಲೆಯಿಂದ ಆರಂಭವಾದ ಜಾಗೃತಿ ಜಾಥಾದಲ್ಲಿ ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್, ಸ್ಥಳೀಯ ಯುವಕರ ಬೈಕ್ ರ್‍ಯಾಲಿ ಮತ್ತು ಚಂಡೆವಾದನ ತಂಡಗಳು ಜನರ ಗಮನ ಸೆಳೆದವು.

ಕನ್ನಡಪ್ರಭ ವಾರ್ತೆ ಉಡುಪಿಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗಳ ವತಿಯಿಂದ ಸಂವಿಧಾನ ದಿನಾಚರಣೆ ಪ್ರಯುಕ್ತ ಪೆರ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾನುವಾರ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ನೆರವೇರಿತು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೇತನಾ ಶೆಟ್ಟಿ ಹಾಗೂ ಸದಸ್ಯರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪೆರ್ಡೂರು ಶಾಲೆಯಿಂದ ಆರಂಭವಾದ ಜಾಗೃತಿ ಜಾಥಾದಲ್ಲಿ ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್, ಸ್ಥಳೀಯ ಯುವಕರ ಬೈಕ್ ರ್‍ಯಾಲಿ ಮತ್ತು ಚಂಡೆವಾದನ ತಂಡಗಳು ಜನರ ಗಮನ ಸೆಳೆದವು.ತುಳು ಜನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರು ಅವರು ಸಂವಿಧಾನದ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧೀಕ್ಷಕಿ ವಿಜಯಲಕ್ಷ್ಮೀ ಅವರು ಭಾರತ ಸಂವಿದಾನದ ಪ್ರಸ್ತಾವನೆ ಕುರಿತು ಉಪಸ್ಥಿತರಿದ್ದ ಜನರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಇದೇ ಸಂದರ್ಭದಲ್ಲಿ ಜಾಥಾದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಅಂಬೇಡ್ಕರ್, ಗಾಂಧೀಜಿ, ಭಾರತ ಮಾತೆ ಮತ್ತು ಯಕ್ಷಗಾನ ಮುಂತಾದ ಛದ್ಮವೇಷಗಳು ಕಾರ್ಯಕ್ರಮಕ್ಕೆ ಮೆರಗು ನೀಡಿದವು.

ಪಂಚಾಯಿತಿ ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ಏರ್ಪಡಿಸಿದ ಸಂವಿಧಾನ ಕುರಿತಾದ ಭಾಷಣ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ದೇವು ಪೂಜಾರಿ, ಗ್ರಾಮಲೆಕ್ಕಿಗ ಗುರುಪ್ರಸಾದ್, ಪಂಚಾಯಿತಿ ಸದಸ್ಯರು, ಸಂಘಟನಾಕಾರರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪಂಚಾಯಿತಿ ವ್ಯಾಪ್ತಿಯ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ಹಾಗೂ ವಿದ್ಯಾರ್ಥಿ ವೃಂದ, ಸಂಜೀವಿನಿ ಸಂಘದ ಸದಸ್ಯರು, ಎಸ್.ಎಲ್.ಆರ್.ಎಂ. ಸಂಘದ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಪಂಚಾಯಿತಿ ಪಿ.ಡಿ.ಒ. ಸುಮನಾ ಕೆ. ಸ್ವಾಗತಿಸಿದರು.

Share this article