ಸಂವಿಧಾನ ಬದಲಾವಣೆ ಹೇಳಿಕೆ: ಡಿಸಿಎಂ ಡಿಕೆಶಿ ವಿರುದ್ಧ ಕಮಲ ಪಡೆ ಕಿಡಿ

KannadaprabhaNewsNetwork |  
Published : Mar 26, 2025, 01:31 AM IST
೨೫ಕೆಎಂಎನ್‌ಡಿ-೪ಸಂವಿಧಾನ ಬದಲಾವಣೆ ಮಾಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮಂಡ್ಯದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಧರ್ಮಾಧಾರಿತವಾಗಿ ಮುಸ್ಲಿಮರಿಗೆ ಮೀಸಲನ್ನು ನೀಡುವುದನ್ನು ನಾವು ವಿರೋಧಿಸುತ್ತೇವೆ. ಅವರ ಬದಲಾಗಿ ರೈತರು, ಬಡ ಮಕ್ಕಳಿಗೆ ಮೀಸಲು ಕೊಡಿ. ಮುಸ್ಲಿಮರನ್ನು ತುಷ್ಠೀಕರಣ ಮಾಡಲು ಓಲೈಸಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದ್ದು, ಇದನ್ನು ಬಲವಾಗಿ ವಿರೋಧಿಸುತ್ತೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿರುವ ಡಿ.ಕೆ.ಶಿವಕುಮಾರ್ ವಿರುದ್ಧ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಮಂಡ್ಯದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಕೈಯ್ಯಲ್ಲಿ ಸಂವಿಧಾನ ಬದಲಾಯಿಸುವವರು ಇದ್ದಾರೆ ಎಚ್ಚರಿಕೆ ಎಂಬ ಪ್ಲೇ ಕಾರ್ಡ್ ಹಿಡಿದು ಘೋಷಣೆ ಕೂಗಿದರು. ಮುಸ್ಲಿಮರಿಗಾಗಿ ಸಂವಿಧಾನ ಬದಲಾವಣೆ ಮಾಡಲು ಮುಂದಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಮಾತನಾಡಿ, ಧರ್ಮಾಧಾರಿತವಾಗಿ ಮುಸ್ಲಿಮರಿಗೆ ಮೀಸಲನ್ನು ನೀಡುವುದನ್ನು ನಾವು ವಿರೋಧಿಸುತ್ತೇವೆ. ಅವರ ಬದಲಾಗಿ ರೈತರು, ಬಡ ಮಕ್ಕಳಿಗೆ ಮೀಸಲು ಕೊಡಿ. ಮುಸ್ಲಿಮರನ್ನು ತುಷ್ಠೀಕರಣ ಮಾಡಲು ಓಲೈಸಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದ್ದು, ಇದನ್ನು ಬಲವಾಗಿ ವಿರೋಧಿಸುತ್ತೇವೆ ಎಂದರು.

ಸಂವಿಧಾನ ಬದಲಾಯಿಸುವ ಮಾತುಗಳನ್ನಾಡಿರುವ ಡಿ.ಕೆ.ಶಿವಕುಮಾರ್ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುವವರೇ ಭಕ್ಷಕರಾಗಿದ್ದಾರೆ. ಸಂವಿಧಾನ ಓದಿ ಎನ್ನುವವರೇ ಅದರ ಮಹತ್ವವನ್ನು ತಿಳಿಯದೆ ಮುಸಲ್ಮಾನರಿಗಾಗಿ ಬದಲಾಯಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಗ್ಯಾರಂಟಿ ಯೋಜನೆಗಳಿಗೆ ದಲಿತರ ಕೋಟ್ಯಂತರ ರು. ಹಣವನ್ನು ಕಾಂಗ್ರೆಸ್ ಲೂಟಿ ಮಾಡುತ್ತಿದ್ದರೂ ದಲಿತ ಸಂಘಟನೆಗಳು ಗಾಢನಿದ್ರೆಯಲ್ಲಿವೆ. ದಲಿತರ ನಿಧಿಯಿಂದ ೩೯ ಸಾವಿರ ಕೋಟಿ ರು. ಹಣ ವಿನಿಯೋಗವಾಗಿದ್ದರೂ ದಲಿತ ಮುಖಂಡರು ಮೌನ ವಹಿಸಿದ್ದಾರೆ. ಸರ್ಕಾರದ ವಿರುದ್ಧ ಸಿಡಿದೇಳುವ, ಹಣವನ್ನು ದಲಿತರ ಶ್ರೇಯೋಭಿವೃದ್ಧಿಗೆ ಮೀಸಲಿಡುವಂತೆ ಒತ್ತಾಯಿಸುತ್ತಿಲ್ಲ. ಇದು ದಲಿತ ಸಂಘಟನೆಗಳ ದೌರ್ಬಲ್ಯವನ್ನು ಪ್ರದರ್ಶಿಸುತ್ತದೆ ಎಂದರು.

ಹನಿಟ್ರ್ಯಾಪ್ ವಿರುದ್ಧ ದನಿ ಎತ್ತಿದ ೧೮ ಮಂದಿ ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿರುವ ಸರ್ಕಾರದ ಕ್ರಮ ಖಂಡನೀಯ. ಇದನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಅಶೋಕ್ ಜಯರಾಂ, ಬಿಜೆಪಿ ನಗರ ಘಟಕದ ಅಧ್ಯಕ್ಷ ವಸಂತಕುಮಾರ್, ವಿವೇಕ್, ಶಿವಕುಮಾರ ಆರಾಧ್ಯ, ಸಿ.ಟಿ.ಮಂಜುನಾಥ, ನಾಗಾನಂದ್, ಹೊಸಹಳ್ಳಿ ಶಿವಕುಮಾರ್, ಕೆಂಪಯ್ಯ, ಪ್ರಸನ್ನ, ಚಂದ್ರು, ಯೋಗೇಶ್ ಇತರರಿದ್ದರು.

PREV

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ