ಅಧಿಕಾರಕ್ಕಾಗಿ ಕಾಂಗ್ರೆಸ್‌ನಿಂದ ಹಲವು ಬಾರಿ ಸಂವಿಧಾನ ತಿದ್ದುಪಡಿ

KannadaprabhaNewsNetwork |  
Published : Jan 22, 2025, 12:31 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ಹಲವಾರು ಬಾರಿ ಸಂವಿಧಾನ ತಿದ್ದುಪಡಿ ಮಾಡಿದೆ ಎಂದು ಮೈಸೂರು-ಕೊಡಗು ಕ್ಷೇತ್ರ ಸಂಸದ ಯದುವೀರ ಕೃಷ್ಣದತ್ತ ಒಡೆಯರ್ ಚಿತ್ರದುರ್ಗದಲ್ಲಿ ಆರೋಪಿಸಿದ್ದಾರೆ.

- ಸಂಸದ ಯದುವೀರ ಕೃಷ್ಣದತ್ತ ಒಡೆಯರ್ ಆರೋಪ । ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ಹಲವಾರು ಬಾರಿ ಸಂವಿಧಾನ ತಿದ್ದುಪಡಿ ಮಾಡಿದೆ ಎಂದು ಮೈಸೂರು-ಕೊಡಗು ಕ್ಷೇತ್ರ ಸಂಸದ ಯದುವೀರ ಕೃಷ್ಣದತ್ತ ಒಡೆಯರ್ ಆರೋಪಿಸಿದರು.

ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಸಂಘಟನೆ ವತಿಯಿಂದ ಮಂಗಳವಾರ ತರಾಸು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅನೇಕ ಜಾತಿ, ಧರ್ಮ, ಆಚಾರ, ವಿಚಾರ, ವೈವಿಧ್ಯತೆಯಿಂದ ಕೂಡಿರುವ ಭಾರತದಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನ ರಕ್ಷಣೆ ನೀಡಿದೆ. 1951ರಲ್ಲಿ ದೇಶದ ಪ್ರಧಾನಿಯಾಗಿದ್ದ ಜವಾಹರ ಲಾಲ್ ನೆಹರು ಮೊದಲ ಬಾರಿಗೆ ಸಂವಿಧಾನ ತಿದ್ದುಪಡಿಗೊಳಿಸಿದರು. 1975ರಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಪ್ರಧಾನಿ ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧ ನಡೆದುಕೊಂಡರು. ಆರ್ಟಿಕಲ್ 368ರ ಪ್ರಕಾರ ಸಂವಿಧಾನ ತಿದ್ದುಪಡಿಗೆ ಅವಕಾಶವಿದೆ. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ತಿದ್ದುಪಡಿ ಮಾಡಿದೆ. ಎಲ್ಲ ಸಂದರ್ಭಗಳಲ್ಲಿಯೂ ಸಂವಿಧಾನ ದುರುಪಯೋಗ ಮಾಡಿಕೊಂಡಿದೆ ಎಂದರು.

ಕುರ್ಚಿ ಸಂರಕ್ಷಣೆ, ಸ್ವಂತ ಲಾಭಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದಿರುವ ಕಾಂಗ್ರೆಸ್ ಸಂವಿಧಾನವನ್ನು ಬದಲಾಯಿಸುವುದಕ್ಕಾಗಿಯೇ ಬಿಜೆಪಿ ಅಧಿಕಾರಕ್ಕೆ ಬಂದಿದೆಯೆಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅಪಪ್ರಚಾರದಲ್ಲಿ ತೊಡಗಿದೆ. ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದಾಗ ಕಾಂಗ್ರೆಸ್ ಅಪಪ್ರಚಾರದ ಮೂಲಕ ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಿತು ಎಂದು ದೂರಿದರು.

ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಇವರು ಸಂವಿಧಾನ ತಿದ್ದುಪಡಿ ಮಾಡಿರುವುದು ಪ್ರಜೆಗಳ ಒಳಿತಿಗಾಗಿಯೇ ವಿನಃ ಅಧಿಕಾರ ಉಳಿಸಿಕೊಳ್ಳಲಿಕ್ಕಲ್ಲ. 1918ರಲ್ಲಿ ಮೈಸೂರು ಮಹಾರಾಜರು ಮೊದಲು ಮೀಸಲಾತಿ ಕುರಿತು ಚರ್ಚಿಸಿ ಮಿಲ್ಲರ್ ಆಯೋಗ ರಚಿಸಿದರು. ಅತರ ಬಂದ ವರದಿಯ ಆಧಾರದ ಮೇಲೆ ಸಂವಿಧಾನ ರಚನೆಯಾಗಿದೆ. ಅಂದಿನಿಂದ ಇಲ್ಲಿಯತನಕ ಸಂವಿಧಾನದ ರಕ್ಷಿಸುವ ಕೆಲಸವಾಗುತ್ತಿದೆ. ವಿಶ್ವದಲ್ಲಿಯೇ ಭಾರತ ಮೂರನೇ ಸ್ಥಾನಕ್ಕೆ ಹೋಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕನಸಿಗೆ ಪ್ರತಿಯೊಬ್ಬರು ಕೈ ಜೋಡಿಸುವಂತೆ ಯದುವೀರ ಕೃಷ್ಣದತ್ತ ಒಡೆಯರ್ ಮನವಿ ಮಾಡಿದರು.

ಯುವ ಬ್ರಿಗೇಡ್ ಸಂಘಟನೆಯ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಡಾ.ಬಾಬಾ ಸಾಹೇಬರೇ ಬಂದರೂ ಸಂವಿಧಾನ ತಿದ್ದುಪಡಿಯಾಗುವುದು ಅಸಾಧ್ಯವೆಂದು ದೇಶದ ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ಕಾಂಗ್ರೆಸ್ ಅಪಪ್ರಚಾರಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. 106 ಬಾರಿ ಸಂವಿಧಾನ ತಿದ್ದುಪಡಿಯಾಗಿದ್ದು, ಕಾಂಗ್ರೆಸ್ 75 ಬಾರಿ ತಿದ್ದುಪಡಿ ಮಾಡಿದೆ. ಬಿಜೆಪಿ ಸಂವಿಧಾನ ಬದಲಾಯಿಸುವುದಕ್ಕಾಗಿಯೇ ಅಧಿಕಾರಕ್ಕೆ ಬಂದಿರುವುದೆಂದು ಹೇಳಿಕೊಂಡು ಸುತ್ತುತ್ತಿರುವ ಕಾಂಗ್ರೆಸ್‍ನಿಂದ ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಸಾಕಷ್ಟು ಅವಮಾನ ಅನುಭವಿಸಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಸಂವಿಧಾನವನ್ನು 8 ಬಾರಿ ತಿದ್ದುಪಡಿಗೊಳಪಡಿಸಿದ್ದಾರೆ. ಇದಕ್ಕೆ 4 ಪಟ್ಟು ಹೆಚ್ಚು ಕಾಂಗ್ರೆಸ್ ಸಂವಿಧಾನ ತಿದ್ದುಪಡಿ ಮಾಡಿದೆ. ಸಂವಿಧಾನದ ಆಶಯದ ಮೇಲೆ ಕೈ ಹಾಕಿದ ಕಾಂಗ್ರೆಸ್ ತುರ್ತು ಪರಿಸ್ಥಿತಿ ಮೂಲಕ ಸಂವಿಧಾನವನ್ನು ಕೊಂದಿದೆ. ಬಿಜೆಪಿ ಮೇಲೆ ಅಪ ಪ್ರಚಾರ ಮಾಡುವ ನೈತಿಕತೆ ಕಾಂಗ್ರೆಸ್‍ಗಿಲ್ಲ ಎಂದು ಸೂಲಿಬೆಲೆ ಹೇಳಿದರು.

ಲೇಖಕ ವಿಕಾಸ್ ಕುಮಾರ್ ಪಿ. ಮಾತನಾಡಿದರು. ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಸಂಘಟನೆ ಜಿ.ಎಚ್.ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

- - - -21ಸಿಟಿಡಿ9.ಜೆಪಿಜಿ:

ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಯದುವೀರ ಕೃಷ್ಣದತ್ತ ಒಡೆಯರ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ