-ಸಂವಿಧಾನ ದಿನಾಚರಣೆ, ಅಂಬೇಡ್ಕರ್ ಒಂದು ನೆನಪು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹಿರಿಯೂರು
ಬುದ್ಧನ ಚಿಂತನೆ, ಬಸವಣ್ಣನ ಸಮಾನತೆಯ ತಳಹದಿಯ ಮೇಲೆ ರಚಿತವಾದ ಅಂಬೇಡ್ಕರ್ ಅವರ ಸಂವಿಧಾನ ಮಾನವೀಯ ಮೌಲ್ಯಗಳಿಂದ ಕೂಡಿದ ಸಂವಿಧಾನ ಎಂದು ಚಿತ್ರದುರ್ಗ ಕಲಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಹಾಗೂ ಸಾಹಿತಿ ಪ್ರೊ. ಜಿ.ಪರಮೇಶ್ವರಪ್ಪ ಹೇಳಿದರು.ದೇವಗಿರಿ ನಗರದ ಭಾರತ್ ರೂರಲ್ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕಳವಿಭಾಗಿ ಶ್ರೀ ರಂಗನಾಥಸ್ವಾಮಿ ಸಕ್ಕರ ಸಾಂಸ್ಕೃತಿಕ ಕಲಾಸಂಘ ಹಾಗೂ ಭಾರತ್ ರೂರಲ್ ಕೈಗಾರಿಕಾ ತರಬೇತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಒಂದು ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಕಾರ್ಯಕರ್ತ ಚಮನ್‍ಷರೀಫ್ ಮಾತನಾಡಿ, ಅಂಬೇಡ್ಕರ್ ಅವರು ವಿಶ್ವದ 70 ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ಮಾಡಿ ಜೀವಪರ, ಮಾನವಪರ ಮತ್ತು ಮನುಷ್ಯತ್ವಪರ ಇರುವ ಸಂವಿಧಾನವನ್ನು ನೀಡಿ ವ್ಯಕ್ತಿ ಗೌರವ, ದೇಶದ ಏಕತೆ, ಸಹೋದರತೆಯ ಭಾವವನ್ನು ಬೆಳೆಸಿ ಸಮಗ್ರತೆಯ ಭಾರತವನ್ನು ಕಟ್ಟಿದರು. ಮಹಿಳೆಯರಿಗೆ ಮತದಾನ ಹಕ್ಕು ನೀಡಿ ರಾಜಕೀಯವಾಗಿ ಸಬಲೀಕರಣಗೊಳ್ಳಲು ಕಾರಣರಾದರು. ಹಿಂದುಳಿದ ವರ್ಗದವರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿ ಹೊಂದಲು ಅವರು ಕೊಟ್ಟ ಸಂವಿಧಾನ ಕಾರಣ ಎಂದರು.
ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ಭೂಮಿ, ಶಿಕ್ಷಣ, ನೀರು ರಾಷ್ಟ್ರೀಕರಣವಾಗಬೇಕು, ಇದು ದೇಶದ ಪ್ರತಿಯೊಬ್ಬರಿಗೂ ಸಮಾನವಾಗಿ ಹಂಚಿಕೆಯಾಗಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಆದರೆ, ಸಂವಿಧಾನ ಸಮರ್ಪಣೆ ಮಾಡಿ ಇಂದಿಗೆ 75 ವರ್ಷ ಕಳೆದರೂ ಅವರ ಆಶಯ ಹಾಗೆ ಉಳಿದಿವೆ. ಹಸಿವು, ಶೋಷಣೆ, ಅಸಮಾನತೆ, ಅಸ್ಪೃಶ್ಯತೆ ಇಲ್ಲದೆ ಸಮಾನವಾದ ಸಮಾಜ ಕಟ್ಟುವುದೇ ಅವರ ಗುರಿಯಾಗಿತ್ತು. ಆದಕಾರಣ 1925 ರ ಚೌಡರ್ ಕೆರೆಯ ಹೋರಾಟದಿಂದ ಸ್ವಾತಂತ್ರ್ಯ ನಂತರದ ದಿನದವರೆಗೂ ಸಾಮಾಜಿಕ ಹೋರಾಟ ನಡೆಸಿದರು. ವಿಶ್ವದ ಜ್ಞಾನಿಗಳಲ್ಲಿ ಅಂಬೇಡ್ಕರ್ ಅವರು ಮೊದಲಿಗರಾಗಿದ್ದು ಅವರ ಬದುಕು, ಸಾಧನೆ, ಯುವಜನತೆಗೆ ಸ್ಫೂರ್ತಿಯಾಗಬೇಕು ಎಂದರು.ಈ ಸಂದರ್ಭದಲ್ಲಿ ಭಾರತ್ ರೂರಲ್ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲ ಎಂ.ರಮೇಶ್, ಕಿರಿಯ ತರಬೇತುದಾರ ಸೈಯದ್ ಅಹಮದ್, ಅನಿತ.ಜೆ, ರಂಗಸ್ವಾಮಿ, ಶಿವಕುಮಾರ್, ಸಿದ್ದೇಶ್, ಜೀಲಾನಿ, ರಂಗನಾಥ್, ಮಂಜುನಾಥ್ ಇದ್ದರು.
------ಫೋಟೊ: ದೇವಗಿರಿ ನಗರದ ಭಾರತ್ ರೂರಲ್ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಒಂದು ನೆನಪು ಕಾರ್ಯಕ್ರಮವನ್ನು ಸಾಹಿತಿ ಪರಮೇಶ್ವರಪ್ಪ ಉದ್ಘಾಟಿಸಿದರು.