ಕನ್ನಡಪ್ರಭ ವಾರ್ತೆ ಉದ್ಯಾವರ
ಸಂವಿಧಾನದ ಮೂಲ ಆಶಯ ಈ ದೇಶದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವುದು. ದೇಶದ ಐಕ್ಯತೆ ಉಳಿಸಿಕೊಳ್ಳುವ ಜವಾಬ್ದಾರಿ ಸಂವಿಧಾನ ನಮ್ಮೆಲ್ಲರಿಗೆ ಕೊಟ್ಟಿದೆ. ದೇಶದ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕಾದರೆ ಬಹುತ್ವವನ್ನು ಕಾಪಾಡಿಕೊಳ್ಳಬೇಕು. ಈ ಬಹುತ್ವ ಭಾರತವನ್ನು ಉಳಿಸಿಕೊಳ್ಳುವುದಕ್ಕೆ ಸಂವಿಧಾನ ನಮಗೆ ದಾರಿ ತೋರಿಸುತ್ತದೆ. ಹಾಗಾಗಿ ನಮ್ಮ ಸಂವಿಧಾನ ದೇಶದ ಆತ್ಮಚರಿತ್ರೆ ಎಂದು ಸಾಮಾಜಿಕ ಕಾರ್ಯಕರ್ತೆ, ಸಾಹಿತಿ ಆತ್ರಾಡಿ ಅಮೃತ ಶೆಟ್ಟಿ ಹೇಳಿದರು.ಅವರು ಇಲ್ಲಿನ ಉದ್ಯಾವರ ಫ್ರೆಂಡ್ಸ್ ಸರ್ಕಲ್‌ನ ಸುವರ್ಣ ಸಂಭ್ರಮ ವರ್ಷದ ಫೆಬ್ರವರಿ ತಿಂಗಳ ಕಾರ್ಯಕ್ರಮದ ಅಂಗವಾಗಿ ಉದ್ಯಾವರ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಿದ ‘ಸಂವಿಧಾನ ತಿಳಿಯೋಣ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.ಇಡೀ ಜಗತ್ತಿನಲ್ಲಿ ಭಾರತ ಮತ್ತು ಅಮೆರಿಕದಲ್ಲಿ ಲಿಖಿತ ಸಂವಿಧಾನವಿದೆ. ಅದರಲ್ಲಿ ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾದದ್ದು ಎಂದು ಜಗತ್ತು ಒಪ್ಪಿಕೊಂಡಿದೆ. ಏಕೆಂದರೆ ನಮಗೆ ಈ ಸಂವಿಧಾನ ಬೇರೆಯವರಿಂದ ಹೇರಲ್ಪಟ್ಟದ್ದಲ್ಲ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಕ್ಕೆ ಭಂಗ ಬರದಂತೆ ಸಂವಿಧಾನದ ಮೂಲ ತತ್ವಕ್ಕೆ ವ್ಯತ್ಯಯವಾಗದಂತೆ ನಾವು ಅದನ್ನು ಉಳಿಸಿಕೊಳ್ಳಬೇಕು. ಹಾಗಾಗಿ ಮಕ್ಕಳೇ ಈ ಸಂವಿಧಾನ ಒಳ್ಳೆಯವರ ಕೈಗೆ ಸಿಗುವಂತೆ ತಾವು ಪ್ರಯತ್ನಿಸಬೇಕು ಎಂದು ನುಡಿದರು.ಪ್ರಾಸ್ತಾವಿಕವಾಗಿ ಮಾತಾಡಿದ ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ಸಂವಿಧಾನದ ಬಗ್ಗೆ ಎಲ್ಲರೂ ಕೂಡ ಮಾತನಾಡಬಹುದು, ಆದರೆ ತಾನು ಮಾತಾಡುವ ಸಂವಿಧಾನಕ್ಕೆ ಬದ್ಧರಾಗಿ ಬದುಕಬೇಕಾದದ್ದು ಈ ಕಾಲದ ಅನಿವಾರ್ಯತೆ ಎಂದರು.ಶಾಲಾ ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ಸಂಸ್ಥೆಯ ಅಧ್ಯಕ್ಷ ತಿಲಕ್ ರಾಜ್ ಅವರು ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಆಶಾ ವಾಸು ಅವರು ಸಂವಿಧಾನ ಪೀಠಿಕೆಯ ಪ್ರತಿಜ್ಞೆಯನ್ನು ಬೋಧಿಸಿದರು. ಸದಸ್ಯೆ ಮೇರಿ ಡಿಸೋಜಾ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಅಬಿದ್ ಆಲಿ ಕಾರ್ಯಕ್ರಮ ನಿರ್ವಹಿಸಿದರು.ಸೇರಿದ ಎಲ್ಲಾ ವಿದ್ಯಾರ್ಥಿಗಳಿಗೆ ವಾಣಿ ಪೆರಿಯೋಡಿ ಅವರ ‘ಮಕ್ಕಳಿಗಾಗಿ ಸಂವಿಧಾನ’ ಕೃತಿಯನ್ನು ನೀಡಲಾಯಿತು.