ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಭಾರತ ದೇಶದಲ್ಲಿ ಸಮಾನತೆ ಬರಲು ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನವೇ ಕಾರಣವಾಗಿದೆ ಎಂದು ಸೀತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ತಿಳಿಸಿದರು.ಗುರುವಾರ ಸೀತೂರು ಗ್ರಾಮ ಪಂಚಾಯಿತಿಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು. ಪ್ರತಿ ಗ್ರಾಮ ಪಂಚಾಯಿತಿಗಳಲ್ಲೂ ಸಂಚರಿಸುತ್ತಿರುವ ಸಂವಿಧಾನ ಜಾಥಾದಿಂದ ಗ್ರಾಮಗಳಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿದೆ. ನಮ್ಮ ದೇಶದ ಸಂವಿಧಾನದ ಬಗ್ಗೆ ಹೆಮ್ಮೆಯಾಗಿದೆ. ಮುಂದಿನ ಪೀಳಿಗೆಗೆ ನಮ್ಮ ಸಂವಿಧಾನ ಹಸ್ತಾಂತರಿಸ ಬೇಕಾಗಿದೆ ಎಂದರು.
ಅತಿಥಿಯಾಗಿದ್ದ ವಾಲ್ಮೀಕಿ ಸಂಘದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ವಾಲ್ಮೀಕಿ ಶ್ರೀನಿವಾಸ್ ಮಾತನಾಡಿ, ಸಂವಿಧಾನ ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತ ದೇಶದ ಪ್ರಜೆಗಳಿಗೆ ನೀಡಿದ ದೊಡ್ಡ ಉಡುಗೊರೆಯಾಗಿದೆ. ಪ್ರತಿ ಗ್ರಾಮದ ಜನರಿಗೂ ಸಂವಿಧಾನದ ಬಗ್ಗೆ ಮಾಹಿತಿ ನೀಡಲು ಸಂವಿಧಾನ ಜಾಗೃತಿ ರಥ ಸಂಚರಿಸುತ್ತಿದ್ದು ಇದು ಸರ್ಕಾರದ ಉತ್ತಮ ಕಾರ್ಯಕ್ರಮವಾಗಿದೆ. ಸಂವಿಧಾನದಿಂದಲೇ ಭಾರತ ದೇಶದ ಎಲ್ಲಾ ಪ್ರಜೆಗಳಿಗೂ ಶಿಕ್ಷಣ, ಆರೋಗ್ಯ, ಉದ್ಯೋಗ ಸಿಗುತ್ತಿದೆ ಎಂದರು. ಶಾಲಾ ಮಕ್ಕಳು ಸಂವಿಧಾನ ಪೀಠಿಕೆ ಬೋಧನೆ ಮಾಡಿದರು.ಇದಕ್ಕೂ ಮೊದಲು ಸಂವಿಧಾನ ಜಾಗೃತಿ ಜಾಥಾ ಆಗಮಿಸಿದಾಗ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು ಪುಷ್ಪಾರ್ಚನೆ ಮಾಡಿದರು. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಧ.ಗ್ರಾ.ಯೋಜನೆ ಮಹಿಳೆಯರು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. ನಂತರ ನಡೆದ ಮೆರವಣಿಗೆಯಲ್ಲಿ ಮಂಗಳ ವಾದ್ಯದೊಂದಿಗೆ ಜನ ಪ್ರತಿನಿಧಿಗಳು, ಅಧಿಕಾರಿಗಳು, ಗ್ರಾಮಸ್ಥರು, ಭಾಗವಹಿಸಿದ್ದರು.ಸಂವಿಧಾನ ಜಾಥ ಕಾನೂರು ಗ್ರಾಮ ಪಂಚಾಯಿತಿ, ಆಡುವಳ್ಳಿ, ಬಾಳೆ ಹಾಗೂ ಗುಬ್ಬಿಗಾ ಗ್ರಾಮ ಪಂಚಾಯಿತಿಗೆ ಆಗಮಿಸಿತು. ಈ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ರಮ ಮುಗಿಸಿದ ನಂತರ ರಾತ್ರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಾಥಾ ವಿಶ್ರಾಂತಿ ಪಡೆಯಿತು.
ಶುಕ್ರವಾರ ಬೆಳಿಗ್ಗೆ 10ಕ್ಕೆ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಯಲಿದೆ. ನಂತರ ಹೊನ್ನೇಕೊಡಿಗೆ , ನಾಗಲಾಪುರ, ಮೆಣಸೂರು, ಕಡಹಿನಬೈಲು, ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಗಳಲ್ಲಿ ಜಾಥಾ ಸಂಚರಿಸಿ ನಂತರ ಲಕ್ಕವಳ್ಳಿಯತ್ತ ಪ್ರಯಾಣ ಮುಂದುವರಿಸಲಿದೆ.ಅತಿಥಿಗಳಾಗಿ ಸಂವಿಧಾನದ ಜಾಗೃತಿ ಜಾಥಾದ ನೋಡಲ್ ಅಧಿಕಾರಿ ಜಿಲ್ಲಾ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಜು, ಕೈಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ತಹಸೀಲ್ದಾರ್ ತನುಜ ಟಿ.ಸವದತ್ತಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪ್ರೇಮ, ಸದಸ್ಯರಾದ ಎಚ್.ಇ.ದಿವಾಕರ, ಉಪೇಂದ್ರ, ಎನ್.ಪಿ.ರಮೇಶ್, ಸಿದ್ದಪ್ಪ, ವಿಜಯ, ದಾಮಿನಿ, ಸುಜಾತ, ಕವಿತ, ಸೀತೂರು ಗ್ರಾಮ ಪಂಚಾಯಿತಿ ಪಿಡಿಒ. ಶ್ರೀನಿವಾಸ್, ಕಾರ್ಯದರ್ಶಿ ನವೀನ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ್, ವ್ಯವಸ್ಥಾಪಕ ನಿರಂಜನಮೂರ್ತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ರಮೇಶ್ ಕುಮಾರ್, ಬಾಳೆಹೊನ್ನೂರು ಹೋಬಳಿ ರೆವಿನ್ಯೂ ಇನ್ಸಪೆಕ್ಟರ್ ಮಂಜುನಾಥ್, ಲೆಕ್ಕಾಧಿಕಾರಿ ವಿಶ್ವನಾಥ್ , ಬಕ್ಕಿ ಮಂಜುನಾಥ್ ಮತ್ತಿತರರು ಇದ್ದರು.