ತೆರೆದ ಕಣ್ಣಿನಿಂದ ಸಂವಿಧಾನ ನೋಡಬೇಕು: ಪ್ರಾಧ್ಯಾಪಕ ಪ್ರೊ.ಚಿನ್ನಸ್ವಾಮಿ ಸೋಸಲೆ

KannadaprabhaNewsNetwork | Published : Nov 15, 2024 12:31 AM

ಸಾರಾಂಶ

ಸಮಾಜದ ಸ್ವಾಸ್ಥ್ಯದ ಜೊತೆಗೆ ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಂಡಾಗ ಮಾತ್ರ ಬಸವಣ್ಣ, ಅಂಬೇಡ್ಕರ್ ಅವರಂತಹ ಮೇಧಾವಿಗಳು ಕಂಡ ಭಾರತವನ್ನು ಕಾಣಲು ಸಾಧ್ಯ ಎಂದು ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಪ್ರೊ.ಚಿನ್ನಸ್ವಾಮಿ ಸೋಸಲೆ ಅಭಿಪ್ರಾಯಪಟ್ಟರು. ತುಮಕೂರಿನಲ್ಲಿ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರುನಾವೆಲ್ಲರೂ ಇಂದು ಭಾರತದ ಸಂವಿಧಾನವನ್ನು ತೆರೆದ ಕಣ್ಣಿನಿಂದ ನೋಡಬೇಕಾಗಿದೆ. ಸಮಾಜದ ಸ್ವಾಸ್ಥ್ಯದ ಜೊತೆಗೆ ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಂಡಾಗ ಮಾತ್ರ ಬಸವಣ್ಣ, ಅಂಬೇಡ್ಕರ್ ಅವರಂತಹ ಮೇಧಾವಿಗಳು ಕಂಡ ಭಾರತವನ್ನು ಕಾಣಲು ಸಾಧ್ಯ ಎಂದು ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಪ್ರೊ.ಚಿನ್ನಸ್ವಾಮಿ ಸೋಸಲೆ ಅಭಿಪ್ರಾಯಪಟ್ಟರು.ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ, ಕನ್ನಡ ಮತ್ತು ಇತಿಹಾಸ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಮಾಲೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಗಳಿಗೆ ಗಿಡಕ್ಕೆ ನೀರು ಹಾಕುವುದರ ಮೂಲಕ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದರು.ಸ್ವಾತಂತ್ರ್ಯ ಭಾರತದಲ್ಲಿ ಧರ್ಮ ಮೌನವಾಯಿತು. ಜಾತೀಯತೆ ವಿಶಾಲವಾಯಿತು. ಓಬವ್ವನ ಕಾಲದಲ್ಲಿ ಧರ್ಮವು ಏಕವ್ಯಕ್ತಿಯ ದೇವಸ್ಥಾನವಾಗಿತ್ತು. ಹಾಗಾಗಿ ಭಾರತದ ಚರಿತ್ರೆಯು ಅಸ್ಪೃಶ್ಯತೆಗೆ ಒಳಗಾಗಿದೆ. ಆದ್ದರಿಂದ ಸಂಕುಚಿತಗೊಂಡ ಭಾರತವೇ ಅನಾವರಣ ಗೊಂಡಿದೆ ಎಂದು ಪ್ರೊ.ಚಿನ್ನಸ್ವಾಮಿ ಸೋಸಲೆ ವಿಷಾದ ವ್ಯಕ್ತಪಡಿಸಿದರು.ಭಾರತದಲ್ಲಿ ತಮ್ಮ ಪಾತ್ರ ಏನೆಂದು ತಿಳಿದುಕೊಂಡಾಗ ಮಾತ್ರ ಪ್ರಬುದ್ಧ ಭಾರತ ಕಟ್ಟಬಹುದು. ಎನ್‌ಎಸ್‌ಎಸ್ ನಲ್ಲಿ ಬೌದ್ಧಿಕ ಮತ್ತು ಭೌತಿಕ ಚಿಂತನೆಯ ಅಂಶಗಳು ಪ್ರಮುಖವಾಗಿವೆ. ನಗರ-ಹಳ್ಳಿಗಳನ್ನು ಸ್ವಚ್ಛಗೊಳಿಸುವ ಜೊತೆಗೆ ಹಳ್ಳಿಗಳಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹ ಜಾತೀಯತೆ, ಶಿಕ್ಷಣದಿಂದ ವಂಚಿತರಾದ ಹೆಣ್ಣು ಮಕ್ಕಳ ಪರ ಧ್ವನಿ ಎತ್ತಬೇಕೆಂದು ಜಾಗೃತಿಯನ್ನು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಮೂಲಕ ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಅವರು ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ ಹೇಮಲತಾ ಮಾತನಾಡಿ, ನಮ್ಮದು ಎನ್ನುವ ಭಾವವೇ ಎನ್ ಎಸ್‌ಎಸ್‌ನ ಮತ್ತೊಂದು ರೂಪವಾಗಿದೆ. ಜೀವನದಲ್ಲಿ ಸಮರ್ಪಣ ಭಾವವನ್ನು ಬೆಳೆಸಿಕೊಳ್ಳಿ ಮತ್ತು ಓಬವ್ವನ ಕಥೆಗಳನ್ನು ಆದರ್ಶವಾಗಿಟ್ಟುಕೊಂಡು ಜೀವನವನ್ನು ದೇಶಕ್ಕಾಗಿ ಮುಡುಪಾಗಿಡೋಣ ಎಂದು ಕರೆ ನೀಡಿದರು.ಕನ್ನಡ ವಿಭಾಗದ ಮುಖ್ಯಸ್ಥರದ ಪ್ರೊಫೆಸರ್ ರಮೇಶ್ ಮಣ್ಣೇ ಪ್ರಾಸ್ತವಿಕವಾಗಿ ಮಾತನಾಡಿ, ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಗಳನ್ನು ಸಕ್ರೀಯಗೊಳಿಸುವುದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಜಾಗೃತಿ ಮುಂದಾಗೋಣ ಎಂದರು. ಕಾರ್ಯಕ್ರಮದಲ್ಲಿ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೆಶ್, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಹದೇವ್ ಮುಂಜಿ, ಎಚ್.ಎಲ್. ಆಶಾ ಹಾಗೂ ವಿವಿಧ ವಿಭಾಗದ ಪ್ರಾಧ್ಯಾಪಕರು, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this article