ಸಂವಿಧಾನವನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕಿದೆ: ಶಾಸಕ ಸಿಮೆಂಟ್ ಮಂಜು

KannadaprabhaNewsNetwork | Published : Nov 27, 2024 1:01 AM
26ಎಚ್ಎಸ್ಎನ್5 : ಸಕಲೇಶಪುರ ಪಟ್ಟಣದ ಮಿನಿವಿಧಾನಸೌದ ಆವರಣದಲ್ಲಿ ನಡೆದ ಸಂವಿಧಾನ ದಿನಾಚರಣೆ ಹಾಗೂ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮವನ್ನು ಶಾಸಕ ಸಿಮೆಂಟ್ ಮಂಜು ಬಾಬಾ ಸಾಹೇಬ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಉದ್ಘಾಟಿಸಿದರು. | Kannada Prabha

ಭಾರತದ ಸಂವಿಧಾನ ಪ್ರಪಂಚದಲ್ಲೇ ವಿಶೇಷ ಸ್ಥಾನಮಾನ ಹೊಂದಿರುವ ಸಂವಿಧಾನವಾಗಿದೆ. ವಿವಿಧ ಜಾತಿ, ಧರ್ಮಗಳನ್ನು ಹೊಂದಿರುವ ಭಾರತ ದೇಶದಲ್ಲಿ ಎಲ್ಲರನ್ನು ಓಲೈಕೆ ಮಾಡಿ ಸಂವಿಧಾನ ರಚಿಸುವುದು ಬಹಳ ಕಷ್ಟಕರ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ಭಾರತೀಯ ಸಂವಿಧಾನವಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ ಹಾಗೂ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ೧೯೪೯ರ ನವೆಂಬರ್ ೨೬ರಂದು ಭಾರತದ ಸಂವಿಧಾನ ಅಂಗೀಕಾರವಾಯಿತು. ಪ್ರಪಂಚದಲ್ಲಿಯೇ ಭಾರತ ದೇಶದ ಸಂವಿಧಾನ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ. ಭಾರತೀಯ ಸಂವಿಧಾನ ಯಾವ ರೀತಿ ಇದೆ ಎಂದರೆ ಅತ್ಯಂತ ಸಾಮಾನ್ಯ ವ್ಯಕ್ತಿಯು ಉನ್ನತ ಸ್ಥಾನಕ್ಕೇರಬಹುದಾಗಿದೆ. ಟೀ ಮಾರಿದಂಥ ನರೇಂದ್ರ ಮೋದಿಯವರು ಇಂದು ದೇಶದ ಪ್ರಧಾನಿಯಾಗಿದ್ದಾರೆ ಹಾಗೂ ನನ್ನಂಥ ಸಾಮಾನ್ಯ ವ್ಯಕ್ತಿಯೊಬ್ಬ ಶಾಸಕನಾಗಲು ಸಂವಿಧಾನವೇ ಕಾರಣವಾಗಿದೆ. ಸರ್ವರಿಗೂ ಸಮಾನತೆ ಇರುವ ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಕರ್‌ರವರು ರಚಿಸಿದ್ದಾರೆ. ಈ ನಿಟ್ಟಿನಲ್ಲಿ ಸಂವಿಧಾನವನ್ನು ಎಲ್ಲರೂ ಅರ್ಥೈಸಿಕೊಂಡು ಒಟ್ಟಾಗಿ ಹೋದರೆ ಭಾರತ ಅಭಿವೃದ್ಧಿಯ ಪಥದಲ್ಲಿ ಸಾಗುವುದರಲ್ಲಿ ಅನುಮಾನವಿಲ್ಲ ಎಂದರು.

ಮುಖ್ಯ ಭಾಷಣಕಾರ ಸಿದ್ದೇಶ್ ಮಾತನಾಡಿ, ಭಾರತದ ಸಂವಿಧಾನ ಪ್ರಪಂಚದಲ್ಲೇ ವಿಶೇಷ ಸ್ಥಾನಮಾನ ಹೊಂದಿರುವ ಸಂವಿಧಾನವಾಗಿದೆ. ವಿವಿಧ ಜಾತಿ, ಧರ್ಮಗಳನ್ನು ಹೊಂದಿರುವ ಭಾರತ ದೇಶದಲ್ಲಿ ಎಲ್ಲರನ್ನು ಓಲೈಕೆ ಮಾಡಿ ಸಂವಿಧಾನ ರಚಿಸುವುದು ಬಹಳ ಕಷ್ಟಕರ. ಆದರೂ ಸಹ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ದೇಶದಲ್ಲಿದ್ದ ಬ್ರಿಟಿಷರ ಕಾನೂನು ಹಾಗೂ ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ನಡೆಸಿ ಎಲ್ಲರೂ ಮೆಚ್ಚುವ ಸಂವಿಧಾನವನ್ನು ರಚಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ವರ್ಷಗಳೇ ಕಳೆದರೂ ಸಹ ಇನ್ನು ಹಲವರು ಶೋಷಣೆಗೆ ಒಳಗಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಜಾತ್ಯತೀತತೆಯ ರಾಷ್ಟ್ರದಲ್ಲಿ ಎಲ್ಲರೂ ಸಂವಿಧಾನವನ್ನು ಮೊದಲು ಅರ್ಥ ಮಾಡಿಕೊಳ್ಳಲು ಮುಂದಾಗಬೇಕೆಂದು ಹೇಳಿದರು.

ಉಪವಿಭಾಗಾಧಿಕಾರಿ ಡಾ.ಶ್ರುತಿ, ತಹಸೀಲ್ದಾರ್ ಮೇಘನಾ, ತಾಪಂ ಇಒ ಗಂಗಾಧರ್, ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಆರಕ್ಷಕ ವೃತ್ತ ನಿರೀಕ್ಷಕ ನಿರಂಜನ್ ಕುಮಾರ್ ಸೇರಿ ಇತರರು ಹಾಜರಿದ್ದರು.