ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ದೇಶದಲ್ಲಿ ಸಂವಿಧಾನ ಬದಲಾವಣೆಗೆ ಹಾಗೂ ಪರಾಮರ್ಶೆಗೆ ಪ್ರಯತ್ನ ನಡೆಯುತ್ತಿದೆ. ಇದು ದೇಶಕ್ಕೆ ದೊಡ್ಡಅಪಾಯ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ತಾಲೂಕಿನ ಅಗತಗೌಡನಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನ ಆಚರಣಾ ಸಮಿತಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ೧೩೪ ನೇ ಜನ್ಮ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಂವಿಧಾನ ಬದಲಿಸಿದರೆ ದೇಶಕ್ಕೆ ಗಂಡಾಂತರ ಎದುರಾಗಬಹುದು. ಕೋಮುವಾದ ಹಾಗೂ ಮನುವಾದಿಗಳು ಸಂವಿಧಾನದ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ದುರ್ಬಲಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಎಲ್ಲರೂ ಒಟ್ಟಾಗಿ ಹೋರಾಟ ನಡೆಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.
ಸರ್ವಾಧಿಕಾರಿ ಯಾರು?:ದೇಶದಲ್ಲಿ ತುರ್ತು ಪರಿಸ್ಥಿತಿ ತಂದು ಸರ್ವಾಧಿಕಾರ ಆಡಳಿತ ಕಾಂಗ್ರೆಸ್ ನಡೆಸಿತು ಎಂದು ಬಿಜೆಪಿ ಹೇಳುತ್ತಿದೆ, ಇಡಿ, ಸಿಬಿಐ ಸೇರಿದಂತೆ ಇನ್ನಿತರ ಸಂಸ್ಥೆಗಳ ಉಪಯೋಗಿಸಿಕೊಂಡು ದೇಶದಲ್ಲಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿರುವರು ಯಾರು ಎಂದು ಪ್ರಶ್ನಿಸಿದರು.
ಜಾತ್ಯಾತೀತ ಹಾಗೂ ಸಮಾಜವಾದ ಎಂಬ ಪದ ತೆಗೆದುಹಾಕಬೇಕು ಎನ್ನುತ್ತಿದ್ದಾರೆ. ಸಂಸತ್ ನಲ್ಲಿ ಚರ್ಚೆ ನಡೆದು ಅನುಮೋದನೆಗೊಂಡಿದೆ. ಆದರೂ ಮನುವಾದಿ ಹಾಗೂ ಜಾತಿವಾದಿಗಳ ಮನಸ್ಥಿತಿಯಾಗಿದೆ ಇದೇ ಸಂವಿಧಾನ ಬದಲಾವಣೆಗೆ ಪ್ರಯತ್ನಿಸುತ್ತಿದ್ದಾರೆ ಎಂಬುದಕ್ಕೆ ಇದಕ್ಕಿಂತಾ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದರು.ದೇಶಕ್ಕೆ ಸಂವಿಧಾನ ಬಂದಿದೆ,ಅಗತಗೌಡನಹಳ್ಳಿಯಲ್ಲಿ ೫೦ನೇ ವರ್ಷದಲ್ಲಿ ಅಂಬೇಡ್ಕರ್ ಸಂಘ ಆರಂಭವಾಗಿದೆ. ಜೊತೆಗೆ ಸ್ವಾತಂತ್ರ್ಯ ಬಂದು ೭೫ ವರ್ಷಗಳೇ ಕಳೆದಿವೆ ಆದರೂ ದೇಶದಲ್ಲಿ ಸಂಪೂರ್ಣ ಬದಲಾವಣೆ ಆಗಿಲ್ಲ.ಇನ್ನೂ ನಾವು ಬಾರತೀಯರಾದ ನಾವು ಎನ್ನಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಮ ಸಮಾಜ,ಸಮಾನತೆ ಇಲ್ಲ,ಸ್ವಾಭಿಮಾನ,ಗೌರವ,ಘನತೆ,ಅವಕಾಶ,ಸ್ಥಾನ,ಮಾನ ಬೇಕು ನಮಗೆ,ಅದು ಸಂವಿಧಾನದಲ್ಲಿದೆ ಆಧರೆ ಆದರೂ ಅಸಮಾನತೆ ಇನ್ನೂ ಜೀವಂತವಾಗಿದೆ,ಅಸಮಾನತೆ ತೊಡದು ಹಾಕಿ,ಸಮಾನತೆ ಬರಬೇಕಿದೆ ಎಂದರು.ಪಾಕಿಸ್ತಾನದ ಜೊತೆಗೆ ನಡೆದ ಯುದ್ಧ ಗೆದ್ದದ್ದು ಕೇಂದ್ರ ಸರ್ಕಾರವಲ್ಲ, ದೇಶದ ಜನರು ಏಕತೆ, ಸಮಾನತೆಗೆ ಒಗ್ಗೂಡಿ ಸಂದೇಶ ಕೊಟ್ಟದ್ದರಿಂದಲೇ ಶತೃ ದೇಶ ಹಿಮ್ಮೆಟ್ಟಲು ಕಾರಣವೇ ಹೊರತು ಸರ್ಕಾರವಲ್ಲ, ಸರ್ಕಾರ ಯುದ್ದದ ವಿಷಯದಲ್ಲಿ ಕರ್ತವ್ಯ ಹಾಗೂ ಜವಾಬ್ದಾರಿ ನಿಭಾಯಿಸಿದೆ. ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುತ್ತಿದ್ದವರ ಬಾಯಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ನಾನು ಚರ್ಚಿಸಿ ಸಂವಿಧಾನ ಪೀಠಿಕೆ ಓದುವಂತೆ ಮಾಡಿದೆವು ಎಂದಾಗ ಸಭಿಕರೆಲ್ಲ ಜೋರಾದ ಚಪ್ಪಾಳೆ ತಟ್ಟಿದರು.
ಕೊಳ್ಳೇಗಾಲ ಬಳಿಯ ಚೆನ್ನಲಿಂಗನಹಳ್ಳಿ ಚೇತವನ ಬುದ್ದ ವಿಹಾರದ ಮನೋರಕ್ಷಿತ ಭಂತೇಜಿ,ಮಾಜಿ ಸಂಸದ ಎ.ಸಿದ್ದರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.ಕೊಳ್ಳೇಗಾಲ ಶಾಸಕಎ.ಆರ್.ಕೃಷ್ಣಮೂರ್ತಿ ಹಾಗೂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿದರು.
ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ,ನಿವೃತ್ತ ಅಧಿಕಾರಿಗಳಾದ ಎಚ್.ಆಂಜನೇಯ,ಎ.ಮಾದಪ್ಪ,ಹಾಸನ ಹುಡಾ ಮಾಜಿ ಅಧ್ಯಕ್ಷ ಕೃಷ್ಣಕುಮಾರ್,ಮುಖಂಡರಾದ ಮಳ್ಳೂರು ಶಿವಮಲ್ಲು,ವಾಲೆ ಮಹದೇವ್, ಸಚಿವರ ಆಪ್ತ ಕೆ.ಗೋಪಾಲ್ ಹೊರೆಯಾಲ,ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣಾ ಸಮಿತಿಯ ಸೋಮಶೇಖರ ಮೂರ್ತಿ, ಪಿ. ರಾಘವೇಂದ್ರ,ಶಿವರಾಜು, ದೇವರಾಜು ಇದ್ದರು.2600 ವರ್ಷಗಳ ಹಿಂದೆಯೇ ಸಮ ಸಮಾಜದ ಬೀಜ ಬಿತ್ತಿದ ಬುದ್ಧ
ಗುಂಡ್ಲುಪೇಟೆ: ಸಮ ಸಮಾಜದ ಕನಸು ಕಂಡ ಬುದ್ದ ೨೬೦೦ ವರ್ಷಗಳ ಹಿಂದೆಯೇ ಬೀಜ ಬಿತ್ತಿದ್ರು, ೮೦೦ ವರ್ಷಗಳ ಹಿಂದೆ ಬಸವಣ್ಣ ಬೀಜ ಮರವಾಗುತ್ತ ಬಂತು, ಅಂಬೇಡ್ಕರ್ ಕಾಲದಲ್ಲಿ ಪ್ರಜಾಪ್ರಭುತ್ವದ ಹಣ್ಣು ಕೊಟ್ಟರು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬಣ್ಣಿಸಿದರು. ಬುದ್ದ, ಬಸವ,ಅಂಬೇಡ್ಕರ್ ಸಮ ಸಮಾಜ ನಿರ್ಮಾಣವಾಗಬೇಕು ಎಂಬ ಕನಸಿನೊಂದಿಗೆ ಜೀವವನ್ನೇ ಸವೆಸಿದರು. ಬುದ್ದ ನೆಟ್ಟ ಬೀಜ ಬಸವಣ್ಣನ ಕಾಲದಲ್ಲಿ ಮರವಾಯಿತು ಆದರೆ ಅಂಬೇಡ್ಕರ್ ಕಾಲದಲ್ಲಿ ಪ್ರಜಾಪ್ರಭುತ್ವ ಬಂದು ಗಿಡದಲ್ಲಿದ್ದ ಹಣ್ಣು ದೇಶದ ಜನರು ತಿನ್ನುತ್ತಿದ್ದಾರೆ ಇದು ಸಾಮಾನ್ಯ ಸಂಗತಿನಾ ಎಂದರು.ಬಲಾಡ್ಯರಿಂದ ಬಲ ಹೀನರಿಗೆ ಅಭಿವೃದ್ದಿ,ರಕ್ಷಣೆ ನೀಡುವುದೇ ಪ್ರಜಾಪ್ರಭುತ್ವದ ಆಶಯವಾಗಿದೆ. ಸ್ವಾಭಿಮಾನದ ಬದುಕು ಬಯಸಿದ ಬುದ್ದ,ಬಸವ,ಅಂಬೇಡ್ಕರ್ ಚರಿತ್ರೆಯಲ್ಲಿ ಉಳಿದಿದ್ದಾರೆ.ಅವರ ಸ್ಮರಣೆ ಆಗಬೇಕು ಎಂದರು.
ಪ್ರಸ್ತುತ ದಿನಗಳಲ್ಲಿ ಯಾರಿಗೂ ಹಿಂದುತ್ವ ಬೇಡ, ಮುಂದುತ್ವ ಬೇಕು: ಭಗವಾನ್ಗುಂಡ್ಲುಪೇಟೆ: ಪ್ರಸ್ತುತ ದಿನಗಳಲ್ಲಿ ಯಾರಿಗೂ ಹಿಂದುತ್ವ ಬೇಡ, ಮುಂದುತ್ವಬೇಕು. ದೇವಸ್ಥಾನಕ್ಕೆ ಹೋಗೋದು ಮೊದಲು ಬಿಡಿ ಎಲ್ಲಾ ಸರಿಹೋಗುತ್ತೇ ಎಂದು ವಿಚಾರವಾದಿ ಕೆ.ಎಸ್.ಭಗವಾನ್ ಹೇಳಿದರು.
ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿ, ಹಿಂದುತ್ವ ಹೆಸರು ಬಂದದ್ದು ೧೦೩೦ ರ ಸಮಯದಲ್ಲಿ.ಯಾವುದೇ ವೇದ,ಪುರಾಣ,ಉಪನಿಸತ್,ರಾಮಾಯಣ,ಮಹಾಭಾರತದಂತ ಮಹಾಕಾವ್ಯದಲ್ಲೂ ಎಲ್ಲೂ ಹಿಂದು ಎಂಬ ಪದವೇ ಇಲ್ಲ ಎಂದರು.ಪಾರ್ಸಿಯನ್ ಭಾಷೆಯಲ್ಲಿ ಸಿಂಧು ನದಿಯಲ್ಲಿ ಹಿಂದು ಎಂದು, ಇಂಗ್ಲಿಷ್‌ನವರು ಹಿಂದು, ಮುಸ್ಲಿಂ ಎಂದು ಬೇರ್ಪಡಿಸಿದರು. ಹೀಗೆ ಹಿಂದು ಹೆಸರು ಬಂದಿದೆ ಆದರೂ ಹಿಂದು ಹೆಸರಲ್ಲಿ ತಮ್ಮ ಬೇಳೆ ಮನುವಾದಿಗಳು ಬೇಯಿಸಿಕೊಳ್ಳುತ್ತಿದ್ದಾರೆ ಎಂದರು.
ದೇವರು ಹಾಗೂ ದೇವಸ್ಥಾನಕ್ಕೆ ಹೋಗೋ ಮೂಢ ನಂಬಿಕೆ ಬಿಟ್ಟರೆ ಎಲ್ಲಾ ಸರಿಹೋಗುತ್ತೇ, ಮಕ್ಕಳಿಗೆ ಮೊದಲು ಶಿಕ್ಷಣ ಕೊಡಿಸಿ ಆಗ ಸಮಾನತೆ ಬರುತ್ತದೆ ಆಗ ಹಿಂದುತ್ವ ಹೋಗಿ ಮುಂದುತ್ವ ಬರುತ್ತೇ ಆ ಕೆಲಸ ಮಾಡಲು ಮಾಜಿ ಸಂಸದ ಎ.ಸಿದ್ದರಾಜು ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ ಎಂದರು.ಅಯೋಧ್ಯೆಯಲ್ಲಿ ಬಿಜೆಪಿ ಯಾಕೆ ಗೆಲ್ಲಲಿಲ್ಲ:
ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿದರು ಅಲ್ಲಿ ಯಾಕೆ ಬಿಜೆಪಿ ಗೆಲ್ಲಲಿಲ್ಲ. ರಾಮ ದೇವರು ಅಲ್ಲವೇ ಅಲ್ಲ, ಆತ ದೇವನಾಗಿದ್ದರೆ ಯಾಕೆ ಸಂಭೂಕನನ್ನು ಕೊಂದ? ಹೇಳಿ ಎಂದು ಸಭಿಕರನ್ನು ಪ್ರಶ್ನಿಸಿದರು.ಆರ್‌ಎಸ್‌ಎಸ್ ಎಂದರೆ ರಾಷ್ಟ್ರೀಯ ಸುಳ್ಳುಗಾರರ ಸಂಘ:
ಆರ್‌ಎಸ್‌ಎಸ್ ಎಂದರೆ, ರಾಷ್ಟ್ರೀಯ ಸುಳ್ಳುಗಾರರ ಸಂಘ ಮತ್ತು ರಾಷ್ಟ್ರೀಯ ಸೈತಾನರ ಸಂಘ. ಅಂಬೇಡ್ಕರ್ ಜಯಂತಿಯಲ್ಲಿ ಮುಖ್ಯ ಭಾಷಣದಲ್ಲಿ ಮಾತನಾಡಿ ರಾಮನ ಹೆಸರು ಹೇಳಿ ಹೊಡೆದಾಟ ಮಾಡಿಸೋರೇ ಆರ್‌ಎಸ್‌ಎಸ್,ರಾಮ ದೇವರಲ್ಲ ಆತ ಮಾನವ ಎಂದು ಕೆ.ಎಸ್.ಭಗವಾನ್ ಪ್ರತಿಪಾದಿಸಿದರು.ತ್ರಿಡಿ ಇಲ್ಲದ ಅಂಬೇಡ್ಕರ್ ಜಯಂತಿಗೆ ಮೆಚ್ಚುಗೆ
ಗುಂಡ್ಲುಪೇಟೆ : ತಾಲೂಕಿನ ಅಗತಗೌಡನಹಳ್ಳಿ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ತ್ರಿಡಿ ಇಲ್ಲದೆ ಜಯಂತಿ ಆಚರಣೆ ಮಾಡಿದ್ದಕ್ಕೆ ಗ್ರಾಮಸ್ಥರಿಗೆ ಉರಿಲಿಂಗಿ ಪೆದ್ದಿ ಮಠಾಧೀಶ ಜ್ಞಾನ ಪ್ರಕಾಶ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.ಇತ್ತೀಚನ ದಿನಗಳಲ್ಲಿ ಯಾವುದೇ ಜಯಂತಿಗಳಿರಲಿ, ತ್ರಿಡಿ ಎಂದರೆ ಡ್ಯಾನ್ಸ್, ಡಿಜೆ,ಡ್ರಿಂಕ್ಸ್ ಇರುತ್ತವೆ. ಆದರೆ ಅಗತಗೌಡಹಳ್ಳಿಯಲ್ಲಿ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಯಾವುದೇ ರೀತಿಯ ತ್ರಿ ಡಿ ಇರಲಿಲ್ಲ ಇದು ಎಲ್ಲೆಡೆ ಆಗಬೇಕು ಎಂದರು.
ಅಂಬೇಡ್ಕರ್ ಜಯಂತಿಯಲ್ಲಿ ಡಿಜೆ ಹಾಕಿ ಕುಣಿಯೋದು,ಡ್ರಿಂಕ್ ಮಾಡಿ ಡ್ಯಾನ್ಸ್ ಮಾಡೋದು ಆದರ್ಶ ನಾಯಕರ ಆಶಯಗಳಿಗೆ ವಿರುದ್ಧವಾದದ್ದು,ಆದರಿಲ್ಲಿ ಯಾವುದೇ ರೀತಿಯ ತ್ರಿ ಡಿ ಇಲ್ಲದೆ ವಿಚಾರಕ್ಕೆ ಅವಕಾಶ ಮಾಡಿದ್ದು ಸರಿ ಎಂದರು.