ಹಳಿಯಾಳ: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿಯನ್ನು ಕಲ್ಪಿಸುವ ಸಂವಿಧಾನವನ್ನು ನೀಡಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತೀಯರ ಹೃದಯದಲ್ಲಿ ಸದಾ ಚಿರಸ್ಮರಣಿಯರಾಗಿದ್ದಾರೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಘಸ್ತೆ ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ ಅವರ ಜೀವನ ಬಗ್ಗೆ ಉಪನ್ಯಾಸ ನೀಡಿದ ಕನ್ನಡ ಉಪನ್ಯಾಸಕ ಶಿಕ್ಷಣ ಚಿಂತಕ ಶಾಂತಾರಾಮ ಚಿಬುಲಕರ ಅವರು, ಸಾಮಾಜಿಕ ಅಸಮಾನತೆ, ಬಡತನ, ಅನ್ಯಾಯ, ಅಧರ್ಮ, ಅಸ್ಪೃಶ್ಯತೆ, ಶೋಷಣೆ, ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದ ಡಾ. ಅಂಬೇಡ್ಕರ್ ಅವರು ಭಾರತೀಯರ ಮನದಲ್ಲಿ ಚಿರಸ್ಥಾಯಿಯಾಗಿ ನಿಂತಿದ್ದಾರೆ ಎಂದರು.
ಡಾ. ಬಾಬು ಜಗಜೀವನ ರಾಮ್ ಅವರ ಬಗ್ಗೆ ಉಪನ್ಯಾಸ ನೀಡಿದ ಶಿಕ್ಷಕ ಮೌನೇಶ್ವರ ಬಾರಿಕಾರ ಅವರು, ಕಾರ್ಮಿಕರು ಮತ್ತು ದೀನದಲಿತರ ಉದ್ಧಾರ ಹಾಗೂ ಸಾಮಾಜಿಕ ಸಮಾನತೆಗಾಗಿ ಬಾಬೂಜಿಯವರು ಸಲ್ಲಿಸಿದ ಸೇವೆ ಮಾದರಿಯಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಆರ್.ಎಚ್. ಭಾಗವಾನ ಅವರು ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಇಒ ಪ್ರಮೋದ ಮಹಾಲೆ, ಸಿಡಿಪಿಒ ಡಾ. ಲಕ್ಷ್ಮೀದೇವಿ, ಸಮಾಜ ಕಲ್ಯಾಣಾಧಿಕಾರಿ ಅಶೋಕ ಪವಾರ, ಸಹಾಯಕ ಕೃಷಿ ನಿರ್ದೇಶಕ ಪಿ.ಐ. ಮಾನೆ, ಸಿಪಿಐ ಜೈಪಾಲ್ ಪಾಟೀಲ, ಹೆಸ್ಕಾಂ ಎಇಇ ರವೀಂದ್ರ ಮೆಟಗುಡ್ಡ್, ಪಶು ವೈದ್ಯಾಧಿಕಾರಿ ಡಾ. ಕೆ.ಎಂ. ನದಾಪ್, ಪೀಶಪ್ಪಾ ಮೇತ್ರಿ, ಮಂಜುನಾಥ ಗಜಾಕೋಶ, ಮಾರುತಿ ಕಲಬಾವಿ, ಶಿವಾಜಿ ಬಂಡಿವಾಡ, ರವಿ ಕಲಬಾವಿ ಸೇರಿದಂತೆ ಹಲವಾರು ಪ್ರಮುಖರು ಇದ್ದರು. ರಮೇಶ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.