ಕನ್ನಡಪ್ರಭ ವಾರ್ತೆ ಯಾದಗಿರಿ ಇಲ್ಲಿನ ಬಸವೇಶ್ವರ ನಗರ ಹಾಗೂ ಲಕ್ಷ್ಮೀ ನಗರದಲ್ಲಿ ಕುಡಿಯುವ ಹಾಗೂ ಬಳಸುವ ನೀರಿನ ಬವಣೆ ಹೆಚ್ಚಾಗಿದ್ದು, ಶೀಘ್ರದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ, ನಗರ ನಿವಾಸಿಗಳ ನೀರಿನ ಬವಣೆ ನೀಗಿಸುವಂತೆ ಒತ್ತಾಯಿಸಿ, ವಾರ್ಡ್ ನಂ.25ರ ಬಸವೇಶ್ವರ ನಗರದ ಐವತ್ತಕ್ಕೂ ಹೆಚ್ಚು ಹಿರಿಯ ನಾಗರಿಕರು ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ ಅವರನ್ನು ಬುಧವಾರ ಖಾಸಗಿ ಕಾರ್ಯಾಲಯದಲ್ಲಿ ಖುದ್ದಾಗಿ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿದ್ದಾರೆ.
ಹೆಚ್ಚಾದ ಫಿಲ್ಟರ ಪಾಯಿಂಟ್‌ಗಳ ಹಾವಳಿ: ನೀರಿನಿಂದ ಹಣ ಮಾಡಬೇಕೆಂದು ಕೆಲವರು ಬಡಾವಣೆಗಳಲ್ಲಿ ಆರ್‌ಒ ಪ್ಲಾಂಟ್ ಮೂಲಕ ಐನೂರಕ್ಕೂ ಹೆಚ್ಚು ಅಡಿ ಆಳದಲ್ಲಿ ಬೋರವೆಲ್ ಕೊರೆಯಿಸಿ ಅಧಿಕ ಎಚ್‌ಪಿಯ ಮೋಟಾರ್‌ಗಳನ್ನು ಅಳವಡಿಸಿ ನೀರನ್ನು ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು. ಇದರಿಂದಾಗಿ ಇಡೀ ಬಸವೇಶ್ವರ ನಗರ ಹಾಗೂ ಲಕ್ಷ್ಮೀ ನಗರದಲ್ಲಿರುವ ಬೋರವೆಲ್‌ಗಳು ಬತ್ತಿ ಹೋಗಿರುವ ಬಗ್ಗೆ ಆರೋಪಿಸಿದ ನಿವಾಸಿಗಳು ಆರ್‌ಒ ಪ್ಲಾಂಟ್ ಹಾಕಿರುವವರ ಬಳಿ ಸರ್ಕಾರದ ಪರವಾನಗಿ ಪರಿಶೀಲಿಸಬೇಕು, ಜನನಿಬಿಡ ಪ್ರದೇಶದಲ್ಲಿ ಬೃಹತ್ ಆರ್‌ಒ ಪ್ಲಾಂಟುಗಳಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಶಾಸಕರ ಎದುರು ನಗರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರು.
ಆಟಕ್ಕುಂಟು ಲೆಕ್ಕಕ್ಕಿಲ್ಲದ ನಗರಸಭೆ ನೀರು: ಬಸವೇಶ್ವರ ನಗರದಲ್ಲಿ 15 ವರ್ಷಗಳಿಂದಲೂ ನಗರಸಭೆ ಸರಬರಾಜು ಮಾಡುವ ನೀರು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಕಾರಣ ಫಿಲ್ಟರ್ ಬೆಡ್‌ನಿಂದ ಬಂದ ಪೈಪ್‌ಲೈನ್ ಬಸವೇಶ್ವರ ನಗರಕ್ಕೆ ಕೊನೆಗೊಂಡಿದೆ. ಹಾಗಾಗಿ, ಈ ಭಾಗದ ಬಹುತೇಕ ಜನರಿಗೆ ಸರಿಯಾಗಿ ನೀರು ಬರದೆ ತೊಂದರೆ ಅನುಭವಿಸುತ್ತಿರುವುದಾಗಿ ನಗರಸಭೆ ವಿರುದ್ಧ ಆರೋಪಿಸಿದರು.-ನೀರಿನ ಟ್ಯಾಂಕ್ ಅಳವಡಿಸಿ: ಬಸವೇಶ್ವರ ನಗರದಲ್ಲಿ ಉಲ್ಬಣಗೊಂಡಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವೆಂದರೆ ಅಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿದಲ್ಲಿ ಮಾತ್ರ ಆ ಬಡಾವಣೆಯ ನಿವಾಸಿಗಳು ನೀರಿನ ಸಮಸ್ಯೆಯಿಂದ ಹೊರಬರಬಹುದು, ಕಾರಣ ಅತ್ಯಂತ ಶೀಘ್ರದಲ್ಲಿ ಒಂದು ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಕೊಡುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳು, ನಗರ ಪ್ರಾಧಿಕಾರದ ಅದ್ಯಕ್ಷ ಹಾಗೂ ಬಸವೇಶ್ವರ ನಗರ ನಿವಾಸಿಯಾದ ವಿನಾಯಕ ಮಾಲಿ ಪಾಟೀಲ್, ಬಡಾವಣೆಯ ಹಿರಿಯ ನಾಗರಿಕರಾದ ಚಂದ್ರಕಾಂತ ಲೇವಡಿ, ಮಲ್ಲರೆಡ್ಡಿಗೌಡ ಕೊಳ್ಳಿ, ಮಲ್ಲರೆಡ್ಡಿಗೌಡ ಅರಿಕೇರಿ, ಪರ್ವತರೆಡ್ಡಿ ನಾಯ್ಕಲ್, ರಾಜಶೇಖರ ಬಾಪೂರೆ, ಸಿದ್ದಪ್ಪ ಕೆಂಬಾವಿ, ಮಹೇಶರೆಡ್ಡಿ ಮಕ್ತಲ್, ಸೂರ್ಯಕಾಂತ ಕಶೇಟ್ಟಿ, ಉಮಾಪತಿ, ವಿಶ್ವನಾಥ ಜೋಳದಡಗಿ ಸೇರಿದಂತೆ ಐವತ್ತಕ್ಕೂ ಹೆಚ್ಚು ನಿವಾಸಿಗಳು ಉಪಸ್ಥಿತರಿದ್ದರು. ಶಾಸಕರಿಂದ ಸ್ಪಂದನೆಎಲ್ಲವನ್ನೂ ತದೇಕಚಿತ್ತದಿಂದ ಆಲಿಸಿದ ಶಾಸಕ ಚೆನ್ನಾರೆಡ್ಡಿ ಪಾಟೀಲರು ಸ್ಥಳದಲ್ಲಿ ನಗರಸಭೆ ಅಧಿಕಾರಿಗಳನ್ನು ಕರೆಯಿಸಿ ಸಮಸ್ಯೆಗೆ ಪರಿಹಾರ ನೀಡಬೇಕು. ಬಡಾವಣೆಯಲ್ಲಿ ಆರ್‌ಒ ಪ್ಲಾಂಟ್ ಗಳನ್ನು ಸರಿಯಾಗಿ ಮಳೆ ಬರುವವರೆಗೆ ಕೂಡಲೇ ಬಂದ್ ಮಾಡುವಂತೆ ಸೂಚನೆ ನೀಡಿದರು. ಅಲ್ಲದೆ, ನೀರಿನ ಟ್ಯಾಂಕ್ ಬಗ್ಗೆ ಅಧಿಕಾರಿಗಳಲ್ಲಿ ಚರ್ಚಿಸಿ ಮಾಹಿತಿ ಪಡೆದು, ಆದಷ್ಟು ಬೇಗ ನೀರಿನ ಟ್ಯಾಂಕ್ ನಿರ್ಮಿಸಿ ಕೋಡುವುದಾಗಿ ಭರವಸೆ ನೀಡಿದರು.