ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹಾಲು ಉತ್ಪಾದಕರ ಸಹಕಾರ ಸಂಘಗಳು ತಮ್ಮ ಸಂಘದ ಆವರಣದಲ್ಲಿ ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸುವಂತೆ ತಾಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಸಕ್ತ ಸಾಲಿನಲ್ಲಿ ತಾಲೂಕು ವ್ಯಾಪ್ತಿಯಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಕೆರೆ-ಕಟ್ಟೆಗಳೂ ನೀರಿಲ್ಲದೇ ಬರಿದಾಗಿವೆ. ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳೂ ಸ್ಥಗಿತಗೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.
ಅಂತರ್ಜಲ ಮಟ್ಟ ಕುಸಿದು ಬೋರ್‌ವೆಲ್ ಗಳು ಬರಿದಾಗಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಜಾಲವೂ ಅಸ್ತವ್ಯಸ್ಥಗೊಂಡಿದೆ. ತಾಲೂಕು ಆಡಳಿತ ಗ್ರಾಮೀಣ ಭಾಗದಲ್ಲಿ ಟ್ಯಾಂಕರ್ ಗಳ ಮೂಲಕ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ. ಟಾಸ್ಕ್ ಪೋರ್ಸ್ ಕುಡಿಯುವ ನೀರು ಪೂರೈಕೆಗೆ ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ.ಟ್ಯಾಂಕರ್ ನೀರು ಜನರ ಕುಡಿಯುವ ನೀರಿನ ದಾಹವನ್ನು ಮಾತ್ರ ತಣಿಸುತ್ತಿದ್ದು, ರೈತರ ಎಮ್ಮೆ, ದನಗಳು, ಆಡು, ಕುರಿಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿವೆ. ರೈತರು ಜಾನುವಾರಗಳ ಕುಡಿಯುವ ನೀರಿನ ದಾಹ ತಣಿಸಲು ನೀರಿನ ಮೂಲಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ತೀವ್ರ ಬರಗಾಲದಿಂದ ಕೃಷಿ ಕ್ಷೇತ್ರ ಸಂಪೂರ್ಣ ಹಾಳಾಗಿದ್ದು, ಸಂಕಷ್ಟದ ಸನ್ನಿವೇಶದಲ್ಲಿ ಹೈನುಗಾರಿಕೆಯನ್ನು ನಂಬಿ ರೈತರು ಬದುಕುತ್ತಿದ್ದಾರೆ.
ಬರಗಾಲದ ಪರಿಣಾಮ ಹೈನುಗಾರಿಕೆ ಮೇಲೂ ಆಗಿದ್ದು ಜಾನುವಾರುಗಳಿಗೆ ಮೇವಿನ ಜೊತೆಗೆ ಕುಡಿಯುವ ನೀರಿನ ಬರವೂ ಎದುರಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳು ಹಸು, ಎಮ್ಮೆ ಜಾನುವಾರುಗಳ ನೆರವಿಗೆ ನಡೆಯುತ್ತಿವೆ. ಆದ್ದರಿಂದ ತಮ್ಮ ವ್ಯಾಪ್ತಿಯಲ್ಲಿ ತಮ್ಮ ಸಹಕಾರ ಸಂಘದ ಕಟ್ಟಡಗಳ ಆವರಣದಲ್ಲಿ ಜಾನುವಾರುಗಳ ಅಗತ್ಯತೆಗೆ ಅನುಗುಣವಾಗಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಅವುಗಳಿಗೆ ನೀರು ತುಂಬಿಸಿ ಜಾನುವಾರುತಾಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜುಗಳ ರಕ್ಷಣೆಗೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.ಶಾಸಕ ಎಚ್.ಟಿ.ಮಂಜು ಮತ್ತು ಜೆಡಿಎಸ್ ಮುಖಂಡ ಡಾಲು ರವಿ ಮನ್ಮುಲ್ ಒಕ್ಕೂಟದ ನಿರ್ದೇಶಕರಾಗಿದ್ದಾರೆ. ತಕ್ಷಣವೇ ಒಕ್ಕೂಟದ ಅಧ್ಯಕ್ಷರು ಮತ್ತು ನಿರ್ದೇಶಕರೊಂದಿಗೆ ಮಾತನಾಡಿ, ಜಿಲ್ಲೆಯಾದ್ಯಂತ ಅಗತ್ಯವಿರುವ ಕಡೆಗಳಲ್ಲಿ ಸಂಘಗಳ ಆವರಣದಲ್ಲಿ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸಿದರೆ ಹೈನುಗಾರಿಕೆ ನಂಬಿ ಬದುಕುತ್ತಿರುವ ಜಿಲ್ಲೆಯ ಎಲ್ಲಾ ರೈತರಿಗೂ ಅನುಕೂಲವಾಗಲಿದೆ ಎಂದು ಸಲಹೆ ನೀಡಿದ್ದಾರೆ.