ರಸ್ತೆ ಹಾಗೂ ರೈಲು ಸಾರಿಗೆಯನ್ನು ಇನ್ನಷ್ಟು ಸುಗಮ ಹಾಗೂ ಸುರಕ್ಷಿತವಾಗಿಸಲು ನಗರದಲ್ಲಿ ರೈಲ್ವೆ ಇಲಾಖೆಯಿಂದ ಕ್ಯಾತ್ಸಂದ್ರ, ಬಡ್ಡಿಹಳ್ಳಿ, ಬಟವಾಡಿ ಪ್ರದೇಶಗಳಲ್ಲಿ 244.02 ಕೋಟಿ ರು. ವೆಚ್ಚದಲ್ಲಿ 3 ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತದೆ ಎಂದು ಕೇಂದ್ರ ಜಲ ಶಕ್ತಿ ಮತ್ತು ರೈಲ್ವೇ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರು
ರಸ್ತೆ ಹಾಗೂ ರೈಲು ಸಾರಿಗೆಯನ್ನು ಇನ್ನಷ್ಟು ಸುಗಮ ಹಾಗೂ ಸುರಕ್ಷಿತವಾಗಿಸಲು ನಗರದಲ್ಲಿ ರೈಲ್ವೆ ಇಲಾಖೆಯಿಂದ ಕ್ಯಾತ್ಸಂದ್ರ, ಬಡ್ಡಿಹಳ್ಳಿ, ಬಟವಾಡಿ ಪ್ರದೇಶಗಳಲ್ಲಿ 244.02 ಕೋಟಿ ರು. ವೆಚ್ಚದಲ್ಲಿ 3 ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತದೆ ಎಂದು ಕೇಂದ್ರ ಜಲ ಶಕ್ತಿ ಮತ್ತು ರೈಲ್ವೇ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.
ನಗರದ ಬಟವಾಡಿ ರೈಲ್ವೆ ಗೇಟ್ ಬಳಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ 5 ಮೇಲ್ಸೇತುವೆ ಕಾಮಗಾರಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ನಗರದಲ್ಲಿ 3, ಹರಿಯೂರು (ಮಲ್ಲಸಂದ್ರ) ಬಳಿ 1, ಗುಬ್ಬಿ ತಾಲೂಕಿನ ನಿಟ್ಟೂರು ರೈಲ್ವೆ ಸ್ಟೇಷನ್ ಬಳಿ 1 ಸೇರಿ ಒಟ್ಟು 5 ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಬಟವಾಡಿ ಬಳಿ ನಿರ್ಮಿಸಲಿರುವ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಸಾರ್ವಜನಿಕರೊಂದಿಗೆ ಚರ್ಚಿಸಿದ ಅವರು, ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕಾಮಗಾರಿ ನಿರ್ಮಾಣ ಮಾಡಲಾಗುವುದು. ಅಭಿವೃದ್ಧಿ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಕಾಮಗಾರಿ ನಡೆಯುವ ಸ್ಥಳಕ್ಕೆ ಸಂಬಂಧಿಸಿದ ದಾಖಲೆ, ನೀರಿನ ಪೈಪ್ ಲೈನ್, ವಿದ್ಯುತ್ ಲೈನ್ ಸೇರಿದಂತೆ ಅಗತ್ಯ ಪ್ರಕ್ರಿಯೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಮಹಾನಗರ ಪಾಲಿಕೆ ಇಂಜಿನಿಯರ್‌ಗೆ ಸೂಚನೆ ನೀಡಿದರು.
ಯಾವುದಕ್ಕೆ ಅನುಮೋದನೆ : ನಗರದ ಕ್ಯಾತ್ಸಂದ್ರ ಸ್ಟೇಷನ್-ಮೈದಾಳ ಗೇಟ್ ನಡುವಿನ ಮೇಲ್ಸುತುವೆಗಾಗಿ 57.3 ಕೋಟಿ ರು., ಬಡ್ಡಿಹಳ್ಳಿ ಗೇಟ್ ಅಗ್ನಿಶಾಮಕ ದಳದ ಬಳಿ ಮೇಲ್ಸೇತುವೆ ನಿರ್ಮಾಣಕ್ಕಾಗಿ 89.4 ಕೋಟಿ ರು., ಬಟವಾಡಿ ಗೇಟ್ ಬಳಿ ಸೇತುವೆ ನಿರ್ಮಾಣಕ್ಕಾಗಿ 97.69 ಕೋಟಿ ರು., ಹರಿಯೂರು ರಸ್ತೆ ಬಳಿ ಮೇಲ್ಸೆತುವೆ ನಿರ್ಮಿಸಲು 55.99 ಕೋಟಿ ರು., ಹಾಗೂ ತುಮಕೂರು-ಮೈಸೂರು ರಸ್ತೆ ನಿಟ್ಟೂರು ರೈಲ್ವೆ ಸ್ಟೇಷನ್ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲು 50.57 ಕೋಟಿ ರು. ಸೇರಿದಂತೆ 5 ಮೇಲ್ಸೆತುವೆಗಳ ನಿರ್ಮಾಣಕ್ಕೆ ಒಟ್ಟು 350 ಕೋಟಿ ರು.ಗೆ ಅನುಮೋದನೆ ದೊರೆತಿದೆ ಎಂದು ಕೇಂದ್ರ ಸಚಿವ ಸೋಮಣ್ಣ ತಿಳಿಸಿದರು.
ನಗರ ಶಾಸಕ ಜ್ಯೋತಿ ಗಣೇಶ್, ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಸೀಲ್ದಾರ್ ಸಿದ್ದೇಶ್, ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.