ರಾಮನಗರ: ಜಿಲ್ಲೆಯಲ್ಲಿ ಬೃಹತ್ ರಸಗೊಬ್ಬರ ಗೋದಾಮು ನಿರ್ಮಾಣಕ್ಕೆ ಪಾದರಹಳ್ಳಿ ಬಳಿ ಜಾಗ ಗುರುತಿಸಿದ್ದು, ಇದಕ್ಕಾಗಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ 6 ಕೋಟಿ ಅನುದಾನ ಮಂಜೂರು ಮಾಡಿದೆ ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಯರೇಹಳ್ಳಿ ಮಂಜು ತಿಳಿಸಿದರು.
ಈ ಹಿಂದೆ ಎಚ್.ಎನ್.ಅಶೋಕ್ ಅವರು ಜಿಪಂ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಗೋದಾಮು ನಿರ್ಮಾಣಕ್ಕೆ ಪಾದರಹಳ್ಳಿ ಬಳಿ 4 ಎಕರೆ ಜಮೀನು ಗುರುತಿಸಿ ಮೀಸಲಿಡಲಾಗಿತ್ತು. ಅನುದಾನ ತರಲು ಸಹಕರಿಸಿದ ಶಾಸಕರಾದ ಎಚ್.ಸಿ.ಬಾಲಕೃಷ್ಣ ಹಾಗೂ ಇಕ್ಬಾಲ್ ಹುಸೇನ್ ಅವರಿಗೆ ಗೋದಾಮು ನಿರ್ಮಾಣದ ಪೂರ್ಣ ಶ್ರೇಯ ಸಲ್ಲಬೇಕು ಎಂದು ಹೇಳಿದರು.
ಡಿ.7ಕ್ಕೆ ಡಿಸಿಸಿ ಬ್ಯಾಂಕ್ ಚುನಾವಣೆ:ಬೆಂಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಈ ಹಿಂದೆ ಜಿಲ್ಲೆಯಲ್ಲಿ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಹಾಗೂ ಬಮುಲ್‌ನಿಂದ ಒಂದು ಸ್ಥಾನ ಸೇರಿದಂತೆ ಒಟ್ಟು 5 ಇದ್ದ ನಿರ್ದೇಶಕ ಸ್ಥಾನಗಳನ್ನು ೮ಕ್ಕೆ ಹೆಚ್ಚಿಸಲಾಗಿದೆ. ಮೂರು ಸೊಸೈಟಿಗೆ ಒಬ್ಬರು ನಿರ್ದೇಶಕರು, 7 ಸೊಸೈಟಿಗೆ ಒಬ್ಬ ಪ್ರತಿನಿಧಿ, 28, 30, 32 ಸೊಸೈಟಿಗೆ ಒಬ್ಬರಂತೆ ನಿರ್ದೇಶಕ ಸ್ಥಾನಗಳಿದ್ದವು. ರೈತರ ಹಿತದೃಷ್ಟಿಯಿಂದ ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಮಾರ್ಗದರ್ಶನದಲ್ಲಿ ಹಾರೋಹಳ್ಳಿ ತಾಲೂಕಿಗೆ ಒಂದು ನಿರ್ದೇಶಕ ಸ್ಥಾನ, ಕನಿಷ್ಠ 14-15 ಸೊಸೈಟಿಗೆ ಒಂದರಂತೆ ಒಬ್ಬ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳಲು ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನು ಪ್ರಶ್ನಿಸಿ ಇಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಾದ, ವಿವಾದ ಆಲಿಸಿದ ನ್ಯಾಯಾಲಯ ಅಂತಿಮವಾಗಿ ನಮ್ಮ ಪರವಾಗಿಯೇ ತೀರ್ಪು ನೀಡಿದೆ. ಭೌಗೋಳಿಕವಾಗಿ ಹಾಗೂ ರೈತರಿಗೆ ಅನುಕೂಲವಾಗುವಂತಹ ಕಾರ್ಯವನ್ನೇ ಮಾಡಿದ್ದಾರೆ ಎಂದು ಆದೇಶದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಜಗದೀಶ್ ಮಾತನಾಡಿ, ಕ್ಯಾಸಾಪುರ ಸೊಸೈಟಿಗೆ ಹಿಂದಿನಿಂದಲೂ ಅವಿರೋಧವಾಗಿಯೇ ನಿರ್ದೇಶಕರು, ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಮಾತುಕತೆ ಮೂಲಕ ಪದಾಧಿಕಾರಿಗಳ ಆಯ್ಕೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣೆ ಅನಿವಾರ್ಯವಾಯಿತು ಎಂದು ಹೇಳಿದರು.
ಇದೇ ವೇಳೆ ನೂತನ ನಿರ್ದೇಶಕರಾದ ಕೆ.ಎನ್.ಶ್ರೀಧರ್, ಡಿ.ಪಿ.ನರಸಿಂಹಮೂರ್ತಿ, ಚಂದ್ರಶೇಕರ್, ಲೋಕೇಶ, ಲಿಂಗೇಗೌಡ, ಪೆದ್ದಣ್ಣ, ಜಯಮ್ಮ, ವಿನೋದ ಕೆ.ಪಟೇಲ್, ನಾಗಮಣಿ.ಎನ್, ಶಕುಂತಲ, ನಾಗರಾಜ, ಎಸ್.ಎಂ.ಕೃಷ್ಣೇಗೌಡ ಅವರನ್ನು ಅಭಿನಂದಿಸಲಾಯಿತು.
ರಾಮನಗರ ತಾಲೂಕಿನ ಕ್ಯಾಸಾಪುರ ಸೊಸೈಟಿ ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕರನ್ನು ಅಭಿನಂದಿಸಲಾಯಿತು.