ಹೆಬ್ಬೂರಿನಲ್ಲಿ ಕೆ.ಎಸ್. ಪುಟ್ಟಣ್ಣಯ್ಯ ಅವರ ಹೆಸರಿನಲ್ಲಿ ಭವನ ನಿರ್ಮಾಣ ಮಾಡಿ, ಅವರ ಪುತ್ಥಳಿ ಆನಾವರಣ ಮಾಡಿ, ಹೊಸ ಪದ್ಧತಿಗೆ ನಾಂದಿ ಹಾಡಿದೆ ಎಂದು ಪಾಂಡವಪುರ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ತುಮಕೂರು
ರೈತ ಹೋರಾಟಗಾರರ ಹೆಸರನ್ನು ಮುಂದಿನ ಪೀಳಿಗೆಗೆ ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ತುಮಕೂರು ಜಿಲ್ಲೆಯ ವತಿಯಿಂದ ಹೆಬ್ಬೂರಿನಲ್ಲಿ ಕೆ.ಎಸ್. ಪುಟ್ಟಣ್ಣಯ್ಯ ಅವರ ಹೆಸರಿನಲ್ಲಿ ಭವನ ನಿರ್ಮಾಣ ಮಾಡಿ, ಅವರ ಪುತ್ಥಳಿ ಆನಾವರಣ ಮಾಡಿ, ಹೊಸ ಪದ್ಧತಿಗೆ ನಾಂದಿ ಹಾಡಿದೆ ಎಂದು ಪಾಂಡವಪುರ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟಿದ್ದಾರೆ.
ಹೆಬ್ಬೂರಿನಲ್ಲಿ ರೈತ ಸಂಘದ ವತಿಯಿಂದ ಆಯೋಜಿಸಿದ್ದ ರೈತ ಭವನ ಉದ್ಘಾಟನೆ ಹಾಗೂ ಕೆ.ಎಸ್. ಪುಟ್ಟಣ್ಣಯ್ಯ ಪುತ್ಥಳಿ ಆನಾವರಣ ಮತ್ತು 6ನೇ ವರ್ಷದ ನೆನಪಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂಘವೇ ತನ್ನ ಸ್ವಂತ ಅನುದಾನದಲ್ಲಿ ಒಂದು ಭವನ ನಿರ್ಮಾಣ ಮಾಡುವ ಮೂಲಕ ಇಡೀ ರೈತ ಸಂಘಕ್ಕೆ ಒಂದು ನೆಲೆಯನ್ನು ಕಲ್ಪಿಸಿದೆ. ಇದು ಮಾದರಿ ಕೆಲಸವಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಈ ರೀತಿಯ ಭವನ ನಿರ್ಮಾಣಕ್ಕೆ ಮುಂದಾಗುವುದಾಗಿ ತಿಳಿಸಿದರು.
ಪುಟ್ಟಣ್ಣಯ್ಯ ರೈತ ಭವನ ಉದ್ಘಾಟಿಸಿ ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ, ರೈತ ಸಂಘದ ಅಧ್ಯಕ್ಷರಾಗಿದ್ದ ದಿವಂಗತ ಕೆ.ಎಸ್. ಪುಟ್ಟಣ್ಣಯ್ಯ ಅವರ ಕನಸು ಇದಾಗಿತ್ತು. ಪ್ರತಿ ಜಿಲ್ಲೆಯಲ್ಲಿಯೂ ಒಂದೊಂದು ಭವನ ನಿರ್ಮಾಣ ಮಾಡಬೇಕೆಂಬ ಮಹಾದಾಸೆಯನ್ನು ಹೊಂದಿದ್ದರು. ಆದನ್ನು ಇಂದು ತುಮಕೂರು ಜಿಲ್ಲೆಯವರು ನೇರವೇರಿಸಿದ್ದಾರೆ. ಇನ್ನೂ ಉಳಿದ ಜಿಲ್ಲೆಗಳಲ್ಲಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳಲ್ಲಿಯೂ ಈ ಕೆಲಸ ಮಾಡಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಎರಡನೇ ಬಾರಿಗೆ ದೆಹಲಿಯಲ್ಲಿ ಲಕ್ಷಾಂತರ ರೈತರ ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದಾರೆ. ಆದರೆ ಅವರು ದೆಹಲಿಯ ಒಳ ಪ್ರವೇಶಿಸಿದಂತೆ ತಂತಿ ಬೇಲಿ, ಸಿಮೆಂಟ್ ಗೋಡೆಗಳನ್ನು ನಿರ್ಮಿಸಿ ತಡೆಯುವ ಪ್ರಯತ್ನ ನಡೆಸಿದೆ. ಇದು ನಿಜಕ್ಕೂ ಸರ್ವಾಧಿಕಾರಿ ಧೋರಣೆ. ಇದನ್ನು ಖಂಡಿಸಿ ರಾಜ್ಯದಲ್ಲಿಯೂ ಪ್ರತಿಭಟನೆಗಳು ನಡೆಯಲಿವೆ. ಹಾಗೆಯೇ ರಾಜ್ಯದಲ್ಲಿ ಕರಾಳ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಪ್ರತಿಭಟನೆಗಳು ನಡೆಯಲಿವೆ. ಎಲ್ಲರೂ ಕೈಜೋಡಿಸಬೇಕೆಂದು ಬಡಗಲಪುರ ನಾಗೇಂದ್ರಪ್ಪ ಮನವಿ ಮಾಡಿದರು.
ಸಾನಿಧ್ಯ ವಹಿಸಿದ್ದ ಆದಿ ಚುಂಚನಿಗಿರಿಯ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ಮಾಜಿ ಶಾಸಕ ಹೆಚ್. ನಿಂಗಪ್ಪ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ರೈತ ಸಂಘದ ಅಧ್ಯಕ್ಷ ಎ. ಗೋವಿಂದರಾಜು ವಹಿಸಿದ್ದರು. ವೇದಿಕೆಯಲ್ಲಿ ಅರೆ ಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಮಹೇಶ್ ಪ್ರಭು, ರಾಜ್ಯ ಕಾರ್ಯದರ್ಶಿ ಗೋಪಾಲ್, ಜಿ.ಸಿ. ಶಂಕರಪ್ಪ, ರವೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.ಫೋಟೊ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.