ಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿ ನಗರದ ಸಮೀಪದ ಕಪನೂರು ಗ್ರಾಮದ ಬಳಿ ಶರಣ-ಶರಣೆಯರ ವಚನ ಪರಂಪರೆ, ಸಾಮಾಜಿಕ ಕ್ರಾಂತಿ ಹಾಗೂ ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆ ಪ್ರತಿಬಿಂಬಿಸುವ ಆಧುನಿಕ ವಚನ ಮಂಟಪ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ವಚನ ಮಂಟಪದ ವಿನ್ಯಾಸ, ನಿರ್ಮಾಣದ ರೂಪುರೇಷೆ ಹಾಗೂ ವಿವಿಧ ಸೌಲಭ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಯೋಜನೆಯನ್ನು ಅರ್ಥಪೂರ್ಣವಾಗಿ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬೆಂಗಳೂರಿನ ತಮ್ಮ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಚನ ಮಂಟಪ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಿಧ ಹೆಸರಾಂತ ವಾಸ್ತುಶಿಲ್ಪಿಗಳು ಸಿದ್ಧಪಡಿಸಿ ಸಲ್ಲಿಸಿರುವ ವಿನ್ಯಾಸ ಹಾಗೂ ಪರಿಕಲ್ಪನಾ ವರದಿಗಳನ್ನು ಸಚಿವರು ವೀಕ್ಷಿಸಿದರು.ಕಲಬುರಗಿ ತಾಲೂಕಿನ ಕಪನೂರು ಗ್ರಾಮದ ಸರ್ವೆ ನಂ. 44/1ರಲ್ಲಿರುವ 6 ಎಕರೆ 6 ಗುಂಟೆ ಜಮೀನಿನಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿದೆ. ವಚನ ಮಂಟಪದ ಜೊತೆಗೆ ಶರಣರ ಜೀವನ, ವಚನ ಸಾಹಿತ್ಯ ಮತ್ತು ವಚನ ಚಳವಳಿಯ ಇತಿಹಾಸವನ್ನು ಪರಿಚಯಿಸುವ ವಸ್ತುಸಂಗ್ರಹಾಲಯ, ವ್ಯಾಖ್ಯಾನ ಕೇಂದ್ರ, ಅನುಭವ ಕೇಂದ್ರ ಹಾಗೂ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುವ ಪರಿಕಲ್ಪನೆಯೂ ಯೋಜನೆಯಲ್ಲಿದೆ ಎಂದರು.ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ಸಹಿತ ವಚನ ಕ್ರಾಂತಿಯಲ್ಲಿ ಪಾಲ್ಗೊಂಡ ಎಲ್ಲ ಶರಣ-ಶರಣೆಯರ ಜೀವನ, ಸಾಧನೆ, ಭಾವಚಿತ್ರಗಳು ಹಾಗೂ ಅಮೂಲ್ಯ ವಚನಗಳನ್ನು ಇಲ್ಲಿ ಪರಿಚಯಿಸಲಾಗುವುದು. ವಚನ ಸಾಹಿತ್ಯದ ಆಶಯ, ಸಮಾನತೆ, ಕಾಯಕ, ದಾಸೋಹ ಹಾಗೂ ಸಾಮಾಜಿಕ ನ್ಯಾಯದ ಸಂದೇಶಗಳನ್ನು ಇಂದಿನ ಮತ್ತು ಮುಂದಿನ ಪೀಳಿಗೆಗೆ ತಲುಪಿಸುವ ರೀತಿಯಲ್ಲಿ ಮಂಟಪ ವಿನ್ಯಾಸಗೊಳಿಸಲಾಗುವುದು. ಇದರೊಂದಿಗೆ ಚರ್ಚೆ, ಸಂವಾದ, ಉಪನ್ಯಾಸ, ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗುವಂತೆ ತೆರೆದ ಸಭಾಂಗಣವನ್ನೂ ನಿರ್ಮಿಸುವ ಉದ್ದೇಶವಿದೆ. ವಚನ ಸಾಹಿತ್ಯದ ಕುರಿತು ಅಧ್ಯಯನ ನಡೆಸುವ ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಆಸಕ್ತರಿಗೆ ಅಗತ್ಯ ಮಾಹಿತಿ ಮತ್ತು ಸೌಲಭ್ಯಗಳನ್ನು ಒದಗಿಸುವ ಕೇಂದ್ರವಾಗಿಯೂ ಇದು ರೂಪುಗೊಳ್ಳಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.