ಮಾಗಡಿ: ಗೃಹ ಸಚಿವ ಜಿ.ಪರಮೇಶ್ವರ್ ಅವರಿಂದ ಹಲವು ತಿಂಗಳ ಹಿಂದೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿಸಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ 2 ಕೋಟಿ ಅನುದಾನ ಬಿಡುಗಡೆಯಾಗಿದ್ದು ಒಟ್ಟು ₹ 6 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಿಸಲಾಗುತ್ತದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ನೂತನ ಕಟ್ಟಡದ ಕೆಳ ಅಂತಸ್ತಿನಲ್ಲಿ ಊಟದ ಮನೆ, ಮೊದಲ ಅಂತಸ್ತಿನಲ್ಲಿ ವಿಶ್ರಾಂತಿ ಕೊಠಡಿ, 2ನೇ ಅಂತಸ್ತಿನಲ್ಲಿ ಸಭಾಂಗಣ ನಿರ್ಮಿಸಿ ಶುಭ ಸಮಾರಂಭಗಳಿಗೆ ಅಣಿ ಮಾಡಿಕೊಡಲಾಗುವುದು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ತತ್ವ, ವಿಚಾರಧಾರೆಗಳು ನಡೆಯುವ ವ್ಯವಸ್ಥೆ ಆಗಲಿದೆ. ನಿರ್ಮಿತಿ ಕೇಂದ್ರದಿಂದ ಗುಣಮಟ್ಟದ ಕಾಮಗಾರಿ ಮಾಡಿಸಲಾಗುತ್ತಿದ್ದು ಅಂಬೇಡ್ಕರ್ ಭವನದ ಮುಂಭಾಗದ ಮುಖ್ಯರಸ್ತೆಯಲ್ಲಿ ಪುರಸಭೆಗೆ ಆದಾಯ ಬರುವ ನಿಟ್ಟಿನಲ್ಲಿ ವಾಣಿಜ್ಯ ಅಂಗಡಿಗಳ ನಿರ್ಮಾಣವನ್ನು ಪುರಸಭೆಗೆ ವಹಿಸಲಾಗುತ್ತದೆ. ಈ ಅಂಬೇಡ್ಕರ್ ಭವನ ಸಮಾಜ ಕಲ್ಯಾಣ ಇಲಾಖೆಯಿಂದ ಗುಣಮಟ್ಟದ ಕಾಮಗಾರಿ ಮಾಡಿಸಲಾಗುತ್ತದೆ ಎಂದು ತಿಳಿಸಿದರು.
ಕುದೂರು ಕೆಎಸ್‌ಆರ್‌ಟಿಸಿ ಡಿಪೋಗೆ ಸಾಲುಮರದ ತಿಮ್ಮಕ್ಕ ಹೆಸರು:ನಮ್ಮ ತಾಲೂಕಿನವರಾದ ಸಾಲುಮರದ ತಿಮ್ಮಕ್ಕನವರ ಹೆಸರನ್ನು ಕುದೂರಿನ ನೂತನ ಕೆಎಸ್‌ಆರ್‌ಟಿಸಿ ಡಿಪೋ ಹಾಗೂ ಸರ್ಕಾರಿ ಬಸ್ ನಿಲ್ದಾಣಕ್ಕೆ ಸಾಲುಮರದ ತಿಮ್ಮಕ್ಕನವರ ಹೆಸರಿಡುವ ಜೊತೆಗೆ ಅವರ ಪ್ರತಿಮೆ ಕೂಡ ನಿರ್ಮಾಣ ಮಾಡಲಾಗುತ್ತದೆ. ಈ ಮೂಲಕ ಸಾಲುಮರದ ತಿಮ್ಮಕ್ಕನವರ ಹೆಸರು ಶಾಶ್ವತವಾಗಿ ತಾಲೂಕಿನಲ್ಲಿ ಉಳಿಯುವಂತೆ ಮಾಡಲಾಗುತ್ತದೆ. ಸಾಲುಮರದ ತಿಮ್ಮಕ್ಕನವರು ತಾಲೂಕಿಗೆ ಮಾತ್ರ ಸೀಮಿತರಲ್ಲ. ಅವರು ಸಮಾಜದ ಆಸ್ತಿ, ಎಲ್ಲಿ ಬೇಕಾದರೂ ಅವರ ಸ್ಮಾರಕ ನಿರ್ಮಾಣ ಮಾಡಲಿ. ನಾವು ಕೂಡ ಇಲ್ಲಿ ಸ್ಮಾರಕದ ಜೊತೆಗೆ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಕೆಲಸ ಮಾಡುತಿದ್ದೇವೆ ಎಂದು ಬಾಲಕೃಷ್ಣ ಹೇಳಿದರು.
ಸಂತೆಯ ಸ್ಥಳಾಂತರ:ಪಟ್ಟಣದ ಕೋಟೆ ಮೈದಾನದಲ್ಲಿ ಹಲವು ವರ್ಷಗಳಿಂದಲೂ ಕುರಿ, ಕೋಳಿ ಸಂತೆ ನಡೆಯುತ್ತಿದ್ದು, ಜನವರಿ 17ರಂದು ಕೋಟೆ ಕಾಮಗಾರಿ ಆರಂಭವಾಗುವುದರಿಂದ ಕುರಿ, ಕೋಳಿ ಸಂತೆಯನ್ನು ಮಾಗಡಿ-ಬೆಂಗಳೂರು ಮುಖ್ಯರಸ್ತೆಯ ತಿರುಮಲೆ ಗೇಟ್ ಬಳಿ ಸಂತೆ ಸ್ಥಳಾಂತರ ಮಾಡಲಾಗಿದೆ. ಮುಂಜಾನೆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ರೈತರಿಂದ ಆಲಿಸಿದ್ದು 1 ಎಕರೆ ಸರ್ಕಾರಿ ಜಾಗ ಇರುವುದರಿಂದ ಅದನ್ನು ವಶಪಡಿಸಿಕೊಂಡು ಶಾಶ್ವತವಾಗಿ ಕುರಿ ಕೋಳಿ ಸಂತೆ ಮಾಡಿ ಮೂಲ ಸೌಲಭ್ಯಗಳನ್ನು ಕೊಡುತ್ತೇವೆ. ಪಟ್ಟಣದಲ್ಲಿ ಸುಸಜ್ಜಿತ ಹೂವಿನ ಮಾರುಕಟ್ಟೆ ಹಾಗೂ ತರಕಾರಿ ಮಾರುಕಟ್ಟೆಗಳನ್ನು ಐಡಿಎಸ್‌ಎಂಟಿ ಬಡಾವಣೆ ಹರಾಜಿನಿಂದ ಬರುವ ಹಣದಲ್ಲಿ ನಿರ್ಮಿಸಲಾಗುತ್ತದೆ. ಹಂತಹಂತವಾಗಿ ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಬಾಲಕೃಷ್ಣ ವಿವರಿಸಿದ್ದರು.
ಈ ವೇಳೆ ತಹಸೀಲ್ದಾರ್ ಶರತ್ ಕುಮಾರ್, ತಾಪಂ ಇಒ ಜೈಪಾಲ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಮುಖಂಡರಾದ ರಂಗಹನುಮಯ್ಯ, ಸಿ.ಜಯರಾಂ, ಕಲ್ಕೆರೆ ಶಿವಣ್ಣ, ಗೋಪಾಲಕೃಷ್ಣ, ಬಿ.ಟಿ.ವೆಂಕಟೇಶ್, ಪೊಲೀಸ್ ವಿಜಿ, ರೂಪೇಶ್ ಕುಮಾರ್, ತಿಪ್ಪಸಂದ್ರ ಹರೀಶ್, ಮೂರ್ತಿ, ಮಂಜುನಾಥ್, ಕೆಂಪೇಗೌಡ ಇತರರು ಹಾಜರಿದ್ದರು.(ಫೋಟೋ ಕ್ಯಾಫ್ಷ್‌ನ್)
ಮಾಗಡಿ ಪುರಸಭೆ ಮುಖ್ಯ ರಸ್ತೆಯಲ್ಲಿ ನೂತನ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್.ಸಿ.ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು. ತಹಸೀಲ್ದಾರ್ ಶರತ್ ಕುಮಾರ್, ತಾಪಂ ಇಒ ಜೈಪಾಲ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಇತರರಿದ್ದರು.