ಹೊನ್ನಾವರ ರೈಲ್ವೆ ನಿಲ್ದಾಣದಲ್ಲಿ ಮೇಲ್ಸೇತುವೆ ನಿರ್ಮಾಣ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

KannadaprabhaNewsNetwork |  
Published : Sep 02, 2026, 03:45 AM IST
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೊನ್ನಾವರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿದರು. | Kannada Prabha

ಸಾರಾಂಶ

ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಕೌಂಟರ್, ನಿರ್ಮಿಸಿಕೊಡಬೇಕು. ಅಗತ್ಯವಾಗಿ ಬೇಕಾದ ಕಡೆ ರೈಲ್ವೆ ಗೇಟ್ ಮಂಜೂರು ಹಾಗೂ ಗೇಟ್ ಸರಿಪಡಿಸುವಲ್ಲಿ ಅದನ್ನು ಸರಿಪಡಿಸುವ ಕೆಲಸವಾಗಬೇಕು.

ಹೊನ್ನಾವರ: ತಾಲೂಕಿನ ಕೊಂಕಣ ರೈಲ್ವೆ ನಿಲ್ದಾಣಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಅಲ್ಲದೇ ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಮೇಲ್ಸೇತುವೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಸಾರ್ವಜನಿಕರ ಬಹುಕಾಲದ ಬೇಡಿಕೆಗಳಾದ ಪ್ರಮುಖ ರೈಲುಗಳ ನಿಲುಗಡೆ ಹಾಗೂ ಪ್ರಯಾಣಿಕರ ಸುಗಮ ಸಂಚಾರಕ್ಕೆ ಮೂಲ ಸೌಕರ್ಯಗಳ ಮೇಲ್ದರ್ಜೀಕರಣದ ಕುರಿತು ಕೊಂಕಣ ರೈಲ್ವೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.ರೈಲ್ವೆ ನಿಲ್ದಾಣದ ಫ್ಲಾಟ್‌ಫಾರ್ಮ್ ಸರಿಪಡಿಸುವುದು, ನಿಲ್ದಾಣದಲ್ಲಿ ಮೇಲ್ಸೇತುವೆಯನ್ನು ನಿರ್ಮಿಸುವುದು. ಅಗತ್ಯವಿರುವ ರೈಲುಗಳನ್ನು ನಿಲುಗಡೆ ಮಾಡುವ ಬಗ್ಗೆ ಅದರಲ್ಲೂ ತಿರುಪತಿ ರೈಲು, ಮಂಗಳೂರು ಸಿಎಸ್‌ಟಿ ರೈಲು, ನೇತ್ರಾವತಿ ಎಕ್ಸ್‌ಪ್ರೆಸ್ ರೈಲುಗಳನ್ನು ಹೊನ್ನಾವರದಲ್ಲಿ ನಿಲ್ಲಿಸಬೇಕು.

ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಕೌಂಟರ್, ನಿರ್ಮಿಸಿಕೊಡಬೇಕು. ಅಗತ್ಯವಾಗಿ ಬೇಕಾದ ಕಡೆ ರೈಲ್ವೆ ಗೇಟ್ ಮಂಜೂರು ಹಾಗೂ ಗೇಟ್ ಸರಿಪಡಿಸುವಲ್ಲಿ ಅದನ್ನು ಸರಿಪಡಿಸುವ ಕೆಲಸವಾಗಬೇಕು. ಮಂಕಿ ರೈಲ್ವೆ ಉನ್ನತಿಕರಣ, ರೈಲ್ವೆ ಗೇಟ್ ಬಳಿ ಅಂಡರ್ ಪಾಸ್‌ ನಿರ್ಮಾಣ ಕುರಿತ ಬೇಡಿಕೆಗಳನ್ನು ಈಡೇರಿಸುವಂತೆ ಸ್ಥಳೀಯರು, ವಿವಿಧ ಸಂಘಟನೆಯ ಮುಖಂಡರು ಸಂಸದರಲ್ಲಿ ಕೋರಿದರು.ಇದೇ ವೇಳೆ ಸ್ಥಳೀಯರ ಅಹವಾಲುಗಳನ್ನು ಆಲಿಸಿದ ಬಳಿಕ ಮಾತನಾಡಿದ ಸಂಸದರು, ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಲ್ಲದೆ ಸಂತೋಷ್ ಝಾ ಅವರಿಗೂ ಪತ್ರವನ್ನು ಕಳಿಸುತ್ತೇನೆ. ರೈಲ್ವೆ ಗೇಟ್‌ಗಳನ್ನು ಸರಿಯಾಗಿ ಮಾಡಿ, ಜಾನುವಾರುಗಳು ಸಾವಿಗೀಡಾಗದಂತೆ ನೋಡಿಕೊಳ್ಳಿ. ಮಂಕಿ ರೈಲ್ವೆ ಉನ್ನತಿಕರಣ, ಹೊನ್ನಾವರದಲ್ಲಿ ಮೇಲ್ಸೇತುವೆ, ರೈಲ್ವೆ ಗೇಟ್ ಇರುವಲ್ಲಿ ಅಂಡರ್ ಪಾಸ್ ನಿರ್ಮಾಣ ಕುರಿತು ಬೇಡಿಕೆಗಳನ್ನು ಈಡೇರಿಸುವ ಹಾಗೂ ನಿಲ್ದಾಣದ ಸೌಲಭ್ಯಗಳನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ತಾಳಗುಪ್ಪ ಮತ್ತು ಹೊನ್ನಾವರ ರೈಲ್ವೆ ಕುರಿತು ಸರ್ವೆ ಕಾರ್ಯಕ್ಕೆ ಹಣ ಮಂಜೂರು ಆಗಿದೆ. ಪರಿಸರ ಇಲಾಖೆಯ ಕ್ಲಿಯರೆನ್ಸ್ ಸಿಗುವುದು ಬಾಕಿಯಿದೆ. ಈ ಕುರಿತು ಪ್ರಯತ್ನ ಮುಂದುವರಿದಿದೆ. ಅಲ್ಲದೆ ಕಾರವಾರದವರೆಗೂ ಕೆಲವು ರೈಲುಗಳನ್ನು ವಿಸ್ತರಿಸುವ ಯೋಜನೆಯಿದೆ. ಆದರೆ ನಮ್ಮಲ್ಲಿ ವಾಟರಿಂಗ್ ಫೆಸಿಲಿಟಿ ಇಲ್ಲ. ಹೀಗಾಗಿ ಕೆಲವು ರೈಲುಗಳನ್ನು ಬಿಡಲು ಕಷ್ಟವಾಗಿದೆ. ಅದು ನಮ್ಮಲ್ಲಿ ನಿರ್ಮಾಣವಾದರೆ ಇನ್ನಷ್ಟು ರೈಲುಗಳ ಸಂಚಾರ ಆರಂಭಿಸಬಹುದು ಎಂದರು.​ನಂತರ ಹೊನ್ನಾವರ ಮಂಡಲದ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ''''''''ಡ್ರಗ್ಸ್ ಮುಕ್ತ ಭಾರತ'''''''' ಅಭಿಯಾನದಲ್ಲಿ ಸಂಸದರು ಪಾಲ್ಗೊಂಡಿದ್ದರು. ಯುವಶಕ್ತಿಯನ್ನು ಮಾದಕ ದ್ರವ್ಯಗಳ ದುಷ್ಪರಿಣಾಮಗಳಿಂದ ರಕ್ಷಿಸಿ, ಆರೋಗ್ಯಕರ ಹಾಗೂ ಸದೃಢ ಸಮಾಜವನ್ನು ನಿರ್ಮಿಸುವ ಸಂಕಲ್ಪಕ್ಕೆ ಕೈಜೋಡಿಸಬೇಕಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.ಶಾಸಕ ದಿನಕರ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಕೊಂಕಣ ರೈಲ್ವೆ ಡಿಆರ್‌ಎಂ ಆಶಾ ಶೆಟ್ಟಿ, ಪಕ್ಷದ ಪ್ರಮುಖರು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಏಣಿ ಮೂಲಕ ಫ್ಲಾಟ್‌ಫಾರ್ಮ್‌ ಏರಿದ ಪ್ರಯಾಣಿಕರು

ಸಂಸದರು ಬರುವ ಕೆಲವೇ ನಿಮಿಷದ ಮೊದಲು ಮಂಗಳೂರು- ಮುಂಬೈ ಮತ್ಸ್ಯಗಂಧ ರೈಲು ನಿಲುಗಡೆಯಾಗಿತ್ತು. ಆಗ ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನು ಇಳಿಸಿಕೊಂಡು ರೈಲ್ವೆ ಹಳಿಯನ್ನು ದಾಟಿ ಬರುವಾಗ ಫ್ಲಾಟ್‌ಫಾರ್ಮ್ ಹತ್ತಲು ಏಣಿಯನ್ನು ಹಾಕಿದ್ದು ವಿಶೇಷವಾಗಿತ್ತು. ಇಲ್ಲಿ ಮೇಲ್ಸೇತುವೆಯನ್ನು ನಿರ್ಮಿಸಿದರೆ ಇಂತಹ ಪರಿಸ್ಥಿತಿ ಇರುತ್ತಿರಲಿಲ್ಲ ಎಂದು ನೆರೆದಿದ್ದವರು ಮಾತನಾಡಿಕೊಳ್ಳುತ್ತಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆಗೆ ಹೆಚ್ಚಿನ ಆದ್ಯತೆ ಉತ್ತಮ ಬೆಳವಣಿಗೆ: ಸಿ.ಎಲ್.ಸುಬ್ಬಯ್ಯ
ಮೌಂಟ್ ಫುಜಿ ಶಿಖರದಲ್ಲಿ ಹಾರಿದ ತ್ರಿವರ್ಣ ಧ್ವಜ