ಜಿಲ್ಲಾಸ್ಪತ್ರೆ ಆವರಣದಲ್ಲೇ ಸಿಸಿಯು ಘಟಕ ನಿರ್ಮಾಣ

KannadaprabhaNewsNetwork | Published : Mar 2, 2024 1:52 AM

ಸಾರಾಂಶ

ರಾಮನಗರ: ಅಪಘಾತ, ಅವಘಡ ಸಂಭವಿಸಿದರೆ ಇಲ್ಲವೇ ತುರ್ತು ಚಿಕಿತ್ಸೆಗಾಗಿ ಸಾವು - ಬದುಕಿನ ನಡುವೆ ನರಳಾಡುತ್ತಿರುವ ರೋಗಿಯನ್ನು ಹೊತ್ತು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯಸರ್ಕಾರ ರಾಮನಗರ ಹೈಟೆಕ್ ಜಿಲ್ಲಾಸ್ಪತ್ರೆ ಆವರಣದಲ್ಲಿ ಅತಿ ತೀವ್ರ ನಿಗಾ ಘಟಕ ಸ್ಥಾಪನೆಗೆ ಗ್ರೀನ್ ಸಿಗ್ನಲ್ ನೀಡಿದೆ

ರಾಮನಗರ: ಅಪಘಾತ, ಅವಘಡ ಸಂಭವಿಸಿದರೆ ಇಲ್ಲವೇ ತುರ್ತು ಚಿಕಿತ್ಸೆಗಾಗಿ ಸಾವು - ಬದುಕಿನ ನಡುವೆ ನರಳಾಡುತ್ತಿರುವ ರೋಗಿಯನ್ನು ಹೊತ್ತು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯಸರ್ಕಾರ ರಾಮನಗರ ಹೈಟೆಕ್ ಜಿಲ್ಲಾಸ್ಪತ್ರೆ ಆವರಣದಲ್ಲಿ ಅತಿ ತೀವ್ರ ನಿಗಾ ಘಟಕ (Critical Care Unit - CCU) ಸ್ಥಾಪನೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಜಿಲ್ಲೆಯಲ್ಲಿ ಎಲ್ಲಾದರು ಅಪಘಾತ - ಅ‍ವಘಡ ಸಂಭವಿಸಲಿ ತುರ್ತು ಚಿಕಿತ್ಸೆ ಮತ್ತು ಹೆಚ್ಚಿನ ಚಿಕಿತ್ಸೆ ಅರಸಿ ರೋಗಿಗಳನ್ನು ಬೆಂಗಳೂರು, ಮಂಡ್ಯ ಅಥವಾ ಮೈಸೂರು ಜಿಲ್ಲೆಗಳಿಗೆ ಕರೆದೊಯ್ಯಲಾಗುತ್ತಿದೆ. ಒಮ್ಮೊಮ್ಮೆ ರೋಗಿಗಳನ್ನು ಹೊತ್ತ ಆಂಬ್ಯುಲೆನ್ಸ್‌ಗಳು ಯಾವ ಆಸ್ಪತ್ರೆಗೆ ಹೋಗಬೇಕು ಎಂಬ ಗಲಿಬಿಲಿಗೊಳಗಾಗುತ್ತವೆ. ಸಿಸಿಯು ಘಟಕ ಸ್ಥಾಪನೆಯಿಂದಾಗಿ ರೋಗಿಗಳ ಅಲೆದಾಟ ತಪ್ಪಲಿದೆ.

ರಾಮನಗರ, ವಿಜಯನಗರ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 5 ಪ್ರಮುಖ ಜಿಲ್ಲಾಸ್ಪತ್ರೆಗಳಲ್ಲಿ 137 ಕೋಟಿ ರುಪಾಯಿ ವೆಚ್ಚದಲ್ಲಿ ತಲಾ 50 ಹಾಸಿಗೆಯ ಅತಿ ತೀವ್ರ ನಿಗಾ ಘಟಕಗಳ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ.

ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ಅನುಮೋದನೆಗೊಂಡ ಕ್ರಿಟಿಕಲ್ ಕೇರ್ ಗಳಲ್ಲಿ ಆರೋಗ್ಯ ಇಲಾಖೆ ವ್ಯಾಪ್ತಿಯ 5 ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ 6 ಆಸ್ಪತ್ರೆಗಳು ಸೇರಿದಂತೆ ಒಟ್ಟು 11 ಆಸ್ಪತ್ರೆಗಳಲ್ಲಿ ಅತಿ ತೀವ್ರ ನಿಗಾ ಘಟಕಗಳ ನಿರ್ಮಾಣಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿತ್ತು. ಅದರಂತೆ ಆರೋಗ್ಯ ಇಲಾಖೆ ವ್ಯಾಪ್ತಿಗೆ ಬರುವ ರಾಮನಗರ ಸೇರಿದಂತೆ 5 ಜಿಲ್ಲಾಸ್ಪತ್ರೆಗಳಲ್ಲಿ 50 ಬೆಡ್ ಗಳ ಕ್ರಿಟಿಕಲ್ ಕೇರ್ ಯೂನಿಟ್ ಸ್ಥಾಪನೆಗೆ ಸಂಪುಟದಿಂದ ಆಡಳಿತಾತ್ಮಕ ಅನುಮೋದನೆ ದೊರಕಿದೆ.

ಸಿಸಿಯು ಘಟಕ ನಿರ್ಮಾಣಕ್ಕೆ ಅಂದಾಜು 23 - 25 ಕೋಟಿ ರುಪಾಯಿ ವೆಚ್ಚ ತಗುಲಲಿದ್ದು, ರಾಷ್ಟ್ರೀಯ ಆರೋಗ್ಯ ಯೋಜನೆ ಅಡಿಯಲ್ಲಿ ಅನುದಾನ ದೊರೆಯಲಿದ್ದು, ರಾಜ್ಯ ಸರ್ಕಾರ ಕೂಡ ತನ್ನ ಪಾಲಿನ ವೆಚ್ಚವನ್ನು ಭರಿಸಲಿದೆ. ಶೀಘ್ರದಲ್ಲಿಯೇ ಸಿಸಿಯು ಘಟಕದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸುವ ಸಾಧ್ಯತೆಗಳಿವೆ.

ಜಿಲ್ಲಾ ಕೇಂದ್ರ ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ ಹೈಟೆಕ್ ಜಿಲ್ಲಾಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಇದರ ಜೊತೆಗೆ 50 ಹಾಸಿಗೆಗಳ ಕ್ರಿಟಿಕಲ್ ಕೇರ್ ಯೂನಿಟ್ ಸ್ಥಾಪನೆಯಿಂದ ಜಿಲ್ಲೆಯ ರೋಗಿಗಳಿಗೆ ಅನುಕೂಲವಾಗಲಿದ್ದು, ರೋಗಿಗಳು ಪದೇಪದೇ ಅಂತರ್‌ ಜಿಲ್ಲೆಗೆ ಹೋಗಿಬರುವಂತಹ ಅಲೆದಾಟವೂ ತಪ್ಪಲಿದೆ.

ಹೈಟೆಕ್ ಜಿಲ್ಲಾಸ್ಪತ್ರೆ ಕಟ್ಟಡವನ್ನು 5.20 ಎಕರೆ ಪೈಕಿ 3.50 ಎಕರೆಯಲ್ಲಿ 374 ಹಾಸಿಗೆಗಳ ಸಾಮರ್ಥ್ಯದಲ್ಲಿ ನಿರ್ಮಾಣ ಮಾಡಲಾಗಿದ್ದು, ಸದ್ಯಕ್ಕೆ 250 ಹಾಸಿಗೆಗಳ ವ್ಯವಸ್ಥೆಯನ್ನು ಹೊಂದಿದೆ. ಇದನ್ನು ಅಂದಾಜು 99.93 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ಈಗ ಜಿಲ್ಲಾ ಪಂಚಾಯಿತಿ ಕಟ್ಟಡದ ಹಿಂಭಾಗದಲ್ಲಿರುವ ಜಿಲ್ಲಾಸ್ಪತ್ರೆಗೆ ಸೇರಿದ ಜಾಗದಲ್ಲಿ ಕ್ರಿಟಿಕಲ್ ಕೇರ್ ಯೂನಿಟ್ ಕಟ್ಟಡ ನಿರ್ಮಾಣ ಮಾಡಲು ಸ್ಥಳ ಗುರುತಿಸಲಾಗಿದೆ. ಈ ಮೊದಲು ಹಳೇಯ ಕಂದಾಯ ಭವನದ ಹಿಂಭಾಗವಿರುವ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆ ಜಾಗದ ದಾಖಲೆ ಪತ್ರಗಳು ಲಭ್ಯವಾಗಲಿಲ್ಲ

ಈ ಹಿನ್ನೆಲೆಯಲ್ಲಿ ವಾಹನಗಳ ನಿಲುಗಡೆ ಮಾಡಲು ಉದ್ದೇಶಿಸಲಾಗಿದ್ದ ಆಸ್ಪತ್ರೆಗೆ ಸೇರಿದ ಉಳಿದ ಜಾಗದಲ್ಲಿಯೇ ಸಿಸಿಯು ಘಟಕ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳು ಸ್ಥಳ ಗುರುತಿಸಿ ಅಂತಿಮಗೊಳಿಸಿದರು. ಹಾಗೊಂದು ವೇಳೆ ಭೂಮಿ ಲಭ್ಯತೆ ಇಲ್ಲದೆ ಹೋಗಿದ್ದರೆ ಸಿಸಿಯು ಘಟಕ ಬೇರೊಂದು ಜಿಲ್ಲೆಯ ಪಾಲಾಗುತ್ತಿತ್ತು ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಬಾಕ್ಸ್ ...............

ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳು

ತುರ್ತು ಚಿಕಿತ್ಸಾ ವಿಭಾಗ, 4 ಮೇಜರ್ ಶಸ್ತ್ರಚಿಕಿತ್ಸಾ ವಿಭಾಗ, 5 ಮೈನರ್ ಶಸ್ತ್ರಚಿಕಿತ್ಸಾ ವಿಭಾಗ, ವೈದ್ಯಕೀಯ ವಿಭಾಗ, ಐಸಿಯು ವಿಭಾಗ (ಮೆಡಿಕಲ್ ಮತ್ತು ಸರ್ಜಿಕಲ್) ಜನರಲ್ ಸರ್ಜರಿ ವಿಭಾಗ, ಯುರಾಲಜಿ ವಿಭಾಗ, ರೇಡಿಯಾಲಜಿ ವಿಭಾಗ, ನೇತ್ರ ಚಿಕಿತ್ಸಾ ವಿಭಾಗ, ಇ.ಎನ್.ಟಿ ವಿಭಾಗ, ಆರ್ಥೋಪೆಡಿಕ್ ವಿಭಾಗ, ಚರ್ಮರೋಗ ವಿಭಾಗ, ಮನೋರೋಗ ವಿಭಾಗ, ಎಸ್.ಎನ್.ಸಿ.ಯು, ಪಿ.ಐ.ಸಿ.ಯು, ಎನ್.ಸಿ.ಡಿ, ಐ.ಪಿ.ಹೆಚ್.ಎಲ್ ಪ್ರಯೋಗ ಶಾಲಾ ವಿಭಾಗ, ದಂತ ಚಿಕಿತ್ಸಾ ವಿಭಾಗ, ಮಕ್ಕಳ ವಿಭಾಗ, ಎನ್.ಆರ್.ಸಿ, ಎನ್.ಐ.ಸಿ.ಯು, ಫಾರ್ಮಾಸಿ ವಿಭಾಗ, ಐ.ಸಿ.ಟಿ.ಸಿ, ಎ.ಆರ್.ಟಿ, ಬ್ಲಡ್ ಬ್ಯಾಂಕ್, ಸ್ಪಾಸ್ಟಿಕ್ ಸೊಸೈಟಿ ಸೇರಿದಂತೆ ಒಟ್ಟು 26 ವಿಭಾಗಗಳು ಇವೆ.

ಬಾಕ್ಸ್ .............

ಬಗೆಹರಿಯದ ವೈದ್ಯಕೀಯ ಸಿಬ್ಬಂದಿ ಕೊರತೆ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ತವರು ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಮತ್ತು ಸಿಬ್ಬಂದಿ ಕೊರತೆ ಇದೆ. ಸುಸಜ್ಜಿತ ಆಸ್ಪತ್ರೆ ಇದ್ದರೂ, ಸಮರ್ಪಕ ವೈದ್ಯಕೀಯ ಸಿಬ್ಬಂದಿ ಇಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ. ವೈದ್ಯರು, ನರ್ಸ್​​​​ಗಳು, ಸ್ವಚ್ಚತಾ ಸಿಬ್ಬಂದಿ ಕೊರತೆಯಿಂದ ಸರಿಯಾದ ಚಿಕಿತ್ಸೆ ಸಿಗದ ರೋಗಿಗಳು ನರಳಾಡುತ್ತಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿನ 39 ವೈದ್ಯ ಹುದ್ದೆಯಲ್ಲಿ 17 ಜನ ವೈದ್ಯರ ಹುದ್ದೆ ಖಾಲಿ ಇವೆ. 109 ಬಿ.ಗ್ರೂಪ್ ಸಿಬ್ಬಂದಿ ಇರಬೇಕಾದ ಆಸ್ಪತ್ರೆಯಲ್ಲಿ ಕೇವಲ 61 ನೌಕರರು ಮಾತ್ರ ಇದ್ದಾರೆ. ಸ್ಟಾಫ್ ನರ್ಸ್, ಸೀನಿಯರ್ ನರ್ಸ್ ಸೇರಿದಂತೆ 52 ಹುದ್ದೆಗಳು ಖಾಲಿ ಇವೆ. ಇದರಿಂದ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಆಸ್ಪತ್ರೆಗೆ ಬಂದ ರೋಗಿಗಳಿಗೆ ಚಿಕಿತ್ಸೆ ದೊರೆಯದೆ, ಬೆಂಗಳೂರು, ಮಂಡ್ಯಕ್ಕೆ ಹೋಗುತ್ತಿದ್ದಾರೆ.

ನ್ಯೂರೋ ಸರ್ಜನ್, ನ್ಯೂರೊ ಫಿಜಿಷಿಯನ್, ಕಾರ್ಡಿಯಾಲಜಿ, ಫಲ್ಮೋನಾಲಜಿ ಚಿಕಿತ್ಸೆ ನೀಡಲು ವೈದ್ಯರಿಲ್ಲ. ಇನ್ನು ವೆಂಟಿಲೇಟರ್​​ಗಳಿದ್ದರೂ, ಅದರ ನಿರ್ವಾಹಣೆಗೆ ಬೇಕಾದ ನಿಯೋನೆಟಲಾಜಿಸ್ಟ್, ಟ್ರೈನ್ಡ್ ಸ್ಟಾಫ್​​ನರ್ಸ್ ಕೂಡ ಇಲ್ಲ. ಒಟ್ಟು 30 ಜನ ಸ್ಟಾಫ್ ನರ್ಸ್ ಹುದ್ದೆ ಭರ್ತಿಯಾಗಬೇಕಿದೆ. ಸದ್ಯಕ್ಕೆ ಐಕಾನ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡು ರೋಗಿಗಳಿಗೆ ಚಿಕಿತ್ಸೆ ಕೊಡಲಾಗುತ್ತಿದೆ.

1ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ಜಿಲ್ಲಾಸ್ಪತ್ರೆ.

Share this article