ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿರುವ ಎಲ್ಲ ಸರ್ಕಾರಿ ಉರ್ದು ಶಾಲೆಗಳನ್ನು ಮುಚ್ಚಿ 15 ರಿಂದ 20 ಕೋಟಿ ವೆಚ್ಚದಲ್ಲಿ ಹೈಟೆಕ್ ಉರ್ದು ಶಾಲೆ ತೆರೆಯಲು ಉದ್ದೇಶಿಸಲಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ನಗರದ ಶಾಸಕರ ಭವನದಲ್ಲಿ ಶಾಸಕರ ವೇತನ ಮತ್ತು ಭತ್ಯೆ ಹಣವನ್ನು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಶುಲ್ಕ ಭರಿಸುವ ಸಲುವಾಗಿ ಡಿಡಿ ವಿತರಿಸಿ ಮಾತನಾಡಿದ ಅವರು, ರಾಮನಗರ ಟೌನ್‌ನಲ್ಲಿ ಸುಮಾರು 7 ಸರ್ಕಾರಿ ಉರ್ದು ಶಾಲೆಗಳಿವೆ. ಇದರಲ್ಲಿ ಕೆಲ ಶಾಲೆಗಳಲ್ಲಿ ಶಿಕ್ಷಕರು, ವಿದ್ಯಾರ್ಥಿಗಳ ಕೊರತೆ ಇದ್ದರೆ, ಹಲವೆಡೆ ಶಾಲಾ ಕಟ್ಟಡಗಳೇ ಶಿಥಿಲಗೊಂಡಿವೆ. ಆದ್ದರಿಂದ ಈ ಎಲ್ಲಾ ಶಾಲೆಗಳ ಶಿಕ್ಷಕರು ಮತ್ತು ಮಕ್ಕಳನ್ನು ಒಂದೇ ಸೂರಿನಡಿಗೆ ತರಲು ಹೈಟೆಕ್ ಉರ್ದು ಶಾಲೆ ನಿರ್ಮಿಸುವ ನಿರ್ಧರಿಸಲಾಗಿದೆ ಎಂದರು.ಈಗ ಗ್ರಾಮ ಪಂಚಾಯಿತಿಗೆ ಒಂದರಂತೆ ರಾಮನಗರದಲ್ಲಿ 8 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಲಾಗುತ್ತಿದ್ದು, ಇದಕ್ಕಾಗಿ ಸಿಎಸ್ ಆರ್ ಅನುದಾನ ಬಳಕೆ ಮಾಡಲಾಗುತ್ತಿದೆ. ಉರ್ದು ಶಾಲಾ ಮಕ್ಕಳಿಗಾಗಿ ಮೌಲಾನ ಆಜಾದ್ ಮಾದರಿ ಶಾಲೆಗಳಂತೆಯೇ 5 ಎಕರೆ ಜಾಗದಲ್ಲಿ 15-20 ಕೋಟಿ ವೆಚ್ಚದಲ್ಲಿ ಹೈಟೆಕ್ ಉರ್ದು ಶಾಲೆ ಸ್ಥಾಪಿಸಲಾಗುವುದು. ಈ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದರು.
ಮುಸ್ಲಿಂ ಸಮುದಾಯದವರು ಧರ್ಮದ ನಂಬಿಕೆ, ಮೌಲ್ಯ ಹಾಗೂ ಆಧ್ಯಾತ್ಮಿಕ ಆಚರಣೆಗಳನ್ನು ಪಾಲಿಸುವುದರ ಜೊತೆಗೆ ಮಕ್ಕಳ ಶಿಕ್ಷಣಕ್ಕೂ ಹೆಚ್ಚಿನ ಒತ್ತು ಕೊಡಬೇಕು. ಮುಸ್ಲಿಂ ಸಮುದಾಯದ ಪ್ರಗತಿ ಹಾಗೂ ದೇಶದ ಅಭಿವೃದ್ಧಿಗೆ ಶಿಕ್ಷಣವೇ ಅಸ್ತ್ರ. ಮಕ್ಕಳ ಶಿಕ್ಷಣದ ವಿಚಾರದಲ್ಲಿ ಯಾರೂ ನಿರ್ಲಕ್ಷ್ಯ ವಹಿಸಬಾರದು ಎಂದು ಕಿವಿಮಾತು ಹೇಳಿದರು.ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ತೊಡಗಿಸಿ ಸದೃಢರನ್ನಾಗಿ ಮಾಡಬೇಕು. ಕೇವಲ ಗುಣಮಟ್ಟದ ಶಿಕ್ಷಣ ಕೊಡಿಸಿದರೆ ಸಾಲದು, ಅವರಿಗೆ ಸಂಸ್ಕಾರವನ್ನು ಕಲಿಸಿ ಸಮಾಜಕ್ಕೆ ಸತ್ಪ್ರಜೆಯಾಗುವಂತೆ ರೂಪಿಸಬೇಕು. ಹಾಗಾಗಿ ಪೋಷಕರು ಶಿಕ್ಷಣ ಸಂಸ್ಥೆಗಳಿಗೆ ಆಗಾಗೆ ಭೇಟಿ ನೀಡಿ ಮಕ್ಕಳ ವ್ಯಾಸಂಗ ಮೇಲೆ ನಿಗಾ ವಹಿಸಬೇಕು. ಇಲ್ಲದಿದ್ದರೆ ಮಕ್ಕಳು ಕೈ ತಪ್ಪಿ ಹೋಗುತ್ತಾರೆ ಎಂದು ಎಚ್ಚರಿಸಿದರು.
ನಿವೇಶನ ರಹಿತರಿಗೆ ನಿವೇಶನ:ಈ ಹಿಂದೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದವರು ಮಕ್ಕಳ ಶಿಕ್ಷಣ, ರಸ್ತೆ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಯಾವುದರ ಬಗ್ಗೆಯೂ ಗಮನ ಹರಿಸುತ್ತಿರಲಿಲ್ಲ. ಆದರೆ, ನಾನು ಶಾಸಕನಾದ ಒಂದೂವರೆ ವರ್ಷದಲ್ಲಿ ನಾಗರೀಕರಿಗೆ ಮೂಲಸೌಕರ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೆ. ಮೊದಲ ಆದ್ಯತೆಯಾಗಿ ಪ್ರತಿ ಮನೆಗೆ ಕುಡಿಯುವ ನೀರು ಪೂರೈಸಿ ಸಮಸ್ಯೆ ಬಗೆಹರಿಸಿದ್ದೇನೆ. ಶೀಘ್ರದಲ್ಲಿಯೇ ರಸ್ತೆ, ಚರಂಡಿ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಹೇಳಿದರು.
ನಗರದಲ್ಲಿರುವ ನಿವೇಶನ ರಹಿತರನ್ನು ಗುರುತಿಸಿ ನಿವೇಶನ ಕಲ್ಪಿಸಲು ಉದ್ದೇಶಿಸಲಾಗಿದೆ. ಮೂರು - ನಾಲ್ಕು ತಿಂಗಳಲ್ಲಿ ನಗರಸಭೆ ಅಧ್ಯಕ್ಷರು ಮತ್ತು ಸದಸ್ಯರು ಪ್ರತಿ ವಾರ್ಡುಗಳಲ್ಲಿ ಸಭೆ ನಡೆಸಿ ನಿವೇಶನ ರಹಿತರನ್ನು ಗುರುತಿಸುವ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರಾದ ಫೈರೋಜ್, ಬಿ.ಸಿ.ಪಾರ್ವತಮ್ಮ, ನಿಜಾಂಷರೀಪ್, ದೌಲತ್ ಷರೀಪ್, ವಿಜಯಕುಮಾರಿ, ಅಕ್ಲೀಂ, ಗಿರಿಜಮ್ಮ, ಅಜ್ಮತ್ , ಬೈರೇಗೌಡ, ಸಮದ್, ಅಣ್ಣು, ನಾಗಮ್ಮ, ನಗರಾಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಪರ್ವೇಜ್ ಪಾಷ, ಮುಖಂಡರಾದ ಪ್ರಸನ್ನಕುಮಾರ್, ರೈಡ್‌ನಾಗರಾಜು, ಅತಾವುಲ್ಲಾ, ಶಶಿಕಲಾ, ಸುನೀತಾ, ಪೌರಾಯುಕ್ತ ಡಾ.ಜಯಣ್ಣ, ಎಂಜಿನಿಯರ್ ನಿರ್ಮಲಾ ಮತ್ತಿತರರು ಹಾಜರಿದ್ದರು.
ಕೋಟ್.......ನಗರದಲ್ಲಿರುವ ಹಳೆಯ ಜಿಲ್ಲಾಸ್ಪತ್ರೆಗೆ ಹೊಸ ಸ್ಪರ್ಶ ನೀಡಿ ಪುನಾರಂಭ ಮಾಡುವ ಚಿಂತನೆ ಮಾಡಲಾಗಿದೆ. ಅದನ್ನು ತಾಯಿ ಮಗುವಿನ ಆಸ್ಪತ್ರೆಯನ್ನಾಗಿಯೊ ಅಥವಾ ಯಾವ ರೀತಿ ಸಾರ್ವಜನಿಕರ ಉಪಯೋಗಕ್ಕೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಚರ್ಚೆಗಳು ನಡೆದಿವೆ.
-ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ12ಕೆಆರ್ ಎಂಎನ್ 2.ಜೆಪಿಜಿ
ರಾಮನಗರ ಶಾಸಕರ ಭವನದಲ್ಲಿ ಶಾಸಕ ಇಕ್ಬಾಲ್ ಹುಸೇನ್ ವಿದ್ಯಾರ್ಥಿಗಳಿಗೆ ಡಿಡಿ ವಿತರಣೆ ಮಾಡಿದರು.