ಸರ್ಕಾರಿ ಜಾಗದಲ್ಲಿ ಅಕ್ರಮ ಬಡಾವಣೆ ನಿರ್ಮಾಣ: ಆರೋಪ

KannadaprabhaNewsNetwork |  
Published : Nov 06, 2024, 11:55 PM IST
6ಕೆಎಂಎನ್ ಡಿ16 | Kannada Prabha

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯ ಗ್ರಾಮಗಳು ಮೈಸೂರಿಗೆ ಹೊಂದಿಕೊಂಡಂತ್ತಿದ್ದು, ಜಮೀನುಗಳ ಬೆಲೆ ಗಗನಕ್ಕೇರಿದೆ. ಕೆಲ ಬಲಾಡ್ಯ ವ್ಯಕ್ತಿಗಳು ಸರ್ಕಾರಕ್ಕೆ ಸೇರಿದ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ, ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಬಡಾವಣೆ ಮಾಡುತ್ತಿರುವುದನ್ನು ತಡೆಯುವಲ್ಲಿ ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ಪಟ್ಟಣದಲ್ಲಿ ಪತ್ರಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಎದುರು ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ ಹಾಗೂ ರೈತ ಹೋರಾಟಗಾರ ಕೆ.ಎಸ್. ನಂಜುಂಡೇಗೌಡ ನೇತೃತ್ವದಲ್ಲಿ ಸೇರಿದ ಸದಸ್ಯರು ಹಾಗೂ ರೈತರು ರಾಜ್ಯ ಸರ್ಕಾರ, ಸ್ಥಳೀಯ ಜನಪತ್ರಿನಿಧಿ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಕೆಲಕಾಲ ಧರಣಿ ನಡೆಸಿರು.

ಈ ವೇಳೆ ರೈತ ಮುಖಂಡ ನಂಜುಂಡೇಗೌಡ ಮಾತನಾಡಿ, ತಾಲೂಕಿನ ಬೆಳಗೊಳ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯ ಗ್ರಾಮಗಳು ಮೈಸೂರಿಗೆ ಹೊಂದಿಕೊಂಡಂತ್ತಿದ್ದು, ಜಮೀನುಗಳ ಬೆಲೆ ಗಗನಕ್ಕೇರಿದೆ. ಕೆಲ ಬಲಾಡ್ಯ ವ್ಯಕ್ತಿಗಳು ಸರ್ಕಾರಕ್ಕೆ ಸೇರಿದ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ, ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.

ಪ್ರಸ್ತುತ ಸರ್ಕಾರಿ ಜಮೀನಿನಲ್ಲಿಯೇ ಬಡಾವಣೆ ಮಾಡುತ್ತಿದ್ದು, ಸರ್ಕಾರಿ ಆಸ್ತಿ ಲೂಟಿ ಮಾಡುತ್ತಿದ್ದರೂ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮೌನವಹಿಸಿದ್ದು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳದೆ ಪರೋಕ್ಷವಾಗಿ ತಮ್ಮ ವೈಯಕ್ತಿಕ ಸಂಪತ್ತು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಭೂ ಮಾಫಿಯಾದ ಪ್ರಭಾವಕ್ಕೆ ಹಲವು ಜನ ಪ್ರತಿನಿಧಿಗಳು, ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳು ಒಳಗಾಗಿದ್ದಾರೆ ಎಂದು ದೂರಿದರು.

ತಾಲೂಕಿನ ಬೆಳವಾಡಿ ಸರ್ವೇ ನಂ.64 ಸರ್ಕಾರಿ ಭೂಮಿ ಎಕರೆಗೆ 60 ರಿಂದ 70 ಕೋಟಿ ರು. ಬೆಲೆ ಬಾಳುತ್ತಿವೆ. ಇಂತಹ ಬೆಲೆ ಬಾಳುವ ಸರ್ಕಾರಿ ಜಮೀನಿನಲ್ಲಿಯೇ ಬಡಾವಣೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಂದಾಯ ಇಲಾಖೆ ಕಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಾಣ ಕುರುಡುತನ ತೋರುವ ಮೂಲಕ ಅಕ್ರಮ ಚಟುವಟಿಗೆಯಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಕೆಆರ್‌ಎಸ್ ಬಳಿ ಹುಲಿಕೆರೆ ಗ್ರಾಪಂ ವ್ಯಾಪ್ತಿ ಜುವಾರಿ ಗಾರ್ಡನ್ ಸಿಟಿ ಸಂಸ್ಥೆ ಸಾರ್ವಜನಿಕ ರಸ್ತೆ ಕಬಳಿಸಿದ್ದಾರೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.

ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ತಾಲೂಕಿನ ಬಹುತೇಕ ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ರದ್ದು ಮಾಡುತ್ತಿದೆ. ಗೃಹ ಸಾಲ ಪಡೆದು, ಅದರ ತೆರಿಗೆ ಹಣ ಕಟ್ಟಿರುವಂತಹ ಸಾಮಾನ್ಯ ಬಡ ವ್ಯಕ್ತಿ ಬಿಪಿಎಲ್ ಕಾರ್ಡ್‌ಗಳು ರದ್ದಾಗಿವೆ. ಇಲ್ಲಸಲ್ಲದ ನಿಯಮಗಳಿಂದ ಅರ್ಹರಿಗೆ ಬಿಪಿಎಲ್ ಕಾರ್ಡ್ ಕೈ ತಪ್ಪಿವ ಆತಂಕದಲ್ಲಿ ಜನ ಸಾಮಾನ್ಯರಿದ್ದಾರೆ. ಈ ಎಲ್ಲಾ ಗೊಂದಲಗಳನ್ನು ಬಗೆ ಹರಿಸಿ, ಅರ್ಹರಿಗೆ ಬಿಪಿಎಲ್ ಕಾರ್ಡ್ ಇರುವಂತೆ ಸೂಕ್ತ ಕ್ರಮ ವಹಿಸುವಂತೆ ಒತ್ತಾಯಿಸಿದರು.

ಕಾರ್ಯ ನಿಮಿತ್ತ ತಾಲೂಕು ಕಚೇರಿಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದರೆ ಅಂತಹವರಿಗೆ ನೋಟಿಸ್ ಕೊಡುವ ಅಗತ್ಯವಿಲ್ಲ. ಕೂಡಲೇ ಸ್ಥಳೀಯ ತಹಸೀಲ್ದಾರ್ ಅವರಿಂದ ಮಾಹಿತಿ ಪಡೆದು ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ನಂತರ ಪ್ರತಿಭಟನಾಕಾರರು ಅಂಚೆ ಕಚೇರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕಂದಾಯ ಸಚಿವ ಕೃಷ್ಣಭೈರೇಗೌಡ, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಮಂಡ್ಯ ಹಾಗೂ ಮೈಸೂರು ಭಾಗದ ಹಿರಿಯ ಅಧಿಕಾರಿಗಳಿಗೆ ಮನವಿ ಪತ್ರ ರವಾನಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಉಪಾಧ್ಯಕ್ಷರಾದ ಹನಿಯಂಬಾಡಿ ನಾಗರಾಜು, ಮೇಳಾಪುರ ಜಯರಾಮೇಗೌಡ, ಜಗದೀಶ್ ದೊಡ್ಡಪಾಳ್ಯ, ಗಂಜಾಂ ಮರೀಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ದರ್ಶನ್, ಖಚಾಂಜಿ ಮಹದೇವು, ತಗ್ಗಳ್ಳಿ ಮಹದೇವು, ಹೆಮ್ಮಿಗೆ ಕೃಷ್ಣ, ಹಳುವಾಡಿ ನಾಗೇಂದ್ರ, ಅಚ್ಚಪ್ಪನಕೊಪ್ಪಲು ರವಿಲಕ್ಷ್ಮಣ, ಬಲ್ಲೇನಹಳ್ಳಿ ಮಂಜುನಾಥ್, ಕಡತನಾಳು ಶ್ರೀಧರ್, ಸಿ.ಟಿ.ರಾಮಚಂದ್ರ, ಮಹೇಶ್, ಕಪರನಕೊಪ್ಪಲು ಸುರೇಶ, ಶಿವರಾಜ್, ಪಾಲಹಳ್ಳಿ ರಾಮಚಂದ್ರ ಸೇರಿದಂತೆ ಇತರರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ