ಶೈಕ್ಷಣಿಕ ಪ್ರಗತಿಗೆಂದೇ ವಸತಿ ಶಾಲೆಗಳ ನಿರ್ಮಾಣ

KannadaprabhaNewsNetwork | Published : Feb 21, 2025 12:49 AM

ಸಾರಾಂಶ

ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿಗಾಗಿ ಸಾಕಷ್ಟು ಆದ್ಯತೆ ನೀಡಿ, ವಸತಿ ಶಾಲೆಗಳನ್ನು ನಿರ್ಮಿಸಲಾಗಿದೆ. ಹಂತಹಂತವಾಗಿ ಎಲ್ಲ ಜಾತಿ ಜನಾಂಗದ ವಸತಿ ಶಾಲೆಗಳ ಸ್ವಂತ ಕಟ್ಟಡಗಳ ನಿರ್ಮಾಣ, ಮೂಲಸೌಕರ್ಯ, ಶೈಕ್ಷಣಿಕ ಸೌಲಭ್ಯ ಒದಗಿಸಲು ಬದ್ಧ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.

- ನೂತನ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಸಚಿವ ಎಸ್ಸೆಸ್ಸೆಂ

- - - ಕನ್ನಡಪ್ರಭ ವಾರ್ತೆ ಜಗಳೂರು

ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿಗಾಗಿ ಸಾಕಷ್ಟು ಆದ್ಯತೆ ನೀಡಿ, ವಸತಿ ಶಾಲೆಗಳನ್ನು ನಿರ್ಮಿಸಲಾಗಿದೆ. ಹಂತಹಂತವಾಗಿ ಎಲ್ಲ ಜಾತಿ ಜನಾಂಗದ ವಸತಿ ಶಾಲೆಗಳ ಸ್ವಂತ ಕಟ್ಟಡಗಳ ನಿರ್ಮಾಣ, ಮೂಲಸೌಕರ್ಯ, ಶೈಕ್ಷಣಿಕ ಸೌಲಭ್ಯ ಒದಗಿಸಲು ಬದ್ಧ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.

ತಾಲೂಕಿನ ಕಾಮಗೇತನಹಳ್ಳಿ ಹೊಸಹಟ್ಟಿ ಬಳಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ, ಚಿಕ್ಕಬಂಟನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಪಲ್ಲಾಗಟ್ಟೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಮೂರು ನೂತನ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ₹22 ಕೋಟಿ ಅನುದಾನದಲ್ಲಿ ವಸತಿ ಶಾಲೆಗಳ ಸುಸಜ್ಜಿತ ಕಟ್ಟಗಳ ಕಾಮಗಾರಿ ಪೂರ್ಣಗೊಂಡು ಇಂದು ಉದ್ಘಾಟನೆಯಾಗಿದೆ. ಏಕಲವ್ಯ ವಸತಿ ಶಾಲೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ 70:30 ಅನುಪಾತದಲ್ಲಿ ಅನುದಾನ ಬರಲಿದೆ. ಮಾಗಡಿ ಬಳಿ 18 ಎಕರೆ ಸರ್ಕಾರಿ ಜಮೀನು ನಿಗದಿಯಾಗಿದೆ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸಹಕಾರದೊಂದಿಗೆ ಅನುದಾನ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆ ವಹಿಸಿ, ಜೂನ್ 1ರಂದು ಲೋಕಾರ್ಪಣೆಗೊಳ್ಳಬೇಕಿದ್ದ ನೂತನ ಕಟ್ಟಡಗಳು ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಿಂದ ವಿಳಂಬವಾಗಿದ್ದವು. ತಾತ್ಕಾಲಿಕವಾಗಿ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲು ತರಗತಿಗಳನ್ನು ಆರಂಭಿಸಲಾಗಿತ್ತು. ಇಂದು ಅಧಿಕೃತವಾಗಿ ಲೋಕಾರ್ಪಣೆಗೊಂಡಿವೆ. ಬಾಡಿಗೆ ಕಟ್ಟಡಗಳಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿವೆ. ಪಟ್ಟಣದಲ್ಲಿ ಅಲ್ಪಸಂಖ್ಯಾತರ ಇಲಾಖೆ ವಸತಿ ಶಾಲೆ ಸ್ವಂತ ಕಟ್ಟಡವಿಲ್ಲದೇ ಬಾಡಿಗೆ ಕಟ್ಟಡದಲ್ಲಿದ್ದು, ಬಗ್ಗೇನಹಳ್ಳಿ ಬಳಿ ಸರ್ಕಾರಿ ಜಾಗದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರದಿಂದ ₹16 ಕೋಟಿ ಅನುದಾನ ಬಿಡುಗಡೆಗೊಳಿಸಿದೆ. ಇದು ಸ್ವಾಗತಾರ್ಹ ಕ್ರಮವಾಗಿದೆ ಎಂದರು.

ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಜಿಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮ್ಮದ್, ಎಸ್.ಮಂಜುನಾಥ್, ದೊಣೆಹಳ್ಳಿ ಗ್ರಾಪಂ ಅಧ್ಯಕ್ಷ ತಿಪ್ಪೇಸ್ವಾಮಿ, ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಬಿಸಿಎಂ ಇಲಾಖೆ ಜಿಲ್ಲಾ ಕಲ್ಯಾಣ ಅಧಿಕಾರಿ ಗಾಯತ್ರಿ, ಪ.ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನವೀನ್ ಕುಮಾರ್ ಮಠದ್, ತಾ.ಪಂ ಇಓ ಕೆಂಚಪ್ಪ, ಪ.ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಗುತ್ತಿಗೆದಾರ ವೀರೇಶ್, ಗ್ರಾ.ಪಂ ಸದಸ್ಯ ಸಿದ್ದಲಿಂಗಪ್ಪ, ಪ್ರಾಂಶುಪಾಲರಾದ ಅಮರೇಶ್, ಮಹಾಂತೇಶ್ ಕಲ್ಲೂರು, ಕಂಬತಹಳ್ಳಿ ಮಂಜುನಾಥ್, ಪಿ.ಸುರೇಶ್, ಗೋಡೆ ಪ್ರಕಾಶ್, ಸಾವಿತ್ರಮ್ಮ, ಮುಖಂಡರಾದ ಬಿ. ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಮಧುಕುಮಾರ ಇತರರು ಇದ್ದರು.

- - - -20ಜೆ.ಜಿ.ಎಲ್.1:

ಸಚಿವ ಎಸ್.ಎಸ್.ಮಲ್ಲಿಕಾರ್ಜುನ ನೂತನ ಕಟ್ಟಡಗಳ ಉದ್ಘಾಟನೆ ನೆರವೇರಿಸಿದರು.

Share this article