ಶಿವಕುಮಾರ ಕುಷ್ಟಗಿ
ಗದಗ: ಶ್ರೀರಾಮ ಮಂದಿರದ ಉದ್ಘಾಟನೆಗೆ ದಿನಗಣನೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಎಲ್ಲರ ದೃಷ್ಟಿ ಅಯೋಧ್ಯೆಯತ್ತ ನೋಡುತ್ತಿದೆ. ಆದರೆ ಗದಗ ನಗರದ ಜನರಿಗೆ ಬೇಕರಿಯೊಂದರಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೂ ಮೊದಲೇ ಲಭ್ಯವಾಗಿದ್ದು, ಜನರು ಆಸಕ್ತಿಯಿಂದ ಬೇಕರಿಗೆ ಬಂದು ಶ್ರೀರಾಮ ಮಂದಿರದೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದಾರೆ. ಗದಗ ನಗರದ ಮುಳಗುಂದ ರಸ್ತೆಯಲ್ಲಿರುವ ಸಾಸನೂರ ಬೇಕರಿಯ ಮಾಲೀಕರು ಮತ್ತು ಅಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರು ಶ್ರದ್ಧಾ ಭಕ್ತಿಯಿಂದ ಶ್ರೀರಾಮ ಮಂದಿರವನ್ನು ಕೇಕ್‌ನಲ್ಲಿ ನಿರ್ಮಿಸಿದ್ದಾರೆ. ಶತಮಾನಗಳಿಂದ ದೇಶದ ಜನರು ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಹಾತೊರೆಯುತ್ತಿದ್ದರು. ರಾಮಭಕ್ತರ ಆಸೆ ಈಡೇರುತ್ತಿರುವ ಹಿನ್ನೆಲೆಯಲ್ಲಿ ಕೇಕ್ ನಿರ್ಮಾಣ ಮಾಡುವ ಮೂಲಕ ಸಂಭ್ರಮಿಸುತ್ತಿರುವುದು ಇಲ್ಲಿನ ಮತ್ತೊಂದು ವಿಶೇಷತೆಯಾಗಿದೆ.40 ಕೆಜಿ ಕೇಕ್: ಕಳೆದ 8 ದಿನಗಳಿಂದ ನಿರಂತರವಾಗಿ ಯೂಟ್ಯೂಬ್ ಮತ್ತು ಗೂಗಲ್ ಮೂಲಕ ನೋಡಿಕೊಂಡು ಕೇಕ್ ನಿರ್ಮಾಣಕ್ಕಾಗಿ ಶ್ರಮಿಸಿರುವ ಕಾರ್ಮಿಕರು ಅತ್ಯಂತ ಸುಂದರವಾದ ಶ್ರೀರಾಮ ಮಂದಿರವನ್ನು ಕೇಕ್‌ನಲ್ಲಿ ಕಟ್ಟಿ ಮುಗಿಸಿದ್ದಾರೆ. ನಿರ್ಮಾಣವಾಗಿರುವ ಈ ಕೇಕ್ ಶುಗರ್ ಪೇಸ್ಟ್‌ನಿಂದ ಕೂಡಿದ್ದು, ಶುದ್ಧ ಸಸ್ಯಹಾರಿಯಾಗಿದೆ. ಇದನ್ನು ಒಂದು ತಿಂಗಳ ವರೆಗೆ ಸಂಗ್ರಹಿಸಿಟ್ಟರೂ ಕೆಡದಂತೆ ಕ್ರಮ ತೆಗೆದುಕೊಳ್ಳಲಾಗಿದೆ.
22ರಂದು ಪ್ರದರ್ಶನ: ಜ. 22ರಂದು ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳಲಿದ್ದು, ಅದೇ ದಿನ ಈ ಬೃಹತ್ ಕೇಕ್‌ನ್ನು ತಮ್ಮ ಬೇಕರಿಯ ಮುಂಭಾಗದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಂಡಿರುವ ಬೇಕರಿ ಮಾಲೀಕರು, ಅಂದು ಬೇಕರಿಗೆ ಬರುವ ಪ್ರತಿಯೊಬ್ಬರಿಗೂ ಶ್ರೀರಾಮ ಮಂದಿರದ ಉದ್ಘಾಟನೆಯ ಉಡುಗೊರೆ ನೀಡಲಿದ್ದಾರೆ. ಅಂದೇ ಸಂಪೂರ್ಣ ಕೇಕ್‌ನ್ನು ಸಾರ್ವಜನಿಕರಿಗೆ ಅರ್ಪಿಸುವ ಯೋಜನೆ ಹಾಕಿಕೊಂಡಿದ್ದಾರೆ.ಆಕರ್ಷಣೆಯ ಕೇಂದ್ರಬಿಂದು: ಸದ್ಯ ಬೇಕರಿಯಲ್ಲಿ ಪ್ರದರ್ಶನಗೊಳ್ಳುತ್ತಿರುವ ಶ್ರೀರಾಮ ಮಂದಿರದ ಕೇಕ್ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಬೇಕರಿಗೆ ಆಗಮಿಸುವವರು, ರಸ್ತೆಯಲ್ಲಿ ಸಂಚರಿಸುವವರು ಅಂಗಡಿಗೆ ಆಗಮಿಸಿ ಕೇಕ್‌ನಲ್ಲಿಯೇ ನಿರ್ಮಾಣವಾಗಿರುವ ರಾಮಮಂದಿರ ನೋಡಿ ಖುಷಿ ಪಡುತ್ತಿದ್ದಾರೆ. ಕೆಲವರು ವಿಡಿಯೋ ಮಾಡಿಕೊಂಡು, ಇನ್ನು ಕೆಲವರು ಸೆಲ್ಫಿ ಕ್ಲಿಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.
ದೇಶದ ಜನರ ಬಹುವರ್ಷಗಳ ಆಸೆಯಂತೆ ಶ್ರೀರಾಮ ಮಂದಿರ ನಿರ್ಮಾಣ ಅಯೋಧ್ಯೆಯಲ್ಲಿ ನಿರ್ಮಾಣವಾಗಿ ಉದ್ಘಾಟನೆಗೊಳ್ಳುತ್ತಿದೆ. ಅದರ ಸವಿನೆನಪಿಗಾಗಿ ನಮ್ಮ ಬೇಕರಿಯಲ್ಲಿ ವಿಶೇಷ ಆಸಕ್ತಿಯಿಂದ, ಶ್ರದ್ಧಾ ಭಕ್ತಿಯಿಂದ ಕೇಕ್‌ನಲ್ಲಿಯೇ ಶ್ರೀರಾಮ ಮಂದಿರದ ಮಾದರಿ ತಯಾರು ಮಾಡಲಾಗಿದೆ. ಕೇಕ್ ನೋಡಿ ಜನರಿಂದ ವ್ಯಕ್ತವಾಗುತ್ತಿರುವ ಸ್ಪಂದನೆಯಿಂದ ನಮಗೂ ತುಂಬಾ ಖುಷಿ ಆಗುತ್ತಿದೆ. ಜನರು ಕೂಡಾ ಖುಷಿ ಪಡುತ್ತಿದ್ದಾರೆ. ಜ. 22ರಂದು ಅಯೋಧ್ಯೆಗೆ ಹೋಗಲು ಹೆಚ್ಚಿನವರಿಗೆ ಆಗುವುದಿಲ್ಲ. ಅವರೆಲ್ಲ ಗದಗ ನಗರದಲ್ಲಿಯೇ ಶ್ರೀರಾಮ ಮಂದಿರ ನೋಡಲಿ. ಅಯೋಧ್ಯೆಗೆ ಹೋದ ಅನುಭವ ಈ ಕೇಕ್ ಮೂಲಕ ಪಡೆಯಲಿದ್ದಾರೆ ಎಂದು ಬೇಕರಿ ಮಾಲೀಕರಾದ ಶರಣಪ್ಪ ಸಾಸನೂರ, ರಮೇಶ್ ಸಾಸನೂರ ಹೇಳುತ್ತಾರೆ.ಇದೊಂದು ವಿಶೇಷ ಪ್ರಯತ್ನ. ಸಾಕಷ್ಟು ತಾಳ್ಮೆಯಿಂದ ಕೇಕ್ ನಿರ್ಮಿಸಿದ್ದಾರೆ. ಇದಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬ ಕಾರ್ಮಿಕರು ಮತ್ತು ಅದಕ್ಕೆ ಪ್ರೋತ್ಸಾಹಿಸಿ ಮಾಲೀಕರು ಅಭಿನಂದನಾರ್ಹರು. ಗದಗ ಜಿಲ್ಲೆಯ ಜನತೆಯ ಮನಸ್ಸಿಗೆ ಶ್ರೀರಾಮ ಮಂದಿರ ಈ ಮೂಲಕ ತಲುಪುತ್ತಿರುವುದು ಖುಷಿ ತಂದಿದೆ ಎಂದು ಗ್ರಾಹಕ ಕಿರಣ್ ಕೆ. ಹೇಳುತ್ತಾರೆ.