ಕೃಷಿ ಹೊಂಡದಲ್ಲಿ ಯಾವುದೇ ಇಂತಹ ಅನಾಹುತಗಳು ಸಂಭವಿಸದೇ ಇರಲೆಂದು ಇಲ್ಲೊಬ್ಬ ರೈತ ಇಡೀ ಕೃಷಿ ಹೊಂಡಕ್ಕೆ ರಕ್ಷಣಾತ್ಮಕವಾಗಿ ತಂತಿ ಬೇಲಿ ಹಾಕುವ ಮೂಲಕ ಉಳಿದ ರೈತರಿಗೆ ಮಾದರಿ ಆಗಿದ್ದಾನೆ.
ಬಸವರಾಜ ಹಿರೇಮಠ
ಧಾರವಾಡ: ಒಣ ಬೇಸಾಯದ ರೈತರ ಹೊಲಗಳಲ್ಲಿ ಕೃಷಿ ಹೊಂಡಗಳು ಸಾಮಾನ್ಯ. ಒಣ ಬೇಸಾದ ಕೃಷಿಗೆ ಕೃಷಿ ಹೊಂಡಗಳೇ ಜಲಮೂಲ. ಕೃಷಿ, ಹೈನುಗಾರಿಕೆಗೆ ನೀರು ಒದಗಿಸಲು ನಿರ್ಮಿಸಿರುವ ಈ ಕೃಷಿ ಹೊಂಡಗಳಲ್ಲಿ ಈಜಲು ಹೋಗಿ ಮುಳುಗಿ ಸಾವಿಗೀಡಾದ ಪ್ರಕರಣಗಳೇ ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಕೃಷಿ ಹೊಂಡದಲ್ಲಿ ಯಾವುದೇ ಇಂತಹ ಅನಾಹುತಗಳು ಸಂಭವಿಸದೇ ಇರಲೆಂದು ಇಲ್ಲೊಬ್ಬ ರೈತ ಇಡೀ ಕೃಷಿ ಹೊಂಡಕ್ಕೆ ರಕ್ಷಣಾತ್ಮಕವಾಗಿ ತಂತಿ ಬೇಲಿ ಹಾಕುವ ಮೂಲಕ ಉಳಿದ ರೈತರಿಗೆ ಮಾದರಿ ಆಗಿದ್ದಾನೆ.ನವಲಗುಂದ ತಾಲೂಕಿನ ಅರೆಕುರಹಟ್ಟಿ ಗ್ರಾಮದ ಲೋಹಿತ್ ಮುಳಗುಂದಮಠ ಅವರಿಂದ ಈ ಮಾದರಿ ಕಾರ್ಯವಾಗಿದೆ. ಕೃಷಿ ಹೊಂಡವು 100 ಅಡಿ ಅಗಲ, 100 ಅಡಿ ಉದ್ದ ಹಾಗೂ 18 ಅಡಿ ಆಳವಿದೆ. ಈ ಹೊಂಡವು ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಪಕ್ಕವೇ ಇರುವುದರಿಂದ ಇಲ್ಲಿ ಜನರ ಸಂಚಾರ ದಟ್ಟಣೆ ತುಸು ಜಾಸ್ತಿ. ರಸ್ತೆ ಪಕ್ಕದಲ್ಲಿಯೇ ಇರುವುದರಿಂದ ಅನಾಹುತ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಲೋಹಿತ್ ಅವರು ಕೃಷಿ ಹೊಂಡದ ಖರ್ಚಿನೊಂದಿಗೆ ಹೆಚ್ಚುವರಿಯಾಗಿ ಒಂದೂವರೆ ಲಕ್ಷ ವೆಚ್ಚದಲ್ಲಿ ಸಂಪೂರ್ಣವಾಗಿ ಹೊಂಡಕ್ಕೆ ಎಂಟು ಅಡಿ ಎತ್ತರದ ತಂತಿ ಬೇಲಿ ಹಾಕಿದ್ದಾರೆ.
ರಕ್ಷಣಾ ಕಾರ್ಯ
ಲೋಹಿತ್ ಅವರದ್ದು ಸುಮಾರು 16 ಎಕರೆ ಜಮೀನಿದೆ. ಈ ಜಮೀನಿನಲ್ಲಿ ಕೃಷಿ ಜತೆಗೆ ಹೈನುಗಾರಿಕೆ ಸಹ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಕಾಲುವೆ ನೀರನ್ನು ಬಳಸಿಕೊಳ್ಳುವ ಈ ಕುಟುಂಬವು ಮಳೆ ಬಾರದೇ ಇದ್ದಾಗ ಕೃಷಿ ಹೊಂಡದ ನೀರನ್ನು ಬಳಸುತ್ತದೆ. ಹೊಂಡದ ಗೇಟ್‌ಗೆ ಕೀಲಿ ಹಾಕಿದ್ದು ಯಾರೂ ಹೋಗದಂತೆ ಬೇಲಿ ಇದೆ.
ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಈಗಂತೂ ಕೃಷಿ ಹೊಂಡಗಳಿಗೆ ಪ್ರೋತ್ಸಾಹ, ಸಹಾಯಧನ ನೀಡುತ್ತಿದೆ. ಹೀಗಾಗಿ ಪ್ರತಿಯೊಬ್ಬ ರೈತರ ಹೊಲಗಳಲ್ಲೂ ಕೃಷಿ ಹೊಂಡಗಳಿವೆ. ಆದರೆ, ಎಲ್ಲ ಹೊಂಡಗಳು ಬಯಲಿನಲ್ಲಿಯೇ ಇದ್ದು, ನೀರು ತುಂಬಲು, ಊಟ ಮಾಡಿ ಕೈ ತೊಳೆಯಲು ಹೋದಾಗ ಅಥವಾ ಈಜಲು ಹೋದಾಗ ಮಕ್ಕಳು, ಯುವಕರು, ಮಹಿಳೆಯರು ಹೀಗೆ ಸಾಕಷ್ಟು ಜನರು ನೀರುಪಾಲಾದ ದುರ್ಘಟನೆಗಳು ನಡೆದಿರುವುದು ನಮ್ಮ ಕಣ್ಮುಂದಿದೆ. ಈ ಹಿನ್ನೆಲೆಯಲ್ಲಿ ಲೋಹಿತ್ ಈ ಮಹತ್ ಕಾರ್ಯ ಮಾಡಿದ್ದಾರೆ. ವಿಶೇಷ ಎಂದರೆ, ಲೋಹಿತ್ ಅವರ ಜಮೀನಿಗೆ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾತ್ರವಲ್ಲದೇ, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಸಹ ಭೇಟಿ ನೀಡಿದ್ದಾರೆ.
ಕೃಷಿ ಹೊಂಡದಲ್ಲಿ ಮಕ್ಕಳಾದಿಯಾಗಿ ಬಹಳಷ್ಟು ಜನರು ಮುಳುಗಿ ಸತ್ತಿರುವುದನ್ನು ನೋಡಿದ್ದೇನೆ. ಅಲ್ಲದೇ, ತಮ್ಮದಲ್ಲದೇ ತಪ್ಪಿಗೆ ರೈತರು ಈ ಪ್ರಕರಣದಲ್ಲಿ ಕಾನೂನು ಸಮಸ್ಯೆ ಎದುರಿಸಿದ್ದಾರೆ. ಅದರಲ್ಲೂ ನಮ್ಮ ಕೃಷಿ ಹೊಂಡ ರಸ್ತೆ ಬಳಿಯೇ ಇದ್ದು ಜನ ಸಂಚಾರ ಹೆಚ್ಚು. ಆದ್ದರಿಂದ ಯಾವುದೇ ಅನಾಹುತ ಸಂಭವಿಸಬಾರದು ಎಂದು ಒಂದೂವರೆ ಲಕ್ಷ ರು. ವೆಚ್ಚದಲ್ಲಿ ತಂತಿ ಬೇಲಿ ಹಾಕಿದ್ದೇನೆ. ಇದೇ ರೀತಿ ಉಳಿದ ರೈತರೂ ಅನುಸರಿಸಿದರೆ ಕೃಷಿ ಹೊಂಡದಲ್ಲಿ ಯಾವುದೇ ಅನಾಹುತಗಳಾಗುವುದಿಲ್ಲ ಎಂದು ರೈತ ಲೋಹಿತ್ ಹೇಳುತ್ತಾರೆ.
ಅರೆಕುರಹಟ್ಟಿಯ ಯುವ ರೈತ ಲೋಹಿತ್ ಮಾಡಿರುವ ಕಾರ್ಯ ಶ್ಲಾಘನೀಯ. ಈ ಕೃಷಿ ಹೊಂಡವನ್ನು ನಾನು ಸಹ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದೇನೆ. ಅದೇ ರೀತಿ ತುಸು ಆರ್ಥಿಕವಾಗಿ ಚೆನ್ನಾಗಿರುವ ರೈತರು ಕೂಡಲೇ ಬೇಲಿ ಅಳವಡಿಸಿಕೊಳ್ಳಲು ನಾವು ಪ್ರೇರೇಪಿಸುತ್ತೇವೆ. ಜತೆಗೆ ಸರ್ಕಾರದಿಂದಲೂ ಈ ಕಾರ್ಯಕ್ಕೆ ಪ್ರೋತ್ರಾಹಿಸಲು ಪ್ರಯತ್ನಿಸುತ್ತೇನೆ ಎಂದು ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.