ಬಿಸಿಲ ಝಳದಿಂದ ಎಳನೀರಿಗೆ ಮೊರೆ ಹೋಗುತ್ತಿರುವ ಗ್ರಾಹಕರು, ಪೂರೈಕೆ ಕುಸಿತ

KannadaprabhaNewsNetwork | Published : Mar 21, 2025 12:30 AM

ಸಾರಾಂಶ

ಕಳೆದ ಕೆಲವು ದಿನಗಳಿಂದ ಹೀಟ್‌ ವೇವ್‌, ರಣ ಬಿಸಿಲಿಗೆ ಕಂಗೆಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಳನೀರಿಗೆ ಭರ್ಜರಿ ಡಿಮ್ಯಾಂಡ್‌ ಸೃಷ್ಟಿಯಾಗಿದೆ. ಆದರೆ ಮಾರಾಟಗಾರರಿಗೆ ಬೇಕಾದಷ್ಟು ಎಳನೀರು ಸಿಗುತ್ತಿಲ್ಲ. ಪರಿಣಾಮ ‘ಬೊಂಡ’ದ ದರ 55- 65 ರು.ವರೆಗೆ ಜಿಗಿದಿದೆ!

ಕನ್ನಡಪ್ರಭ ವಾರ್ತೆ ಮಂಗಳೂರು

ಕಳೆದ ಕೆಲವು ದಿನಗಳಿಂದ ಹೀಟ್‌ ವೇವ್‌, ರಣ ಬಿಸಿಲಿಗೆ ಕಂಗೆಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಳನೀರಿಗೆ ಭರ್ಜರಿ ಡಿಮ್ಯಾಂಡ್‌ ಸೃಷ್ಟಿಯಾಗಿದೆ. ಆದರೆ ಮಾರಾಟಗಾರರಿಗೆ ಬೇಕಾದಷ್ಟು ಎಳನೀರು ಸಿಗುತ್ತಿಲ್ಲ. ಪರಿಣಾಮ ‘ಬೊಂಡ’ದ ದರ 55- 65 ರು.ವರೆಗೆ ಜಿಗಿದಿದೆ!ಮಂಗಳೂರಿನಲ್ಲಿ ಒಂದೂವರೆ ವರ್ಷದ ಹಿಂದೆ ಹಸಿರು ಎಳನೀರು 40 ರು.ಗೆ ಮಾರಾಟವಾಗುತ್ತಿತ್ತು. ಕಳೆದ ವರ್ಷ ಬೇಸಗೆ ಶುರುವಿನಲ್ಲಿ 45 ರು.ಗೇರಿ ಬಳಿಕ 50 ರು. ಫಿಕ್ಸ್‌ ಆಗಿತ್ತು. ಮಳೆಗಾಲದ ಬಳಿಕ ದರ ಇಳಿಕೆಯಾಗುವ ನಿರೀಕ್ಷೆಯಿದ್ದರೂ ಆಗಲಿಲ್ಲ. ಈ ವರ್ಷ ಫೆಬ್ರವರಿವರೆಗೂ 50 ರು. ಇದ್ದದ್ದು ಬಳಿಕ ಏಕಾಏಕಿ 55 ರು., ಕೆಲವೆಡೆ 60 ರು.ಗೆ ಮಾರಾಟ ಮಾಡಲಾಗುತ್ತಿದೆ. ಗೆಂದಾಳಿ ಎಳನೀರಿನ ದರವಂತೂ 65 ರು.ಗಿಂತಲೂ ಹೆಚ್ಚಿದೆ. ಬೆಲೆ ಏರಿಕೆಯಿಂದ ಬಡವರು ಎಳನೀರನ್ನು ಮುಟ್ಟುವುದೇ ದುಸ್ತರವಾಗಿಬಿಟ್ಟಿದೆ.

ಭರ್ಜರಿ ಬಿಸಿಲ ಝಳ ಎಫೆಕ್ಟ್‌:

ಇವೆಲ್ಲದಕ್ಕೂ ಮೂಲ ಕಾರಣ ಕಡಲ ತಡಿಯ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲ ಝಳ. ಮಾರುಕಟ್ಟೆಯಲ್ಲಿ ಎಳನೀರಿನ ಅಭಾವ ಸೃಷ್ಟಿಯಾಗುವಂತೆ ಮಾಡಿ ದರ ಹೆಚ್ಚಿಸುವ ದಂಧೆ ಕಂಡುಬರುತ್ತಿದೆ. ಬಿಸಿಲು ಏರಿಕೆ ಆಗುವಾಗ ಜನರಿಗೆ ಮೊದಲು ನೆನಪಾಗುವುದೇ ಎಳನೀರು. ಇದನ್ನೇ ದಾಳವನ್ನಾಗಿ ಮಾಡಿಕೊಂಡು ದರ ಏರಿಕೆ ಮಾಡುವ ಸಾಧ್ಯತೆ ಇಲ್ಲದಿಲ್ಲ ಎಂದು ಎಳನೀರಿನ ಮಾಜಿ ವ್ಯಾಪಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ ಸ್ಥಳೀಯವಾಗಿ ಮಾತ್ರವಲ್ಲದೆ, ಕೆಆರ್ ಪೇಟೆ, ಚಿಕ್ಕಮಗಳೂರು ಮತ್ತು ತಮಿಳುನಾಡಿನಿಂದ ದೊಡ್ಡ ಮಟ್ಟದಲ್ಲಿ ಎಳನೀರು ಸರಬರಾಜು ಆಗುತ್ತದೆ. ಬೇಸಗೆ ಸಂದರ್ಭ 1 ಲಕ್ಷಕ್ಕೂ ಅಧಿಕ ಎಳನೀರು ಮಾರಾಟ ಆಗುತ್ತದೆ. ಆದರೆ ವ್ಯಾಪಾರಸ್ಥರು ಹೇಳಿದಷ್ಟು ಎಳನೀರು ಸಿಗುತ್ತಿಲ್ಲ. ಅಂಗಡಿಯವರು ರಾತ್ರಿ 1 ಗಂಟೆಯಿಂದ ಕಾದು ಕುಳಿತು ಎಳನೀರು ಹಾಕಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಎಳನೀರು ಪೂರೈಕೆ ತೀರ ಕಡಿಮೆಯಾದರೆ ಬೆಲೆ ಮತ್ತಷ್ಟು ಏರಿಕೆಯಾಗುವುದರಲ್ಲಿ ಸಂಶಯವೇ ಇಲ್ಲ.

ಪ್ರಸ್ತುತ ಬಿಸಿಲ ಝಳ ಹೆಚ್ಚಿರುವುದರಿಂದ ಎಳನೀರು ಹಾಕಿಸಿದಷ್ಟೂ ಮಾರಾಟವಾಗುತ್ತದೆ. ಆದರೆ ಹೊರ ರಾಜ್ಯಗಳಿಗೆ ಎಳನೀರು ಹೋಗುತ್ತಿರುವುದರಿಂದ ಕರಾವಳಿಗೆ ಸರಬರಾಜು ಕಡಿಮೆಯಾಗಿದೆ ಎನ್ನುತ್ತಾರೆ ಮಂಗಳೂರಿಗೆ ಎಳನೀರು ಸರಬರಾಜು ಮಾಡುವ ಸಿಬ್ಬಂದಿ.

Share this article