ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಬಳಕೆ ಅಗತ್ಯ: ಸಚಿವ ದರ್ಶನಾಪೂರ

KannadaprabhaNewsNetwork | Published : Jan 3, 2024 1:45 AM

ಸಾರಾಂಶ

ಜಿಲ್ಲಾಮಟ್ಟದ ಸಿರಿಧಾನ್ಯ ರೋಡ್ ಶೋಗೆ ಶರಣಬಸಪ್ಪಗೌಡ ದರ್ಶನಾಪೂರ ಚಾಲನೆ ನೀಡಿದರು. ರೈತರು ಹಾಗೂ ಗ್ರಾಹಕರು ಸಿರಿಧಾನ್ಯ ಬೆಳೆಗಳ ಬಗ್ಗೆ ಹೆಚ್ಚಿನ ಗಮನಹರಿಸಲು ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಸಿರಿಧಾನ್ಯಗಳ ಆಹಾರ ನಮ್ಮ ಆರೋಗ್ಯಕ್ಕೆ ತುಂಬಾ ಉಪಯುಕ್ತತೆಯಾಗಿದೆ. ಉತ್ತಮ ಆರೋಗ್ಯಕ್ಕಾಗಿ ಇವುಗಳ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಧಾನ್ಯಗಳ ಮಹತ್ವದ ಬಗ್ಗೆ ಪ್ರಚಾರ ಮುಖ್ಯವಾಗಿದೆ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.

ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಯಾದಗಿರಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಜಿಲ್ಲಾ ಕೃಷಿಕ ಸಮಾಜ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಸಿರಿಧಾನ್ಯ ರೋಡ್ ಶೋಗೆ ವಿನೂತನವಾಗಿ ಸಿರಿ ಜ್ಯೋತಿ ಬೆಳಗಿಸಿ, ಸಿರಿಧಾನ್ಯಗಳ ಜಾಗೃತಿ ಬಲೂನ್‌ ಹಾರಿಸುವುದರ ಮೂಲಕ ಚಾಲನೆ ನೀಡಿ, ಮಾತನಾಡಿದರು.

ಸರ್ಕಾರ, ಕೃಷಿ ಇಲಾಖೆ ಸಿರಿಧಾನ್ಯ ಕೃಷಿಯನ್ನು ಉತ್ತೇಜಿಸುತ್ತದೆ. ರೈತರು ಹಾಗೂ ಗ್ರಾಹಕರು ಸಿರಿಧಾನ್ಯ ಬೆಳೆಗಳ ಬಗ್ಗೆ ಹೆಚ್ಚಿನ ಗಮನಹರಿಸಲು ತಿಳಿಸಿದರು. ಯಾದಗಿರಿ ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ, ತಹಸೀಲ್ದಾರ್ ಉಮಾಕಾಂತ ಹಳ್ಳೆ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಮಂಜುಳಾ ಬಸವರೆಡ್ಡಿ, ಶಹಾಪುರ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಸುನಿಲ್‌ ಕುಮಾರ ಯರಗೋಳ, ಸುರಪುರ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಭೀಮರಾಯ ಹವಾಲ್ದಾರ, ಯಾದಗಿರಿ ಸಹಾಯಕ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ವಾರದ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಸಣ್ಣಗೌಡ ಮಾಲಿಪಾಟೀಲ್ ಮರಕಲ್, ಕೃಷಿ ಮಹಾವಿದ್ಯಾಲಯ ಡೀನ್ ಡಾ. ಪ್ರಕಾಶ ಕುಚನೂರು, ಹಿರಿಯ ಕೃಷಿ ವಿಜ್ಞಾನಿ ಡಾ. ಜಯಪ್ರಕಾಶ ನಾರಾಯಣ, ವಿಶ್ರಾಂತ ದೈಹಿಕ ಶಿಕ್ಷಣ ಅಧ್ಯಾಪಕ ಸುಧಾಕರ ಗುಡಿ, ಬಿಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಶಿವಲಿಂಗಣ್ಣ ಸಾಹು, ಎನ್‌ಎಸ್‌ಎಸ್ ಅಧಿಕಾರಿ ರಾಘವೇಂದ್ರ ಹಾರಣಗೇರಾ, ಭೀಮರಾಯ ಭಂಡಾರಿ, ಗಂಗಣ್ಣ ಹೊಸಮನಿ ಇತರರಿದ್ದರು.

ಸಿರಿಧಾನ್ಯ ಮಹತ್ವ ಸಾರಿದ ವಿದ್ಯಾರ್ಥಿಗಳು :

ಶಹಾಪುರ ನಗರದ ಸಿಪಿಎಸ್ ಶಾಲಾ ಮೈದಾನದಿಂದ ಬಸವೇಶ್ವರ ವೃತ್ತ, ಗಾಂಧಿ ಚೌಕ್ ಮೂಲಕ ಶಾಲಾ ಮೈದಾನದವರೆಗೆ ನಡೆದ ಸಿರಿಧಾನ್ಯ ರೋಡ್‌ ಶೋನಲ್ಲಿ ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಕೃಷಿ ಮಹಾವಿದ್ಯಾಲಯ ವಿದ್ಯಾರ್ಥಿಗಳು, ಕೃಷಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗ ಮುಂತಾದವರು ಪಾಲ್ಗೊಂಡು, ನವಣೆ ಉಣಿಸು ಬವಣೆ ಬಿಡಿಸು, ಜೋಳ ತಿಂದವನು ತೋಳದಂತಾಗುವನು, ಸಿರಿಧಾನ್ಯ ಸಿಂಗಾರ ಆರೋಗ್ಯ ಬಂಗಾರ, ಶ್ರೇಷ್ಠ ಧಾನ್ಯ ಸಿರಿಧಾನ್ಯ, ನಮ್ಮ ನಡೆ ಸಿರಿಧಾನ್ಯ ಕಡೆ ಮುಂತಾದ ಘೋಷಣೆಗಳ ಮೂಲಕ ಸಿರಿಧಾನ್ಯಗಳ ಮಹತ್ವ ಸಾರಿದರು. ರೋಡ್ ಶೋನಲ್ಲಿ ಸಚಿವರು, ಜಿಲ್ಲಾಧಿಕಾರಿ, ಜಿಲ್ಲೆ ಮತ್ತು ತಾಲೂಕಿನ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.

Share this article