ಸಿರಿಧಾನ್ಯ ಸೇವನೆಯಿಂದ ಆಯಸ್ಸು 10 ವರ್ಷ ಜಾಸ್ತಿ: ಡಾ. ಶಿವಪ್ರಕಾಶ್‌

KannadaprabhaNewsNetwork |  
Published : Jul 17, 2025, 12:36 AM IST
ಚಿತ್ರ 16ಬಿಡಿಆರ್‌2ಬೀದರ್‌ ಜಿಪಂ ಸಭಾಂಗಣದಲ್ಲಿ ಆತ್ಮ ನಿರ್ಭರ ಭಾರತ ಅಭಿಯಾನದಡಿ ಪ್ರಧನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆ, ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿ ಕುರಿತು ಜಾಗೃತಿಗಾಗಿ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಜಿಪಂ ಸಿಇಒ ಡಾ. ಗಿರೀಶ ಬದೋಲೆ ಮಾತನಾಡಿದರು. | Kannada Prabha

ಸಾರಾಂಶ

ಬೆಲ್ಲ, ಗಾಣದ ಎಣ್ಣೆ ಹಾಗೂ ಸಿರಿ ಧಾನ್ಯಗಳ ಸೇವನೆಯಿಂದ ಮನುಷ್ಯನ ಆಯಸ್ಸು 10 ವರ್ಷ ಹೆಚ್ಚಳವಾಗುತ್ತದೆ ಎಂದು ಕೆಪೆಕ್‌ ವ್ಯವಸ್ಥಾಪಕ ನಿರ್ದೇಶಕ ಡಾ. ಶಿವಪ್ರಕಾಶ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಬೆಲ್ಲ, ಗಾಣದ ಎಣ್ಣೆ ಹಾಗೂ ಸಿರಿ ಧಾನ್ಯಗಳ ಸೇವನೆಯಿಂದ ಮನುಷ್ಯನ ಆಯಸ್ಸು 10 ವರ್ಷ ಹೆಚ್ಚಳವಾಗುತ್ತದೆ ಎಂದು ಕೆಪೆಕ್‌ ವ್ಯವಸ್ಥಾಪಕ ನಿರ್ದೇಶಕ ಡಾ. ಶಿವಪ್ರಕಾಶ ಹೇಳಿದರು.

ಅವರು ಬುಧವಾರ ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಆತ್ಮ ನಿರ್ಭರ ಭಾರತ ಅಭಿಯಾನದಡಿ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆ, ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿ ಕುರಿತು ಜಾಗೃತಿಗಾಗಿ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಬೆಂಗಳೂರಿನಿಂದ ನೇರ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.

ಆಹಾರ ಸಂಸ್ಕರಣಾ ಘಟಕಗಳಿಂದ ಜನರ ಆರೋಗ್ಯ ಕಾಪಾಡುವ ಮೂಲಕ ಸಮಾಜಕ್ಕೆ ಕೊಡುಗೆ ಕೊಟ್ಟಂತಾಗುತ್ತದೆ. ಕೆಪೆಕ್‌ ವತಿಯಿಂದ ಇಡೀ ರಾಜ್ಯದಲ್ಲಿ ಸುಮಾರು 1800 ಚಿಲ್ಲರೆ ಯುನಿಟ್‌ಗಳು ನಡೆಯುತ್ತಿವೆ ಅದರಲ್ಲಿ ಮಂಡ್ಯ ಜಿಲ್ಲೆ ಒಂದರಲ್ಲಿಯೇ ಬೆಲ್ಲ ತಯಾರಿಸುವ 380 ಹಾಗೂ 800 ಎಣ್ಣೆಯ ಗಾಣಾ ಯುನಿಟ್‌ಗಳು ನಡೆಯತ್ತಿವೆ ಎಂದರು.

ಪಿಎಂಎಫ್‌ಎಮ್‌ಇ ಯೋಜನೆಯಡಿ ರಾಜ್ಯದ ಪ್ರತಿ ಗ್ರಾಮದಲ್ಲಿ ಒಂದು ಎಣ್ಣೆ ಗಾಣಾ, ಬೆಲ್ಲ ತಯಾರಿಕೆ ಹಾಗೂ ಸಿರಿ ಧಾನ್ಯಗಳ ಉತ್ಪಾದನೆ ಇದ್ದರೆ ಇಡೀ ದೇಶಕ್ಕೆ ರಾಜ್ಯ ಮಾದರಿಯಾಗುತ್ತದೆ. ಈ ಯೋಜನೆಯ ಲಾಭ ಪಡೆಯಲು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳಿದ್ದು, ಕೃಷಿ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಯ ಸಹಯೋಗದೊಂದಿಗೆ ಜನರಿಗೆ ಉದ್ಯೋಗಪತಿ ಮಾಡಲು ಜನರ ಆರೋಗ್ಯ ಕಾಪಾಡುವವರು ಆಗಲಿ ಎಂಬ ಉದ್ದೇಶವಾಗಿದೆ ಎಂದರು.

ಒಂದು ಸಾವಿರ ಉದ್ಯಮ ಆರಂಭಿಸುವ ಗುರಿ ಇರಲಿ: ಜಿಪಂ ಸಿಇಒ

ಜಿಲ್ಲಾ ಪಂಚಾಯತ್‌ ಸಿಇಒ ಡಾ. ಗಿರೀಶ ಬದೋಲೆ, ಕಳೆದ 5 ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 590 ಅರ್ಜಿಗಳು ಬಂದಿದ್ದು, ಅದರಲ್ಲಿ 179 ಜನ ಫಲಾನುಭವಿಗಳಿಗೆ ಲಾಭವಾಗಿದೆ. 334 ಅರ್ಜಿಗಳು ತಿರಸ್ಕೃತಗೊಂಡಿದ್ದು 47 ಅರ್ಜಿಗಳು ಇನ್ನೂ ಪರಿಶೀಲನೆಯಲ್ಲಿವೆ ಎಂಬ ಮಾಹಿತಿ ಇದ್ದು, ಈ ಯೋಜನೆಗೆ ಕೇವಲ ಒಂದು ವರ್ಷ ಬಾಕಿ ಇದ್ದ ಕಾರಣ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಸುಮಾರು 1 ಸಾವಿರ ಜನರಿಗೆ ಅನುಕೂಲವಾಗುವಂತಾಗಲು ಹೆಚ್ಚು ಅರ್ಜಿಗಳು ಬರಬೇಕು ಎಂದರು.

ಕಿರು ಧಾನ್ಯದ ಉದ್ಯಮ ಸರ್ಕಾರದ ಡಬ್ಲಿಂಗ್‌ ಆದಾಯ ಎನಿಸಿಕೊಂಡಿವೆ :

ರೈತರಿಗೆ ಅನುಕೂಲವಾಗಲು ಬ್ಯಾಂಕಿನಲ್ಲಿನ ಸಾಲ ಮಂಜೂರಿಗೆ ಸರಳೀಕರಣ ಮಾಡಿ ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಸಣ್ಣ ಪುಟ್ಟ ಬ್ಯಾಂಕ್‌ ಸಾಲ ಇದ್ದರೂ ಅವರಿಗೆ ಸಾಲ ನೀಡಿ ಎಂದ ಅವರು, ಒಂದು ಟನ್‌ ಕಬ್ಬಿಗೆ ಸುಮಾರು 25 ರಿಂದ 30 ಸಾವಿರ ರು. ವರೆಗೆ ಆದಾಯ ತರಬಹುದು. ಸರ್ಕಾರದ ಡಬ್ಲಿಂಗ್ ಆದಾಯ ಎಂಬುದಕ್ಕೆ ಇಂತಹ ಯೋಜನೆಗಳೇ ಉದಾಹರಣೆಯಾಗಿವೆ, ನಿಮ್ಮ ಉತ್ಪನ್ನಗಳು ಡಿ ಮಾರ್ಟ್‌, ಜಿಯೋ ಮಾರ್ಟ್‌ನಂತಹ ಮಳಿಗೆಗಳಲ್ಲಿ ಮಾರಾಟ ಆಗುವಂತಾಗಲಿ ಎಂದು ಸಿಇಓ ಆಶಿಸಿದರು.

ಯೋಜನೆಗಾಗಿ 206 ಕೋಟಿ ರು.ಮೀಸಲು: ಡಾ. ಶಿವಕುಮಾರ್‌

ಕೆಪೆಕ್‌ ವ್ಯವಸ್ಥಾಪಕರಾದ ಡಾ. ಶಿವಕುಮಾರ್‌ ಎಸ್‌.ಕೆ ಅವರು ಯೋಜನೆಯ ಬಗ್ಗೆ ಹಾಗೂ ಅದರ ಲಾಭ ಪಡೆಯುವ ಕುರಿತು ಮಾಹಿತಿ ನೀಡಿ, ಇಡೀ ದೇಶದಲ್ಲಿಯೇ ಕರ್ನಾಟಕದಲ್ಲಿ ಅತೀ ಹೆಚ್ಚು ಸಬ್ಸಿಡಿ ನೀಡಲಾಗುತ್ತಿದೆ ಒಂದು ವರ್ಷ ಈ ಯೋಜನೆಗಾಗಿ 206 ಕೋಟಿ ರು. ಹೆಚ್ಚುವರಿಯಾಗಿ ಮೀಸಲಿಡಲಾಗಿದೆ ಎಂದರು.

ಕೃಷಿ ಜಂಟಿ ನಿರ್ದೇಶಕರಾದ ದೇವಿಕಾ ಮಾತನಾಡಿ, 2020-21ರಲ್ಲಿ ಈ ಯೋಜನೆ ಆರಂಭವಾಗಿದ್ದು, ಜಿಲ್ಲೆಯಲ್ಲಿ 13 ಜನ ಸಂಪನ್ಮೂಲ ವ್ಯಕ್ತಿಗಳು ಕೆಲಸ ಮಾಡುತಿದ್ದು, ಕೃಷಿ ಇಲಾಖೆ ನೋಡಲ್‌ ಕಚೇರಿಯಾಗಿರುತ್ತದೆ. ಇಲ್ಲಿ ಎಲ್ಲವು ಉಚಿತ ಸಲಹೆ ಹಾಗೂ ತರಬೇತಿ ನೀಡಲಾಗುತ್ತದೆ ಎಂದ ಅವರು, ಜಿಲ್ಲೆಯಲ್ಲಿ 179 ಫಲಾನುಭವಿಗಳ ಪೈಕಿ 29 ಜನ ಬೆಲ್ಲ ತಯಾರಿಕೆ, 17 ಜನ ಮಿಲ್ಲೆಟ್‌ ಪೌಡರ್‌ (ಸಿರಿ ಧಾನ್ಯ), 18 ಜನ ಬೇಕರಿ, 13 ಜನ ಚಿಲ್ಲಿ ಪೌಡರ್‌, ಅಕ್ಕಿ ಹಪ್ಪಳ ಸೇರಿದಂತೆ ಇನ್ನಿತರ ಉದ್ಯಮದಲ್ಲಿ ತೊಡಗಿದ್ದಾರೆ ಎಂದರು.

ಲೀಡ್‌ ಬ್ಯಾಂಕ್ ವ್ಯವಸ್ಥಾಪಕರಾದ ಸತೀಶ ಅವರು ಯೋಜನೆಯಿಂದ ಸಾಲ ಪಡೆಯಲು ಬೇಕಾಗಿರುವ ದಾಖಲಾತಿಗಳ ಬಗ್ಗೆ ವಿವರವಾಗಿ ತಿಳಿಸಿದರು. ಕೃಷಿ ಸಂಶೋಧನಾ ಇಲಾಖೆಯ ಡಾ. ಭವಾನಿ, ಕೆವಿಕೆಯ ಮುಖ್ಯಸ್ಥರಾದ ಉಮೇಶ, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರಾದ ಸತೀಶ ಇದ್ದರು. ಕೃಷಿ, ತೋಟಗಾರಿಕೆ, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು, ಡಿಜಿಟಲ್‌ ಸಖಿಯರು, ಸ್ವ ಸಹಾಯ ಸಂಘದ ಮಹಿಳೆಯರು, ಜಿಲ್ಲೆಯ ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಉದ್ಯಮಿಗಳು ಪಾಲ್ಗೊಂಡಿದ್ದರು.

ಕಾರ್ಯಾಗಾರದಲ್ಲಿ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಯಿಂದ ಯಶಸ್ಸು ಸಾಧಿಸಿದ ಫಲಾನುಭವಿಗಳ ಕುರಿತಾಗಿ ಪ್ರಕಟಗೊಳ್ಳುತ್ತಿರುವ ಸಾಧನೆಯ ವಿಶೇಷ ವರದಿಯನ್ನು ಎಲ್ಲರೂ ಓದಿ ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಯೋಜನೆ ಹಾಗೂ ಘಟಕ ಸ್ಥಾಪನೆ ಕುರಿತು ಸಂಪೂರ್ಣ ಮಾಹಿತಿವುಳ್ಳ ಕರಪತ್ರಗಳನ್ನು ವಿತರಿಸಲಾಯಿತು. ಕೆಪೆಕ್‌ನ ತಾಂತ್ರಿಕ ಅಧಿಕಾರಿ ಮಹೇಶ ವಿವರ ನೀಡಿದರು.

PREV

Latest Stories

ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಣೆಗೆ ಕ್ರಮ : ನ್ಯಾ.ವಿಭು
ಕೃಷ್ಣಾ ಮೇಲ್ದಂಡೆ-3 ಭೂಸ್ವಾಧೀನಕ್ಕೆ 2.01 ಲಕ್ಷ ಕೋಟಿ ಬೇಕು : ಸಚಿವ ಕೃಷ್ಣ
ನಮ್ಮ ಗ್ಯಾರಂಟಿ ಯೋಜನೆ ದೇಶಕ್ಕೇ ಮಾದರಿ - ಟೀಕಿಸಿದ್ದ ಬಿಜೆಪಿಯೇ ಕಾಪಿ ಮಾಡಿದೆ : ಡಿಸಿಎಂ ಡಿಕೆಶಿ