ಕಾವೇರಿ ನದಿ ಒಡಲಿಗೆ ಕಲುಷಿತ ನೀರು ಸೇರ್ಪಡೆ ನಿರಂತರ: ಎಚ್ಚರಗೊಳ್ಳದ ಆಡಳಿತ

KannadaprabhaNewsNetwork |  
Published : Jan 10, 2025, 12:47 AM IST
8ಎಂಡಿಕೆ10 : ಹೊಳೆಯಲ್ಲಿ ತಲೆ ಕೂದಲು ಕತ್ತರಿಸುತ್ತಿರುವ ಅಸ್ಸಾಂ ಕಾರ್ಮಿಕರು.  | Kannada Prabha

ಸಾರಾಂಶ

ಕಾವೇರಿ ನದಿ ನೀರು ಹರಿಯುವ ಭಾಗಮಂಡಲ, ಸಿದ್ದಾಪುರ, ಕುಶಾಲನಗರ ಸೇರಿದಂತೆ ಹಲವು ಕಡೆಗಳಲ್ಲಿ ತ್ಯಾಜ್ಯ ನೀರು ಕಾವೇರಿಗೆ ಸೇರುತ್ತಿರುವ ಪರಿಣಾಮ ಕಾವೇರಿ ನದಿ ನೀರಿನ ಗುಣಮಟ್ಟ ತೀರಾ ಕಳಪೆಯಾಗಿದೆ. ಲಕ್ಷಾಂತರ ಜೀವಗಳಿಗೆ ಕುಡಿಯಲು ನೀರು ಕೊಡುವ ಕಾವೇರಿಗೆ ತವರಿನಲ್ಲಿ ತ್ಯಾಜ್ಯ ಹಾಗೂ ಚರಂಡಿ ನೀರು ನಿರಂತರವಾಗಿ ಹರಿಯುವುದರಿಂದ ಜಲ ಮಲಿನವಾಗುತ್ತಿದೆ.

ವಿಘ್ನೇಶ್‌ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಾವೇರಿ ನದಿ ಉಗಮಿಸುವ ಕೊಡಗು ಜಿಲ್ಲೆಯಲ್ಲೇ ಕಾವೇರಿ ನದಿ ನೀರು ಮಲಿನಗೊಳ್ಳುತ್ತಿದೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ನದಿಗೆ ನೇರವಾಗಿ ಕೊಳಚೆ ನೀರನ್ನು ಬಿಡುವುದು ಸಾಮಾನ್ಯವಾಗಿದೆ. ಆದರೆ ಈ ವರೆಗೂ ಯಾವುದೇ ಕಠಿಣ ಕ್ರಮ ಜಾರಿಯಾಗಿಲ್ಲ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯದ ನದಿಗಳ ನೀರಿನ ಗುಣಮಟ್ಟದ ಕುರಿತಂತೆ ಕಾಲಕಾಲಕ್ಕೆ ಪರೀಕ್ಷೆ ನಡೆಸುತ್ತದೆ. ಕಾವೇರಿ ಸೇರಿದಂತೆ ರಾಜ್ಯದ ಸುಮಾರು 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ಈಗಾಗಲೇ ವರದಿ ನೀಡಿದೆ. ಹೀಗಿದ್ದರೂ ಕಾವೇರಿ ತವರಲ್ಲಿ ನದಿ ನೀರು ಕಲುಷಿತಗೊಳ್ಳುತ್ತಿರುವುದು ಮಾತ್ರ ತಪ್ಪುತ್ತಿಲ್ಲ.

ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿಯಲ್ಲಿ ಕಾವೇರಿ ನದಿಯಲ್ಲಿ ತ್ಯಾಜ್ಯ ನೀರು ಸರಾಗವಾಗಿ ಹರಿಯುತ್ತಿದ್ದು, ಕಾವೇರಿ ನದಿ ನೀರು ಮತ್ತಷ್ಟು ಕಲುಷಿತವಾಗಲು ಕಾರಣವಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದವರು ಯಾವುದೇ ಕ್ರಮ ಕೈಗೊಂಡಿಲ್ಲ.

ಸ್ಥಳೀಯ ಹೊಟೇಲ್, ಮೀನಿನ ತ್ಯಾಜ್ಯಗಳು ಸೇರಿದಂತೆ ಇತರೆ ಕೊಳಚೆ ನೀರು ಕಾವೇರಿಯ ಒಡಲು ಸೇರುತ್ತಿದೆ. ಈ ಬಗ್ಗೆ ಕ್ರಮ ಸೂಕ್ತ ತೆಗೆದುಕೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಕಾವೇರಿ ನದಿ ನೀರು ಹರಿಯುವ ಭಾಗಮಂಡಲ, ಸಿದ್ದಾಪುರ, ಕುಶಾಲನಗರ ಸೇರಿದಂತೆ ಹಲವು ಕಡೆಗಳಲ್ಲಿ ತ್ಯಾಜ್ಯ ನೀರು ಕಾವೇರಿಗೆ ಸೇರುತ್ತಿರುವ ಪರಿಣಾಮ ಕಾವೇರಿ ನದಿ ನೀರಿನ ಗುಣಮಟ್ಟ ತೀರಾ ಕಳಪೆಯಾಗಿದೆ.

ಲಕ್ಷಾಂತರ ಜೀವಗಳಿಗೆ ಕುಡಿಯಲು ನೀರು ಕೊಡುವ ಕಾವೇರಿಗೆ ತವರಿನಲ್ಲಿ ತ್ಯಾಜ್ಯ ಹಾಗೂ ಚರಂಡಿ ನೀರು ನಿರಂತರವಾಗಿ ಹರಿಯುವುದರಿಂದ ಜಲ ಮಲಿನವಾಗುತ್ತಿದೆ. ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಜೀವನದಿಯಾಗಿರುವ ಕಾವೇರಿಯನ್ನು ಜನರು ಭಕ್ತಿಯಿಂದ ಕಾಣುತ್ತಾರೆ. ಆದರೆ, ಕೆಲವರ ನಿರ್ಲಕ್ಷ್ಯದಿಂದ ತ್ಯಾಜ್ಯ, ಚರಂಡಿ ನೀರು ಸೇರಿ ಬಳಸಲು ಸಾಧ್ಯವಾಗದೆ ವಾಸನೆ ಬರುತ್ತಿದೆ. ನೀರನ್ನು ಅನಿವಾರ್ಯವಾಗಿ ಬಳಸುತ್ತಿರುವ ಜನರು, ಪ್ರಾಣಿ ಪಕ್ಷಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಮೂಲ ಕಾವೇರಿಯಿಂದ ಜಿಲ್ಲೆಯ ಹಲವು ಪಂಚಾಯಿತಿಗಳ ವ್ಯಾಪ್ತಿಯ ಕಲುಷಿತ ನೀರು ನೇರವಾಗಿ ನದಿಗೆ ಸೇರುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಪಟ್ಟಣದ ಬಹುತೇಕ ತ್ಯಾಜ್ಯ ನದಿ ಸೇರುತ್ತಿರುವುದರಿಂದ ಜಲಚರಗಳು ನಾಶ ಹೊಂದುವುದರೊಂದಿಗೆ ನದಿ ನೀರಿನ ಗುಣಮಟ್ಟ ಬಳಕೆಗೆ ಯೋಗ್ಯವಲ್ಲ ಎನ್ನುವ ಸ್ಥಿತಿಗೆ ತಲುಪಿರುವುದು ಆತಂಕಕಾರಿಯಾಗಿದೆ.

ಕಾವೇರಿ ನದಿ ತವರು ಜಿಲ್ಲೆ ಕೊಡಗಿನಲ್ಲೇ ಕಲುಷಿತಗೊಳ್ಳುವುದಕ್ಕೆ ಕಾರಣವಾಗುತ್ತಿದೆ.

ನೀರಿಗೆ ರಾಸಾಯನಿಕ: ಕಾಫಿ ಪಲ್ಪಿಂಗ್ ಕೊಳಚೆ ನೀರು ಮತ್ತು ಶುಂಠಿ ತೊಳೆದ ರಾಸಾಯನ ಮಿಶ್ರಿತ ನೀರು ಸೇರುವುದರಿಂದ ಕಾವೇರಿ ನೀರು ಮತ್ತಷ್ಟು ಮಲಿನಗೊಳ್ಳುತ್ತಿದೆ.

ಜಿಲ್ಲೆಯಲ್ಲಿ ನದಿ ತಟದ ಸರ್ವೇ ಕಾರ್ಯ ನಡೆಸಿ ನದಿ ಗಡಿ ಗುರುತು ಮಾಡುವುದು, ನದಿ ತಟದಲ್ಲಿರುವ ಅಕ್ರಮ ಕಟ್ಟಡಗಳ ತೆರವುಗೊಳಿಸುವುದು ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವುದು, ಗ್ರಾಮ, ಪಟ್ಟಣ ಪಂಚಾಯಿತಿ​ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಲುಷಿತ ತ್ಯಾಜ್ಯಗಳನ್ನು ನದಿಗೆ ನೇರವಾಗಿ ಹರಿಯದಂತೆ ವೈಜ್ಞಾನಿಕ ರೀತಿಯಲ್ಲಿ ಕಾರ್ಯಯೋಜನೆ ರೂಪಿಸಬೇಕು. ಇದರಿಂದ ಕಾವೇರಿ ಕಲುಷಿತವಾಗುವುದನ್ನು ತಡೆಯಬಹುದು ಎಂಬುದು ಪ್ರಮುಖರ ಅಭಿಮತ.

...............................ಅಸ್ಸಾಂ ಕಾರ್ಮಿಕರಿಗೆ ದಂಡ!

ನೀರು ಮಲಿನ ಮಾಡುತ್ತಿದ್ದ ಅಸ್ಸಾಂ ಕಾರ್ಮಿಕರಿಗೆ ಗ್ರಾಮ ಪಂಚಾಯಿತಿಯಿಂದ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಲಾಗಿದೆ.

ಮಡಿಕೇರಿ ತಾಲೂಕಿನ ಕಕ್ಕಬೆ ಪಟ್ಟಣದ ಹತ್ತಿರ ಮುಖ್ಯರಸ್ತೆಯ ಹೊಳೆಯಲ್ಲಿ ಅಸ್ಸಾಂ ವಲಸಿಗರು 8 ಜನರು ಸ್ಥಾನ ಮಾಡುವುದು, ಬಟ್ಟೆ ಒಗೆಯುತ್ತಿರುವುದು, ಮೀನು ಹಿಡಿಯುವುದು, ಪಾತ್ರೆ ತೊಳೆಯುವುದು, ಅಲ್ಲದೆ ತಲೆ ಕೂದಲುಗಳನ್ನು ಕತ್ತರಿಸಿ ಹೊಳೆಗೆ ಹಾಕುತ್ತಿರುವುದು ಕಂಡುಬಂದಿದೆ.

ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅವರನ್ನು ಪಂಚಾಯಿತಿಗೆ ಕರೆತಂದು ಒಬ್ಬರಿಗೆ ತಲಾ 1000 ರು.ಗಳನ್ನು ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ದಂಡ ವಿಧಿಸಿದೆ.

ಪಂಚಾಯಿತಿಯ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಜಿಲ್ಲೆಯಾದ್ಯಂತ ಕಾವೇರಿ ನದಿ ಹರಿದು ಹೋಗುವ ಪ್ರದೇಶದ ಎಲ್ಲಾ ಪಂಚಾಯಿತಿಗಳಲ್ಲಿ ಇಂತಹ ಕ್ರಮ ತೆಗೆದುಕೊಳ್ಳಬೇಕೆಂಬ ಆಗ್ರಹ ಕೇಳಿ ಬಂದಿದೆ. ................................

ಈಗಲೇ ನದಿಗೆ ಪಂಪ್ ಸೆಟ್!

ಇದೀಗ ಕಾಫಿ ಕೊಯ್ಲು ಸಮಯವಾಗಿರುವುದರಿಂದ ಕೆಲವು ಕಡೆಗಳಲ್ಲಿ ನದಿ ಹಾಗೂ ಹೊಳೆಗೆ ಮೋಟಾರ್ ಪಂಪ್ ಸೆಟ್ ಗಳನ್ನು ಈಗಲೇ ಅಳವಡಿಸಿ ನೀರು ಎತ್ತಲಾಗುತ್ತಿದೆ. ಕಾವೇರಿ ನದಿ ನೀರು ಹರಿದು ಹೋಗುವ ಅಲ್ಲಲ್ಲಿ ಅಕ್ರಮ ಪಂಪ್ ಸೆಟ್ ಗಳಿದ್ದು, ಈ ಬಗ್ಗೆ ಸಂಬಂಧಿಸಿದವರು ಕ್ರಮ ತೆಗೆದುಕೊಳ್ಳಬೇಕಿದೆ. ಇಲ್ಲವಾದಲ್ಲಿ ಬೇಸಗೆ ಅವಧಿಯಲ್ಲಿ ನೀರಿನ ಪ್ರಮಾಣ ತೀವ್ರ ಇಳಿಮುಖವಾಗಿದ್ದು, ನೀರಿಗೆ ತೀವ್ರ ಸಮಸ್ಯೆ ಉಂಟಾಗಲಿದೆ. ಕಾಫಿ ಪಲ್ಪಿಂಗ್‌ ತ್ಯಾಜ್ಯವನ್ನು ಅದೇ ನೀರಿಗೆ ಬಿಡುತ್ತಿರುವುದರಿಂದ ನದಿ ಮೂಲ ತೀವ್ರವಾಗಿ ಕಲುಷಿತವಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದವರು ಎಚ್ಚರ ವಹಿಸಿ ಕ್ರಮ ತೆಗೆದುಕೊಳ್ಳಬೇಕಿದೆ.

........................

ಕಾವೇರಿ ನದಿ ಉಗಮಿಸುವ ಸ್ಥಳದಲ್ಲೇ ನೀರು ಮಲಿನವಾಗುತ್ತಿದೆ. ಈಗಾಗಲೇ ನೀರು ಕಲುಷಿತಗೊಂಡಿದೆ. ಅಸ್ಸಾಂ ಕಾರ್ಮಿಕರು ನೀರನ್ನು ಕಲುಷಿತ ಮಾಡುತ್ತಿದ್ದರು. ಈ ಸಂದರ್ಭ ಪಂಚಾಯಿತಿಯಿಂದ ಅವರಿಗೆ ದಂಡ ವಿಧಿಸಿ ನೀರು ಕಲುಷಿತ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.

-ಕಲಿಯಂಡ ಸಂಪನ್ ಅಯ್ಯಪ್ಪ, ಮಾಜಿ ಅಧ್ಯಕ್ಷ, ಕುಂಜಿಲ-ಕಕ್ಕಬ್ಬೆ ಗ್ರಾ.ಪಂ.

...........................

ಕುಶಾಲನಗರ, ನೆಲ್ಯಹುದಿಕೇರಿ ಸೇರಿದಂತೆ ಕಾವೇರಿ ನದಿ ಹರಿದು ಹೋಗುವ ಹಲವು ಕಡೆಗಳಲ್ಲಿ ಕಾವೇರಿ ನದಿ ನೀರು ಗಣನೀಯ ಪ್ರಮಾಣದಲ್ಲಿ ಮಲಿನವಾಗುತ್ತಿದೆ. ಈ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಕಾವೇರಿ ನದಿ ನೀರು ಸ್ವಚ್ಛತೆ ಹಾಗೂ ಸಂರಕ್ಷಣೆಗೆ ಸರ್ಕಾರ ಬಜೆಟ್‌ನಲ್ಲಿ ಯೋಜನೆ ರೂಪಿಸಬೇಕು.

-ಚಂದ್ರಶೇಖರ್ ಹೇರೂರು, ಬಿಜೆಪಿ ಯುವ ಮುಖಂಡ, ಕುಶಾಲನಗರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಟ್ಟಿಗೆಹಾರ ಚರ್ಚ್ ವ್ಯಾಪ್ತಿಯಲ್ಲಿ ಕ್ರಿಸ್ಮಸ್ ಜಾಗೃತಿ ಆರಂಭ
ಮಾಗಿ ಕಾಲದ ಕಾಳು, ಗೆಡ್ಡೆ ಗೆಣಸುಗಳು ನಮ್ಮ ಅನ್ನದ ತಟ್ಟೆಗೆ ಬರಲಿ