ಸಂಸ್ಕೃತ ಭಾಷೆಗೆ ಭಾರತೀಯರಿಂದಲೇ ತಿರಸ್ಕಾರ: ವಿಪ ಮಾಜಿ ಸದಸ್ಯ ಅರುಣ ಶಹಾಪುರ ಕಳವಳ

KannadaprabhaNewsNetwork | Updated : Dec 15 2023, 01:32 PM IST

ಸಾರಾಂಶ

ಚೈನಾ ದೇಶದಲ್ಲೂ ಪುರಾತನ ಸಂಸ್ಕೃತ ಭಾಷೆ ಬಳಕೆಯಲ್ಲಿದ್ದು, ಭಾರತೀಯರೇ ತಾತ್ಸಾರ ಮಾಡುತ್ತಿರುವುದಕ್ಕೆ ಎಂಎಲ್‌ಸಿ ಅರುಣ್ ಶಹಾಪುರ ಕಳವಳ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸಿಂದಗಿ

ಸಂಸ್ಕೃತ ಭಾಷೆ ಅತ್ಯಂತ ಪುರಾತನ ಭಾಷೆ. ಚೈನಾ ದೇಶದಲ್ಲೂ ಸಹ ಸಂಸ್ಕೃತ ಬಳಕೆಯಲ್ಲಿರುವುದು ಭಾರತದ ಹೆಮ್ಮೆಯ ಸಂಗತಿ. ಆದರೆ ನಮ್ಮದೇ ಆದ ಸಂಸ್ಕೃತ ಭಾಷೆಯನ್ನು ಭಾರತೀಯರೇ ಪ್ರಚಾರ, ಪ್ರಾಸಾರ ಮಾಡದೆ ದೂರ ಮಾಡಿರುವುದು ವಿಷಾದನೀಯ ಸಂಗತಿ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪುರ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀ ಸಾತವಿರೇಶ್ವರ ಸಭಾಭವನದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಮತ್ತು ಶ್ರೀ ಪದ್ಮರಾಜ ಸಂಸ್ಕೃತ ವೇದ ಪಾಠಶಾಲೆ ಇವರ ಸಹಯೋಗದಲ್ಲಿ ಗುರುವಾರ 10 ದಿನಗಳ ಕಾಲ ಆಯೋಜಿಸಿರುವ ಸಂಸ್ಕೃತ ಪಾಠಶಾಲಾ ಶಿಕ್ಷಕರಿಗೆ ಪುನಶ್ಚೇತನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಸಂಸ್ಕೃತ ಭಾಷೆ ಭಾರತೀಯ ಸಂಸ್ಕೃತಿ, ಪರಂಪರೆಯ ಸಂಕೇತವಾಗಿದೆ. ಈ ಭಾಷೆ ನಮ್ಮ ಸಮಾಜವನ್ನು ಹಲವು ವರ್ಷಗಳಿಂದ ಶ್ರೀಮಂತಗೊಳಿಸುತ್ತಾ ಬಂದಿದೆ. ಇಂದಿನ ಮತ್ತು ಮುಂದಿನ ಪೀಳಿಗೆಗೆ ಈ ಭಾಷೆಯ ಮಹತ್ವ ತಿಳಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದರು.

ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದ ಬಿಎಲ್ ಡಿ ಇ ಸಂಸ್ಥೆಯ ಆಯುರ್ವೇದ ಕಾಲೇಜು ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ಮಾತನಾಡಿ, ಸಂಸ್ಕೃತ ಭಾಷೆಯ ಬೆಳವಣಿಗೆಗೆ ಸರ್ಕಾರಗಳು ಹೆಚ್ಚು ಮಹತ್ವ ನೀಡಿ ಇದರ ವ್ಯಾಪ್ತಿಯನ್ನು ವಿಶಾಲ ಮಾಡಬೇಕು. ಪ್ರಾಥಮಿಕ ಹಂತದಿಂದ ಇದರ ಮಹತ್ವ ಮಕ್ಕಳಿಗೆ ಅರಿವು ನೀಡುವಂತಾಗಬೇಕು ಎಂದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಶಿಕ್ಷಣ ನಿರ್ದೆಶನಾಲಯದ ನಿರ್ದೇಶಕ ಪ್ರೊ.ಜಿ. ಪಾಲಯ್ಯ ಹಾಗೂ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ಸಹಾಯಕ ನೀರ್ದೆಶಕ ಪ್ರೊ.ಮಲ್ಲನಗೌಡ ಎಸ್. ಮಾತನಾಡಿ, 10 ದಿನಗಳ ಕಾಲ ನಡೆದ ಪುನಶ್ಚೇತನ ಶಿಬಿರ ಸಂಸ್ಕೃತ ಪಾಠಶಾಲಾ ಶಿಕ್ಷಕರಿಗೆ ಅತ್ಯಂತ ನೆರವಾಗಿದೆ. ಸಂಸ್ಕೃತ ಭಾಷೆಯ ಅಧ್ಯಯನಂದಿದ ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶಗಳು ಮೂಡಿಬರಲಿವೆ ಎಂದರು.

ಸಮ್ಮುಖ ವಹಿಸಿದ್ದ ಕನ್ನೋಳ್ಳಿ ಹಿರೇಮಠದ ಶ್ರೀ ಸಿದ್ದಲಿಂಗ ಶೀವಾಚಾರ್ಯರು ಆಶೀರ್ವಚನ ನೀಡಿದರು. ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ಅಶೋಕ ವಾರದ, ಜಗದೀಶ ಕರೆಪ್ಪನವರ, ಬಿ.ಬಿ. ಆರ್ಯರ್, ಚನ್ನಬಸವರಾಜ ಕತ್ತಿ, ವಿರೇಶ ಸ್ತ್ರಾವರಮಠ ಮತ್ತು ಬೆಳಗಾವಿ, ಧಾರವಾಡ, ಮೈಸೂರು ವಲಯಗಳ ಸುಮಾರು 15 ಜಿಲ್ಲೆಗಳ ಅನುದಾನಿತ ಮತ್ತು ಅನುದಾನ ರಹಿತ ಸಂಸ್ಕೃತ ಪಾಠಶಾಲೆಯ ಸುಮಾರು 250ಕ್ಕೂ ಶಿಕ್ಷಕರು ಭಾಗವಹಿಸಿದ್ದರು. ಶಿಕ್ಷಕಿ ಸುವರ್ಣ.ವೈ ನಿರೂಪಿಸಿದರು, ಶಿಕ್ಷಕ ನರಂಸಿವ ಭಟ್ಟ ಸ್ವಾಗತಿಸಿದರು, ಶಿಕ್ಷಕರ ಕಲ್ಮೇಶ ನಾಯಕ ವಂದಿಸಿದರು.

------

ಸಂಸ್ಕೃತ ಭಾಷೆಯಲ್ಲಿ ಸತ್ಯ, ಜ್ಞಾನ ಮತ್ತು ವಿಜ್ಞಾನವನ್ನ ಒಳಗೊಂಡಿರುವ ಅತ್ಯಂತ ಪ್ರಕಾರತೆಯ ಶಕ್ತಿ ಇದೆ. ಸಂಸ್ಕೃತ ಭಾಷೆಯ ಅಧ್ಯಯನದಿಂದ ವಿವಿಧ ಭಾಷೆಗಳ ಕಲಿಕೆಯು ಸಹ ಅತ್ಯಂತ ಸುಲಭವಾಗಿ ಅರ್ಥೈಸಿಕೊಳ್ಳಬಹುದು ಸರ್ಕಾರಗಳು ಸಂಸ್ಕೃತ ಭಾಷೆಯ ಬೆಳವಣಿಗೆಗೆ ಮತ್ತು ಪ್ರಚಾರಕ್ಕೆ ಅತ್ಯಂತ ಆಕರ್ಷಣೀಯ ಯೋಜನೆಗಳನ್ನ ರೂಪಿಸಿ ಇದರ ಪೋಷಣೆ ಮಾಡಿದಲ್ಲಿ ಮಾತ್ರ ಈ ಭಾಷೆಯ ಅಸ್ತಿತ್ವ ಉಳಿಯುತ್ತದೆ.

- ಅರುಣ ಶಹಾಪುರ ವಿಧಾನ ಪರಿಷತ್ ಮಾಜಿ ಸದಸ್ಯ

Share this article