ಕನ್ನಡಪ್ರಭ ವಾರ್ತೆ ಮಂಗಳೂರುನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಧರ್ಮ ನಿಂದನೆ ಮಾಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಶಾಸಕ ವೇದವ್ಯಾಸ ಕಾಮತ್ ಶಾಸಕತ್ವದ ಘನತೆಗೆ ವಿರುದ್ಧವಾಗಿ ನಡೆದುಕೊಂಡಿದ್ದು, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅವರ ಶಾಸಕತ್ವ ಅನರ್ಹಗೊಳಿಸುವ ನಿಟ್ಟಿನಲ್ಲಿ ವಿಧಾನಸಭೆ ಹಕ್ಕುಬಾಧ್ಯತಾ ಸಮಿತಿ ತನಿಖೆ ನಡೆಸುವಂತೆ ಸ್ಪೀಕರ್‌ಗೆ ಮನವಿ ಸಲ್ಲಿಸಲಾಗುವುದು. ಅಲ್ಲದೆ, ಶಾಸಕರ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಎಂಎಲ್ಸಿ ಐವನ್ ಡಿಸೋಜ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಚುನಾಯಿತ ಜನಪ್ರತಿನಿಧಿಯಾಗಿ ಶಾಲೆ ಕಚೇರಿಯೊಳಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಬೇಕಿತ್ತು. ಅದು ಬಿಟ್ಟು ಶಾಲಾ ಶಿಕ್ಷಕ ವರ್ಗದವರನ್ನು ಬೀದಿಯಲ್ಲಿ ನಿಲ್ಲಿಸಿ, ಬೆದರಿಸಿ ಅವಹೇಳನಕಾರಿ ಮಾತನಾಡಿದ್ದಾರೆ. ಬೀದಿಯಲ್ಲಿ ನಿಂತು ಗಲಾಟೆ ಮಾಡಿಸಿ ವಿದ್ಯಾದೇಗುಲಕ್ಕೆ ಅವಮಾನ ಮಾಡಿದ್ದಾರೆ. ಮಾತ್ರವಲ್ಲದೆ, ಅಪ್ರಾಪ್ತ ವಿದ್ಯಾರ್ಥಿಗಳನ್ನು ಕರೆಸಿ, ಜೈಕಾರ ಹಾಕುವಂತೆ ಒತ್ತಾಯಿಸಿ ಮಕ್ಕಳ ಹಕ್ಕುಗಳ ಕಾಯ್ದೆ, ಮಾನವ ಹಕ್ಕುಗಳ ಕಾಯ್ದೆ ಉಲ್ಲಂಘಿಸಿದ್ದಾರೆ. ಧರ್ಮಗಳ ಮಧ್ಯೆ ಕಂದಕ ಸೃಷ್ಟಿ ಮಾಡಿದ್ದಾರೆ. ಇದರಿಂದ ಶಾಸಕತ್ವದ ಘನತೆಗೆ ಕುಂದುಂಟಾಗಿದೆ. ಅವರಿಗೆ ಶಾಸಕರಾಗಿ ಮುಂದುವರಿಯುವ ಯಾವ ಅರ್ಹತೆಯೂ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವಿಧಾನಸಭೆ ಸದಸ್ಯರು ಅನುಚಿತ ನಡವಳಿಕೆ ತೋರಿದರೆ ತನಿಖೆ ಮಾಡುವ ಅಧಿಕಾರ ಸ್ಪೀಕರ್‌ಗಿದೆ. ಪ್ರಕರಣದ ತನಿಖೆಯನ್ನು ಎಲ್ಲ ಪಕ್ಷಗಳ ಪ್ರಮುಖರನ್ನೊಳಗೊಂಡ ಹಕ್ಕು ಬಾಧ್ಯತಾ ಸಮಿತಿಗೆ ನೀಡಿ, ತನಿಖೆ ಮಾಡಿ ಸದಸ್ಯತ್ವ ವಜಾಗೊಳಿಸುವ ಅಧಿಕಾರವಿದೆ. ಈ ಕುರಿತು ಸ್ಪೀಕರ್ ಮಾತ್ರವಲ್ಲದೆ, ಸಿಎಂಗೂ ಮನವಿ ನೀಡುತ್ತೇವೆ. ಮಾತ್ರವಲ್ಲದೆ, ಶಾಸಕರ ವಿರುದ್ಧ ಐಪಿಸಿ ಸೆ. ೨೯೫ (ಎ) ಪ್ರಕಾರ ದೂರು ದಾಖಲು ಮಾಡಲಿದ್ದೇವೆ ಎಂದರು.
ಕಾಂಗ್ರೆಸ್ ಮುಖಂಡರಾದ ಜೆ.ಆರ್. ಲೋಬೊ, ಇಬ್ರಾಹಿಂ ಕೋಡಿಜಾಲ್, ಪಿ.ವಿ. ಮೋಹನ್, ಎಂ.ಜಿ. ಹೆಗಡೆ, ಗಣೇಶ್ ಪೂಜಾರಿ, ಫರ್ಝಾನಾ, ಸಲೀಂ, ಸದಾಶಿವ ಉಳ್ಳಾಲ್, ಅಪ್ಪಿ, ಎ.ಸಿ. ವಿನಯರಾಜ್ ಮತ್ತಿತರರಿದ್ದರು.ಅಧಿಕಾರಿಗಳ ಒತ್ತಡದಿಂದ ಆದೇಶಪತ್ರ: ಲೋಬೊ
ಶಾಸಕರ ಜತೆ ಶಾಲೆಗೆ ಬಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಒತ್ತಡ ಹಾಕಿ, ಅವರೇ ಲೆಟರ್ ಡ್ರಾಫ್ಟ್ ಮಾಡಿಕೊಟ್ಟು ಪ್ರಾಂಶುಪಾಲಕ ಸೈನ್ ಹಾಕಿಸಿದ್ದಾರೆ. ಈ ದಬ್ಬಾಳಿಕೆ ತನಿಖೆಯೂ ಆಗಬೇಕು. ಮಕ್ಕಳ ಹಕ್ಕು ಉಲ್ಲಂಘನೆ ಮಾಡಿದ ಶಾಸಕರ ತನಿಖೆಯೂ ಆಗಬೇಕು, ತಪ್ಪಾಗಿದ್ದರೆ ಸೂಕ್ತ ಆಗಬೇಕು ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ಒತ್ತಾಯಿಸಿದರು. ಈ ಪ್ರಕರಣದಲ್ಲಿ ಇಬ್ಬರೂ ಶಾಸಕರಿಂದ ನಿಯಮ ಉಲ್ಲಂಘನೆಯಾಗಿದೆ. ಕಾನೂನು ಚೌಕಟ್ಟಲ್ಲಿ ಕೆಲಸ ಮಾಡಿ, ಇಲ್ಲದಿದ್ದರೆ ನಿಮ್ಮನ್ನು ಹೇಗೆ ಎದುರಿಸಬೇಕು ಅಂತ ನಮಗೆ ಗೊತ್ತಿದೆ ಎಂದು ಎಚ್ಚರಿಸಿದರು.