ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ನೈರುತ್ಯ ಪದವೀಧರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿ ತಮ್ಮ ಗಟ್ಟಿ ಧ್ವನಿಯ ಮೂಲಕ ಪದವೀಧರರ ಮತ್ತು ನೌಕರರ ಸಮಸ್ಯೆ ಪರಿಹರಿಸುವಲ್ಲಿ ಬಹುಪಾಲು ಯಶಸ್ವಿಯಾಗಿ ಇದೇ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಲು ಆಕಾಂಕ್ಷಿ ಯಾಗಿದ್ದು ಹಿಂದಿನಂತೆಯೇ ಈ ಬಾರಿಯೂ ಆಶೀರ್ವದಿಸಬೇಕೆಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮನವಿ ಮಾಡಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈರುತ್ಯ ಪದವೀಧರ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಲು ಬಯಸಿದ್ದು ಈ ಸಂಬಂಧ ಮತಯಾಚನೆಗೆ ಈ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದರು. ಮೂಲತಃ ಕಾರ್ಮಿಕ ಕ್ಷೇತ್ರದ ಹೋರಾಟಗಾರರಾಗಿದ್ದ ತಾವು ಲೋಕಸಭೆ, ರಾಜ್ಯಸಭೆ, ವಿಧಾನ ಪರಿಷತ್ ಹಾಗೂ ವಿಧಾನಸಭೆ ಈ ನಾಲ್ಕು ಸದನಗಳಲ್ಲಿ ಮೂವರು ಪ್ರಧಾನ ಮಂತ್ರಿಗಳು, ಹಲವು ಮುಖ್ಯ ಮಂತ್ರಿಗಳೊಂದಿಗೆ ಕೆಲಸ ಮಾಡಿ ಅನುಭವಿ ಯಾಗಿರುವುದರಿಂದ ವಿಧಾನ ಪರಿಷತ್‌ನಲ್ಲಿ ಗಟ್ಟಿ ಧ್ವನಿಯಲ್ಲಿ ಶಕ್ತಿಮೀರಿ ಹೋರಾಟ ಮಾಡಿರುವುದಾಗಿ ಹೇಳಿದರು. ತಾವು ಆಯ್ಕೆಯಾದ ಪ್ರಾರಂಭದಲ್ಲಿ ನೂತನ ಪಿಂಚಣಿ ಯೋಜನೆ ಹಾಗೂ ಹಳೆ ಪಿಂಚಣಿ ಯೋಜನೆ ಬಗ್ಗೆ ಪರ ವಿರೋಧ ವಿದ್ದು ಹಳೆ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸಬೇಕೆಂಬ ನೌಕರರ ಬೇಡಿಕೆಗೆ ಸದನದಲ್ಲಿ ಪರಿಣಾಮಕಾರಿಯಾಗಿ ಧ್ವನಿ ಎತ್ತುವ ಮೂಲಕ ಹಳೆ ಪಿಂಚಣಿ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಶ್ರಮಿಸಿದ್ದೇನೆಂದು ತಿಳಿಸಿದರು. 2005 ರಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಗೊಂಡು 2006ರ ನಂತರ ನೇಮಕಾತಿ ಆದೇಶ ಪಡೆದ 11,336 ಮಂದಿ ನೌಕರರಿಗೆ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರಿಗೆ ಉದ್ಯೋಗ ಭದ್ರತೆಯೊಂದಿಗೆ ಹಳೆ ಪಿಂಚಣಿ ಯೋಜನೆ ಅನ್ವಯವಾಗುವಂತೆ ಹೋರಾಟ ನಡೆಸಿದ್ದೆ ಎಂದು ಹೇಳಿದರು. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಕಾರ್ಮಿಕ ವಿರೋಧಿ ಕಾಯಿದೆ ಜಾರಿಗೆ ತಂದಾಗ ವಿಧಾನ ಪರಿಷತ್‌ನಲ್ಲಿ ಮಸೂದೆ ಅನುಮೋದನೆಯಾಗುವುದನ್ನು ತಡೆಹಿಡಿದ ಪ್ರಯತ್ನ ನಡೆಸಿ ಆಡಳಿತ ಪಕ್ಷದ ವಿರುದ್ಧ ಆಡಳಿತ ಪಕ್ಷದ ಸದಸ್ಯನಾಗಿ ಹೋರಾಟ ನಡೆಸಿದ ದೇಶದಲ್ಲೇ ಏಕೈಕ ವ್ಯಕ್ತಿ ಎಂದು ತಿಳಿಸಿದರು. ಪದವೀಧರ ವಿದ್ಯಾರ್ಥಿಗಳು ಪಡೆದ ಶೈಕ್ಷಣಿಕ ಸಾಲ ಮನ್ನಾ ಮಾಡಬೇಕೆಂದು ಹೋರಾಟದಲ್ಲಿ ಸಫಲವಾಗಿಲ್ಲ ಮುಂದೆಯೂ ಈ ಹೋರಾಟ ನಡೆಸುತ್ತೇನೆಂದು ಹೇಳಿದ ಅವರು, ತಾವು ಗೆದ್ದ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಮತ ಕೊಟ್ಟವರ ಋಣ ತೀರಿಸುವ ಕೆಲಸ ಮಾಡಿದ್ದೇನೆ ಎಂದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದು ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ವಿಶ್ವಾಸವಿದ್ದು ಬಹುತೇಕ ಖಚಿತವಾಗಿದೆ. ಈ ಕ್ಷೇತ್ರದ ಮತದಾರರು ಮತ್ತೊಮ್ಮೆ ಆಶೀರ್ವದಿಸುವ ವಿಶ್ವಾಸವಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್ ಇದ್ದರು.
7 ಕೆಸಿಕೆಎಂ 2ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್ ಇದ್ದರು.