ಸತತ ಬೆಲೆ ಕುಸಿತ: ದ್ರಾಕ್ಷಿ ಬೆಳೆಗಾರರು ಕಂಗಾಲು

KannadaprabhaNewsNetwork | Published : May 28, 2024 1:03 AM

ಸಾರಾಂಶ

ಕಳೆದ ಮೂರು ವರ್ಷಗಳಿಂದ ದ್ರಾಕ್ಷಿ ಬೆಳೆಗಾರರಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆಯದೇ ನಷ್ಟ ಅನುಭವಿಸಿ ಕಂಗಾಲಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಆಳಂದ

ಕಳೆದ ಮೂರು ವರ್ಷಗಳಿಂದ ದ್ರಾಕ್ಷಿ ಬೆಳೆಗಾರರಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆಯದೇ ನಷ್ಟ ಅನುಭವಿಸಿ ಕಂಗಾಲಾಗಿದ್ದಾರೆ.

ಬೆಳೆಗೆ ದುಬಾರಿ ಬೆಲೆಯ ಕ್ರಿಮಿನಾಷಕ ಔಷಧಿ ಸಿಂಪರಣೆ ಮತ್ತು ಗೊಬ್ಬರದ ಬೆಲೆ ಹೆಚ್ಚಳ. ಕಾರ್ಮಿಕರ ದುಬಾರಿ ಕೂಲಿ ನಡುವೆ ಕಷ್ಟಪಟ್ಟು ಬೆಳೆದ ದ್ರಾಕ್ಷಿ ಹಾಗೂ ಕೆಲವರು ಮನುಕಿ ತಯಾರಿಸಿ ಮಾರುಕಟ್ಟೆಗೆ ಸಾಗಿದರೆ ಅಲ್ಲಿಯೂ ಸಹ ಸೂಕ್ತ ಬೆಲೆ ಕೈ ಸೇರದೆ ಸತತ ನಷ್ಟವನ್ನು ಅನುಭವಿಸುವಂತಾಗಿದೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ದ್ರಾಕ್ಷಿ ನಾಟಿಗೆ ಖರ್ಚು: ಒಮ್ಮೆ ದ್ರಾಕ್ಷಿ ಬೆಳೆ ನಾಟಿ ಮಾಡಲು ಎಕರೆ 4ರಿಂದ 5ಲಕ್ಷ ರುಪಾಯಿ ಖರ್ಚು ತಗಲುತ್ತದೆ. ಸುಮಾರು 15 ವರ್ಷದ ಬಹುವಾರ್ಷಿಕ ಬೆಳೆ ಇದಾಗಿದ್ದು, ಪ್ರತಿವರ್ಷ ನಿರ್ವಾಹಣೆ ಮೂಲಕ ಬೆಳೆ ಉತ್ಪಾದನೆ ಮಾಡಬಹುದಾಗಿದೆ.

ಒಂದು ಎಕರೆ ದ್ರಾಕ್ಷಿ ಬೆಳೆಗೆ 2ನೇ ವರ್ಷದಿಂದ ಮುಂದಿನ ಪ್ರತಿವರ್ಷ 2.50ಲಕ್ಷ ರುಪಾಯಿ ಖರ್ಚಾಗುತ್ತದೆ. ಎಕರೆ 3 ಟನ್ (30 ಕ್ವಿಂಟಲ್) ಇಳುವರಿ ಬಂದರೆ 2.50 ಲಕ್ಷ ರುಪಾಯಿ ಹಣ ಕೈಸೇರಿದರೆ ಮಾಡಿದ ಖರ್ಚಿಗೆ ಸರಿದ್ಯೋಗಿ ನಮಗೇ ಉಳಿತಾಯದ ಬದಲು ನಷ್ಟವಾಗುತ್ತಿದೆ ಎಂದು ಬೆಳೆಗಾರ ಮಂಜುನಾಥ ಎಸ್. ಬುಕ್ಕೆ ಹೇಳಿಕೊಂಡಿದ್ದಾರೆ.

40 ಎಕರೆ ಮನುಕಿ ರೈತರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿಶೇಷವಾಗಿ ಗುಣಮಟ್ಟದ ಒಣ ದ್ರಾಕ್ಷಿ 40 ಎಕರೆಯಲ್ಲಿ ಉತ್ಪಾಸಲಾಗುತ್ತಿದೆ. ಹಳ್ಳಿಸಲಗರ ಗ್ರಾಮದ ಸುಲ್ತಾನಪ್ಪ ವಾಗ್ದಾರಿ (4 ಎಕರೆ), ನಾಗರಾಜ ಚಿಂಚನಸೂರ (3), ಕೊಡಲಹಂಗರಗಾ ಲಕ್ಷ್ಮೀಕಾಂತ ಉದನೂರ (2), ಪಡಸಾವಳಿ ಗ್ರಾಮದ ದಸ್ತಗೀರ (2), ಆಳಂದ ರೈತ ಜಯಕುಮಾರ ವರನಾಳೆ (4), ಜಮಾಲ ಮಕಾಂದರ್ (4), ಮಂಜುನಾಥ ಎಸ್. ಬುಕ್ಕೆ (2), ಬಸವರಾಜ ಶೇರಖಾನೆ (2), ಖಜೂರಿ ಗ್ರಾಮದ ಖಂಡಾಳಕರ್ (4), ಕೇರೂರ ಸಿದ್ಧರಾಮ ಮೂಲಗೆ (2), ನೆಲ್ಲೂರ ಗ್ರಾಮದ ಶುಶಿಲಕುಮಾರ ಪಾಟೀಲ (2), ನಿಂಬಾಳದ ಗುರುಶಾಂತಪ್ಪ ಪಾಟೀಲ (6), ಎಕರೆ ದ್ರಾಕ್ಷಿ ಫಲವನ್ನು ಮಾರ್ಪಡಿಸಿ ಒಣ ದ್ರಾಕ್ಷಿ ಉತ್ಪಾದನೆ ಕೈಗೊಳ್ಳುತ್ತಾರೆ.

ಒಣದ್ರಾಕ್ಷಿ ಒಂದು ಕೆಜಿಗೆ ರೈತನಿಗೆ 100 ರುಪಾಯಿ ಬೆಲೆ ಬರುತ್ತದೆ. ಆದರೆ ಅಂಗಡಿಗಳಲ್ಲಿ ಇದೇ ಒಂದು ಕೆಜಿಗೆ 200 ರುಪಾಯಿ ಮಾರಾಟವಾಗುತ್ತದೆ. ಹೀಗಾಗಿ ದರ ಕೈಸೇರದ ಕಾರಣ ಖರ್ಚು ಹೆಚ್ಚುತ್ತಿದೆ. ದ್ರಾಕ್ಷಿ ಬೆಳೆ ಕೈಬಿಡುವ ನಿಧಾರಕ್ಕೆ ಬರುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಮಿತಿಮೀರಿದ ಪೂರೈಕೆ: ದ್ರಾಕ್ಷಿ ಹಣ್ಣುಗಳ ಮಿತಿಮೀರಿದ ಉತ್ಪಾದನೆ ಮತ್ತು ಪೂರೈಕೆ, ಮಾರುಕಟ್ಟೆಯಲ್ಲಿ ಬೇಡಿಕೆಗೂ ಮೀರಿ ಉಂಟಾಗಿರುವುದರಿಂದ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಅಸಮರ್ಪಕ ಹವಾಮಾನ ಮತ್ತು ಅತಿವೃಷ್ಟಿಯಿಂದ ದ್ರಾಕ್ಷಿ ಬೆಳೆಗಳಿಗೆ ಹಾನಿಯಾಗಿರುವುದು, ಫಲಗಳ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ ಬೆಲೆ ಇಳಿಯುತ್ತದೆ. ಈ ನಡುವೆ ರೈತರು ಬೆಳೆ ಉಳಿಸಿಕೊಳ್ಳಲು ಸಾಕಷ್ಟು ಖರ್ಚುನ್ನು ವ್ಯಹಿಸಿ ಅವರ ಜೇಬಿಗೆ ಕತ್ತರಿ ಬೀಳತೊಡಗಿದೆ.ಕೇಂದ್ರ ಸರ್ಕಾರವು ದೇಶದ ರೈತರ ಬೆಳೆಯುವ ಮನುಕಿ ಬೆಳೆಯನ್ನು ವಿದೇಶಕ್ಕೆ ರಪ್ತುಗೊಳಿಸಬೇಕು. ಲಾಭ ಕೈ ದೊರೆಯುವಂತೆ ವ್ಯವಸ್ಥೆ ಮಾಡಬೇಕು. ಈ ರೀತಿ ಬೆಲೆ ಬಾರದೆ ನಷ್ಟವಾದರೆ ಪರ್ಯಾಯ ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ಬೆಳೆದ ದ್ರಾಕ್ಷಿಗೆ ಸೂಕ್ತ ಬೆಲೆ ಬಂದರೆ ಸಾಕು. ಸರ್ಕಾರದ ಸಹಾಯಧನ ಸೌಲಭ್ಯಗಳು ಬೇಕಿಲ್ಲ. ಬೆಂಬಲ ಬೆಲೆ ಕೊಟ್ಟರೆ ಸಾಕು. 100 ರುಪಾಯಿ ಕೆಜಿಗೆ ಮಾರಾಟವಾಗುತ್ತಿದ್ದರಿಂದ ನಷ್ಟವಾಗುತ್ತಿದೆ. ರೈತರಿಗೆ ಆದಾಯ ತಂದುಕೊಡಲು 200 ರುಪಾಯಿ ಕನಿಷ್ಟ ಬೆಂಬಲ ಬೆಲೆಯನ್ನಾದರು ಸರ್ಕಾರ ನೀಡಬೇಕು.

- ಮಂಜುನಾಥ ಬುಕ್ಕೆ, ಮನುಕಿ ಬೆಳೆ ರೈತ ಆಳಂದ.

Share this article